ಮಂಗಳೂರಿನಲ್ಲಿ ಮಾಹೆ 33ನೇ ಘಟಿಕೋತ್ಸವ
ಮಾಹೆಯ ಕುಲಪತಿ ಡಾ. ಶರತ್ ಕೆ. ರಾವ್ ಮಾತನಾಡಿ, ‘ಶೈಕ್ಷಣಿಕ ಶಿಸ್ತು, ಅತ್ಯುತ್ತಮ ಸಂಶೋಧನೆ ಹಾಗೂ ನಾವೀನ್ಯತೆಯ ಬಲದೊಂದಿಗೆ ಮಾಹೆ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿದೆ. ಇಂದಿನ ವೃತ್ತಿಪರ ಜಗತ್ತಿನ ಸವಾಲುಗಳನ್ನು ಎದುರಿಸಿ, ಭವಿಷ್ಯದ ನಾಯಕರಾಗಿ ಹೊರಹೊಮ್ಮಲು ಅಗತ್ಯವಿರುವ ಜ್ಞಾನ ಮತ್ತು ಕೌಶಲಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ’ ಎಂದು ಹೇಳಿದರು.
ಮಾಹೆ ಮಂಗಳೂರು ಕ್ಯಾಂಪಸ್‌ನ ಸಹ-ಕುಲಪತಿ ಡಾ. ದಿಲೀಪ್ ನಾಯ್ಕ್ ಮಾತನಾಡಿ, ಘಟಿಕೋತ್ಸವ ಕೇವಲ ಶೈಕ್ಷಣಿಕ ಸಾಧನೆಗಳನ್ನು ಗುರುತಿಸುವುದಷ್ಟೇ ಅಲ್ಲ, ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಪಯಣದಲ್ಲಿ ಗಳಿಸಿದ ಸ್ನೇಹ, ಹಂಚಿಕೊಂಡ ಅನುಭವಗಳು ಮತ್ತು ಬಾಂಧವ್ಯಗಳನ್ನು ಸಂಭ್ರಮಿಸುವ ದಿನವಾಗಿದೆ. ನಮ್ಮ ಪದವೀಧರರು ಮುಂದಿನ ಹಂತಕ್ಕೆ ಹೆಜ್ಜೆ ಇಡುತ್ತಿರುವಾಗ, ಮಾಹೆಯ ಜಾಗತಿಕ ನೆಟ್‌ವರ್ಕ್‌ನ ಶಕ್ತಿ ಮತ್ತು ತಮ್ಮ ಮಾತೃ ಸಂಸ್ಥೆಯೊಂದಿಗಿನ ಬಾಂಧವ್ಯವನ್ನು ತಮ್ಮೊಂದಿಗೆ ಕೊಂಡೊಯ್ಯಲಿದ್ದಾರೆ ಎಂದರು.
ಮಾಹೆಯ ತಂತ್ರಜ್ಞಾನ ಮತ್ತು ವಿಜ್ಞಾನ ವಿಭಾಗದ ಸಹ-ಕುಲಪತಿ ಡಾ. ನಾರಾಯಣ ಸಭಾಹಿತ್, ಕುಲಸಚಿವ ಡಾ. ಗಿರಿಧರ್ ಕಿಣಿ ಹಾಗೂ ಮೌಲ್ಯಮಾಪನ ಕುಲಸಚಿವ ಡಾ. ವಿನೋದ್ ಥಾಮಸ್ ಉಪಸ್ಥಿತರಿದ್ದರು.
ಈ ವರ್ಷ ಪದವಿ, ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಕಾರ್ಯಕ್ರಮಗಳಲ್ಲಿ ಒಟ್ಟು 1,258 ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ. ಇವರಲ್ಲಿ 576 ವಿದ್ಯಾರ್ಥಿಗಳು ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದರು. ಶೈಕ್ಷಣಿಕವಾಗಿ ಅತ್ಯುತ್ತಮ ಸಾಧನೆ ಮಾಡಿದ ಮಣಿಪಾಲದ ಎಂ.ಸಿ.ಒ.ಡಿ.ಎಸ್. ವಿದ್ಯಾರ್ಥಿ ನವಲ್‌ಪ್ರೀತ್ ಸಿಂಗ್ ಭಮ್ರಾ, ಮಂಗಳೂರಿನ ಎಂ.ಸಿ.ಒ.ಡಿ.ಎಸ್. ವಿದ್ಯಾರ್ಥಿನಿ ಅದೀಬಾ ಅಲಿ ಮತ್ತು ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (2021-22ರ ಎಂಬಿಬಿಎಸ್ ಬ್ಯಾಚ್) ವಿದ್ಯಾರ್ಥಿನಿ ಚೈತ್ರಾ ಶೆಣೈ ಅವರಿಗೆ ಪ್ರತಿಷ್ಠಿತ ‘ಡಾ. ಟಿ.ಎಂ.ಎ. ಪೈ ಚಿನ್ನದ ಪದಕ’ ನೀಡಿ ಗೌರವಿಸಲಾಯಿತು.


