ಏ.17- 21ರವರೆಗೆ ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜಿನ ವಜ್ರಮಹೋತ್ಸವ: ವಿವಿಧ ಕಾಯ೯ಕ್ರಮಗಳು

ಏ.17- 21ರವರೆಗೆ ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜಿನ ವಜ್ರಮಹೋತ್ಸವ: ವಿವಿಧ ಕಾಯ೯ಕ್ರಮಗಳು


ಮೂಡುಬಿದಿರೆ: ಮಣಿಪಾಲದ ಪದ್ಮಶ್ರೀ ಡಾ. ಟಿ.ಎಮ್.ಎ. ಪೈ, ಎಸ್.ಎನ್. ಮೂಡುಬಿದಿರೆ ಸೇರಿದಂತೆ ಅನೇಕ ಗಣ್ಯರ ನೇತೃತ್ವದಲ್ಲಿ 1965ರಲ್ಲಿ  ಆರಂಭವಾದ ಇಲ್ಲಿನ ಶ್ರೀ ಮಹಾವೀರ ಕಾಲೇಜು, ಇದೀಗ ಅರವತ್ತು ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿದೆ. ಈ ಸುದೀರ್ಘ ಶೈಕ್ಷಣಿಕ ಪಯಣದ ನೆನಪಿಗಾಗಿ ಕಾಲೇಜಿನ ಆವರಣದಲ್ಲಿ ಏಪ್ರಿಲ್ 17 ರಿಂದ 21 ರವರೆಗೆ ವೈಭವದ ವಜ್ರಮಹೋತ್ಸವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ, ಮಾಜಿ ಸಚಿವ  ಕೆ. ಅಭಯಚಂದ್ರ ಜೈನ್ ತಿಳಿಸಿದರು. 

ಅವರು ಮಂಗಳವಾರ ಸಮಾಜ ಮಂದಿರ ಸಭಾದಲ್ಲಿ ಪತ್ರಿಕಾಗೊಷ್ಟಿಯಲ್ಲಿ ನಡೆಸಿ ಮಾತನಾಡಿದರು.

ಕಾಲೇಜು 1965ರಲ್ಲಿ ಮೂಡುಬಿದಿರೆಯ ಸಮಾಜ ಮಂದಿರ ಸಭಾದಲ್ಲಿ ಆರಂಭವಾದ ಸವಿನೆನಪಿನಲ್ಲಿ, ಏಪ್ರಿಲ್ 17ರಂದು ಮಧ್ಯಾಹ್ನ 3.30ಕ್ಕೆ ಸಮಾಜ ಮಂದಿರದ ಆವರಣದಿಂದ ಕಾಲೇಜಿನವರೆಗೆ ಆಕರ್ಷಕ ಮೆರವಣಿಗೆ ನಡೆಯಲಿದೆ. ಈ ಮೆರವಣಿಗೆಯಲ್ಲಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರು, ಪ್ರಾಂಶುಪಾಲರು, ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು, ಅಭಿಮಾನಿಗಳು ಹಾಗೂ ಸಂಘ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಲಿದ್ದಾರೆ.

ವಜ್ರಮಹೋತ್ಸವ, ಸಂಸ್ಥಾಪಕರ ದಿನಾಚರಣೆ:

ಏಪ್ರಿಲ್ 18ರಂದು ಬೆಳಿಗ್ಗೆ 10.00 ಗಂಟೆಗೆ ವಜ್ರಮಹೋತ್ಸವದ ಉದ್ಘಾಟನೆ ಹಾಗೂ ಕಾಲೇಜಿನ ನೂತನ ವಿದ್ಯಾರ್ಥಿ ವಸತಿ ನಿಲಯದ ಉದ್ಘಾಟನೆಯನ್ನು ಆಂಧ್ರಪ್ರದೇಶದ ರಾಜ್ಯಪಾಲ ಎಸ್. ಅಬ್ದುಲ್ ನಜೀರ್ ನೆರವೇರಿಸಲಿದ್ದಾರೆ. ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ಅಧ್ಯಕ್ಷ ಡಾ. ಹೆಚ್.ಎಸ್. ಬಲ್ಲಾಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಾ. ಎಂ. ಮೋಹನ ಆಳ್ವ, ಕೆ. ಅಭಯಚಂದ್ರ ಜೈನ್, ರಾಜೇಶ್ ಚೌಟ, ಮನೋಹರ್ ಎಸ್. ಮೂಡುಬಿದಿರೆ ಹಾಗೂ ಕಿಶೋರ್ ಆಳ್ವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 2.00ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಂಜೆ 6.30ಕ್ಕೆ ಶಾರದಾ ಆರ್ಟ್ಸ್ ಕಲಾವಿದರಿಂದ 'ಕಥೆ ಎತ್ತೆಂದು' ತುಳು ನಾಟಕ ಪ್ರದರ್ಶನಗೊಳ್ಳಲಿದೆ.

