ಕಾರು ಢಿಕ್ಕಿ: ಸ್ಕೂಟರ್ ಸವಾರ ಮೃತ್ಯು
Friday, June 19, 2026
ಬಂಟ್ವಾಳ: ಕಾರು ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಯುವಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಸಜಿಪಮೂಡ ಗ್ರಾಮದ ಕೊಳಕೆ ಎಂಬಲ್ಲಿ ಗುರುವಾರ ಸಂಜೆ ವೇಳೆ ಸಂಭವಿಸಿದೆ.
ಮೃತ ಸ್ಕೂಟರ್ ಸವಾರನನ್ನು ಸಜಿಪನಡು ಗ್ರಾಮದ ಮಡಿವಾಳಚ್ಚಿಲ್-ಮುಹಿಯುದ್ದೀನ್ ನಗರ ನಿವಾಸಿ ಅಬ್ದುಲ್ ರಹಿಮಾನ್ ಎಂಬವರ ಪುತ್ರ ಅಹ್ಮದ್ ಅಸೀರ್ (22) ಎಂದು ಗುರುತಿಸಲಾಗಿದೆ.
ಸಜಿಪನಡು ಜಂಕ್ಷನ್‌ನಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದ ಅಸೀರ್ ಅವರು ಸಜೀಪ ಸಮೀಪದ ಬೇಂಕೆ ಕಡೆ ತನ್ನ ಆಕ್ಟಿವಾ ಸ್ಕೂಟರಿನಲ್ಲಿ ಬರುತ್ತಿದ್ದ ವೇಳೆ ಎದುರಿನಿಂದ ಅತಿ ವೇಗ ಹಾಗೂ ಅಜಾಗರುಕತೆಯಿಂದ ವಾಹನವೊಂದನ್ನು ಓವರ್ ಟೇಕ್ ಮಾಡುವ ಭರದಲ್ಲಿ ಸ್ಕೂಟರಿಗೆ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದ ಪರಿಣಾಮ ರಸ್ತೆಗೆಸೆಯಲ್ಪಟ್ಟು ತಲೆಗೆ ಗಂಭೀರ ಗಾಯಗೊಂಡ ಅಸೀರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಅಪಘಾತದ ತೀವ್ರತೆಗೆ ಆಕ್ಟಿವಾ ಸ್ಕೂಟರ್ ಸಂಪೂರ್ಣ ಜಖಂಗೊಂಡಿದೆ.
ಮೃತ ಅಸೀರ್ ಅವರು ಎಸ್ಕೆಸ್ಸೆಸ್ಸೆಫ್ ಸಂಘಟನೆಯ ಸಮಾಜಮುಖಿ ವಿಖಾಯ ಸಂಘಟನೆಯ ಆಕ್ಟಿವ್ ವಿಂಗ್ ಸದಸ್ಯರಾಗಿದ್ದು, ಸಮಾಜಮುಖಿ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿರುತ್ತಿದ್ದರೆಂದು ತಿಳಿಸಿದ್ದಾರೆ.
ಬಂಟ್ವಾಳ ಸಂಚಾರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತ ಅಸೀರ್ ತಂದೆ-ತಾಯಿ, ಸಹೋದರರು-ಸಹೋದರಿಯರ ಸಹಿತ ಬಂಧು-ಮಿತ್ರರನ್ನು ಅಗಲಿದ್ದಾರೆ.

