ಮಂಗಳೂರಿನಲ್ಲಿ ವರುಣನ ದಿಢೀರ್ ಆರ್ಭಟ: ಅಲ್ಲಲ್ಲಿ  ಟ್ರಾಫಿಕ್ ಜಾಮ್

ಮಂಗಳೂರಿನಲ್ಲಿ ವರುಣನ ದಿಢೀರ್ ಆರ್ಭಟ: ಅಲ್ಲಲ್ಲಿ ಟ್ರಾಫಿಕ್ ಜಾಮ್

ಮಂಗಳೂರು: ಮಂಗಳೂರು ನಗರದಲ್ಲಿ ಮಂಗಳವಾರ ಬೆಳಿಗ್ಗೆ ಬಿಸಿಲಿನ ವಾತಾವರಣ ಕಂಡುಬಂದರೂ, ಮಧ್ಯಾಹ್ನದ ನಂತರ ದಿಢೀರನೆ ಹವಾಮಾನ ಬದಲಾಗಿ ಭಾರಿ ಗಾಳಿ-ಮಳೆ ಸುರಿದಿದೆ. ವರುಣನ ಈ ರೌದ್ರಾವತಾರಕ್ಕೆ ನಗರದ ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದು, ಹೆದ್ದಾರಿಯುದ್ದಕ್ಕೂ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿ ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುವಂತಾಯಿತು. ಬಿರುಗಾಳಿಯ ರಭಸಕ್ಕೆ ನಗರದ ಹಲವೆಡೆ ಫ್ಲೆಕ್ಸ್ ಬ್ಯಾನರ್‌ಗಳು ಹರಿದು ಬಿದ್ದಿವೆ.

ಮಧ್ಯಾಹ್ನದ ನಂತರ ಸುರಿದ ಬಿರುಗಾಳಿ ಸಹಿತ ಮಳೆಗೆ ನಗರದ ಪ್ರಮುಖ ಪ್ರದೇಶಗಳಾದ ಕೂಳೂರು ಮತ್ತು ಬಂಗ್ರಕೂಳೂರು ಸುತ್ತಮುತ್ತಲಿನ ತಗ್ಗು ಪ್ರದೇಶಗಳು ಸಂಪೂರ್ಣ ನೀರಿನಿಂದ ಆವೃತವಾಗಿದ್ದವು. ಬಂಗ್ರಕೂಳೂರು ಸಮೀಪವಿರುವ ಜಿಯೋ ಪೆಟ್ರೋಲ್ ಬಂಕ್‌ಗೆ ಮಳೆನೀರು ನುಗ್ಗಿದ್ದರಿಂದ ಗ್ರಾಹಕರು ಮತ್ತು ಸಿಬ್ಬಂದಿ ತೊಂದರೆ ಅನುಭವಿಸಿದರು. ಈ ಭಾಗದಲ್ಲಿ ಮಳೆನೀರು ಸರಾಗವಾಗಿ ಹರಿದು ಹೋಗಲು ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿರುವುದೇ ಈ ಕೃತಕ ನೆರೆಗೆ ಪ್ರಮುಖ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನ ಸಂಚಾರ ಅಸ್ತವ್ಯಸ್ತ

ಧಾರಾಕಾರ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 66ರ ನಂತೂರು, ಕೂಳೂರು, ಕೆಪಿಟಿ ಹಾಗೂ ಪದುವಾ ಜಂಕ್ಷನ್‌ಗಳ ಬಳಿ ತೀವ್ರ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇನ್ನು ಪಂಪ್‌ವೇಲ್ ಸುತ್ತಮುತ್ತ ಸ್ಮಾರ್ಟ್ ಸಿಟಿ ರಸ್ತೆ ಕಾಮಗಾರಿಗಳು ನಡೆಯುತ್ತಿರುವುದರಿಂದ, ಪ್ರಮುಖ ರಸ್ತೆಗಳೆಲ್ಲವೂ ಕೆರೆಯಂತಾಗಿದ್ದವು. ಪರಿಣಾಮವಾಗಿ ಪಂಪ್‌ವೇಲ್‌ನಲ್ಲಿ ಬೆಳಿಗ್ಗಿನಿಂದಲೇ ವಾಹನಗಳು ಸಾಲುಗಟ್ಟಿ ನಿಂತಿದ್ದು, ಸವಾರರು ಸಂಚಾರ ದಟ್ಟಣೆಯಲ್ಲಿ ಸಿಲುಕಿ ಪರದಾಡಬೇಕಾಯಿತು.

 ಖಾಸಗಿ ಬಸ್ ಮೇಲೆ ಬಿದ್ದ ಮರ: ತಪ್ಪಿದ ಭಾರಿ ದುರಂತ

ಮಧ್ಯಾಹ್ನ ಬೀಸಿದ ಅಬ್ಬರದ ಗಾಳಿಗೆ ಪಂಪ್‌ವೇಲ್ ಹಾಗೂ ನಂತೂರು ಮಧ್ಯೆ ಹೆದ್ದಾರಿ ಬದಿಯಲ್ಲಿ ನಿಲ್ಲಿಸಿದ್ದ ಖಾಸಗಿ ಸಿಟಿ ಬಸ್ ಮೇಲೆ ಬೃಹತ್ ಮರವೊಂದು ಉರುಳಿ ಬಿದ್ದಿದೆ. ಅದೃಷ್ಟವಶಾತ್ ಬಸ್‌ನ ಚಾಲಕ ಮತ್ತು ನಿರ್ವಾಹಕ ವಾಹನವನ್ನು ರಸ್ತೆ ಬದಿ ನಿಲ್ಲಿಸಿ ಊಟಕ್ಕೆ ತೆರಳಿದ್ದರಿಂದ ಹಾಗೂ ಬಸ್‌ನಲ್ಲಿ ಪ್ರಯಾಣಿಕರು ಇಲ್ಲದಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. 

ಮರ ಬಿದ್ದ ರಭಸಕ್ಕೆ ಬಸ್‌ಗೆ ಅಲ್ಪಸ್ವಲ್ಪ ಹಾನಿಯಾಗಿದೆ. ಈ ಘಟನೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲವು ಗಂಟೆಗಳ ಕಾಲ ಸಂಚಾರ ಸಂಪೂರ್ಣ ಸ್ಥಗಿತಗೊಂಡು ವಾಹನ ಸವಾರರು ಪರದಾಡಿದರು. ತಕ್ಷಣವೇ ಕಾರ್ಯಪ್ರವೃತ್ತರಾದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಸಿಬ್ಬಂದಿ, ಜಂಟಿ ಕಾರ್ಯಾಚರಣೆ ನಡೆಸಿ ಮರವನ್ನು ಕತ್ತರಿಸಿ ತೆರವುಗೊಳಿಸುವ ಮೂಲಕ ಸಂಚಾರ ಸುಗಮಗೊಳಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article