‘ಗಿರೀಶ್ ಕಾರ್ನಾಡ್ ಅವರ ಸಾಹಿತ್ಯ ಪರಂಪರೆ’ ವಿಶೇಷ ಉಪನ್ಯಾಸ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಂಗಳೂರು ಹಾಗೂ ಸಂತ ಆಗ್ನೆಸ್ ಕಾಲೇಜು (ಸ್ವಾಯತ್ತ), ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ಅವರ ‘ಕವಿ-ಕಾವ್ಯ-ಸಾಹಿತ್ಯ-ಪರಂಪರೆ’ ವಿಷಯಾಧಾರಿತ ಉಪನ್ಯಾಸ ಸರಣಿಯ 7ನೇ ಮಾಲಿಕೆಯು ಸಂತ ಆಗ್ನೆಸ್ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಕಕ್ಷ ಡಾ. ಎಂ.ಪಿ. ಶ್ರೀನಾಥ ಉದ್ಘಾಟಿಸಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿಸಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಕನ್ನಡ ಸಾಹಿತ್ಯ ಪರಂಪರೆಗೆ ತಮ್ಮ ತಮ್ಮ ಕೊಡುಗೆಗಳನ್ನು ಕೊಡುವ ಮೂಲಕ ಸಾಹಿತ್ಯದ ವಿಸ್ತಾರತೆಗೆ ಕೈಜೋಡಿಸಬೇಕು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಪ್ರಜಾವಾಣಿ ದಿನಪತ್ರಿಕೆಯ ಪತ್ರಕರ್ತೆ ರಾಜಲಕ್ಷ್ಮೀ ಕೋಡಿಬೆಟ್ಟು ಮಾತನಾಡಿ, ಗಿರೀಶ್ ಕಾರ್ನಾಡರ ಸಾಹಿತ್ಯಿಕ ಕೊಡುಗೆಗಳನ್ನು ಸ್ಮರಿಸಿ, ಅವರ ಜೀವನಮೌಲ್ಯಗಳನ್ನು ಹಾಗೂ ಸಂದೇಶಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ಅರಿಯುವ ಮೂಲಕ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಲು ಮುಂದಾಗಬೇಕು ಎಂದು ಪ್ರೋತ್ಸಾಹಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಎಂ. ವೆನಿಸ್ಸಾ ಎ.ಸಿ. ಅವರು ಕವಿಗಳ ಸಾಹಿತ್ಯ ಕೊಡುಗೆಗಳನ್ನು ಹಾಗೂ ಸಾಧನೆಗಳನ್ನು ತಿಳಿಸಿ, ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ ವಿಚಾರಗಳನ್ನು ತಿಳಿಸುವ ಮೂಲಕ ಸಾಹಿತ್ಯಿಕ ಬರವಣಿಗೆಯಲ್ಲಿ ಪ್ರತಿಯೋರ್ವರೂ ತೊಡಗಬೇಕು ಎಂದು ತಿಳಿಸಿದರು.
ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕ ಡಾ. ಬಸ್ತಿಯಂ ಪಾಯ್ಸ್ ಸ್ವಾಗತಿಸಿದರು. ಕನ್ನಡ ಸಹಾಯಕ ಪ್ರಾಧ್ಯಾಪಕಿ ನಿಶ್ಮಿತಾ ಕೆ. ವಂದಿಸಿ, ದ್ವಿತೀಯ ಬಿ.ಸಿ.ಎ ವಿದ್ಯಾರ್ಥಿನಿ ಸುಶ್ಮಿತಾ ಕಾರ್ಯಕ್ರಮವನ್ನು ನಿರೂಪಿಸಿದರು.