ಏಪ್ರಿಲ್ 19ರಂದು ಬೆಳಗ್ಗೆ 10 ಗಂಟೆಗೆ ನಡೆಯುವ ಹಳೆ ವಿದ್ಯಾರ್ಥಿಗಳ ದಿನಾಚರಣೆಯನ್ನು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು. ಟಿ. ಖಾದರ್ ಉದ್ಘಾಟಿಸಲಿದ್ದಾರೆ. ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಲಿದ್ದು, ಸಾಧಕ ಹಳೆ ವಿದ್ಯಾರ್ಥಿಗಳಾದ ವಸುಂಧರಾ ದೊರೆಸ್ವಾಮಿ, ಆನಂದ್ ಎಂ. ಶೆಟ್ಟಿ, ಸಂಜಯ್ ಎ. ಭಟ್, ಸುಧಾಕರ್ ಕುಂದರ್, ಮೋಹನ್ ದಾಸ್ ಪಿ. ಶೆಟ್ಟಿ ಹಾಗೂ ಡಾ. ಸೀಮಾ ಮೆರ್ವಾಡೆ ಅತಿಥಿಗಳಾಗಿ ಆಗಮಿಸಲಿದ್ದಾರೆ. ಮಧ್ಯಾಹ್ನ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಂಜೆ 6.30ಕ್ಕೆ ನೃತ್ಯ ನಿಕೇತನ ಕೊಡವೂರು ತಂಡದಿಂದ "ನರಸಿಂಹ" ನೃತ್ಯ ರೂಪಕ ಪ್ರದರ್ಶನ ನಡೆಯಲಿದೆ.

ಏಪ್ರಿಲ್ 20ರಂದು ಬೆಳಗ್ಗೆ 10 ಗಂಟೆಗೆ ನಡೆಯುವ ವಿದ್ಯಾರ್ಥಿ ಕ್ಷೇಮಪಾಲನಾ ಸಂಘದ ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಪ್ರಭಾರ ವಿ.ಸಿ. ಡಾ. ಜಯರಾಜ್ ಅಮೀನ್ ಉದ್ಘಾಟಿಸಲಿದ್ದಾರೆ. ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಲಿದ್ದು, ಡಾ. ಕೆ. ಶ್ರೀಧರ್ ರಂಗನಾಥ ಪೈ, ಪಿ. ದೇವ್ ಕುಮಾರ್ ಕಂಬ್ಳೆ ಮತ್ತು ಸುಚರಿತ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಂಜೆ 6.30ಕ್ಕೆ ಕಾಪು ರಂಗತರಂಗ ಕಲಾವಿದರಿಂದ 'ಶೋಬಾಜಿ' ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.

ಏಪ್ರಿಲ್ 21ರಂದು ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರಕಾಲೇಜು ಸಾಂಸ್ಕೃತಿಕ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ನಟ ತಾರಾನಾಥ್ ಗಟ್ಟಿ ಕಾಪಿಕಾಡ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಹಿರಿಯ ಸಾಧಕ ವೆಂಕಟೇಶ ಬಂಗೇರ ಅವರನ್ನು ಸನ್ಮಾನಿಸಲಾಗುತ್ತದೆ. ಸಂಜೆ 4.30ಕ್ಕೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ. ರಾಧಾಕೃಷ್ಣ ವಹಿಸಲಿದ್ದು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಸಮಾರೋಪ ಭಾಷಣ ಮಾಡಲಿದ್ದಾರೆ. ಚಂದ್ರಶೇಖರ್, ರಾಜೇಂದ್ರ ಕುಮಾರ್, ಗಂಗಾಧರ ಪೂಜಾರಿ, ಪ್ರೇಮನಾಥ ಮಾರ್ಲ, ಮೊಹಮ್ಮದ್ ಹರ್ಷದ್ ಮತ್ತು ವಿಲೈಡ್ ಡಿಸೋಜ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅಭಯಚಂದ್ರ ಜೈನ್ ಮಾಹಿತಿ ನೀಡಿದರು.

ಆಡಳಿತ ಮಂಡಳಿ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ, ಪ್ರಾಂಶುಪಾಲ ಡಾ. ರಾಧಾಕೃಷ್ಣ, ಕೋಶಾಧಿಕಾರಿ, ರಾಮ್ ಪ್ರಸಾದ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾಗರಾಜ್, ಕಾರ್ಯಾಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ, ಸಮಾಜ ಮಂದಿರ ಸಭಾದ ಪ್ರಧಾನ ಕಾರ್ಯದರ್ಶಿ ಸುರೇಶ್ ಪ್ರಭು ಸುದ್ದಿಗೋಷ್ಠಿಯಲ್ಲಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article