ಯಶ್‌ಪಾಲ್ ಸುವರ್ಣ ವಿರುದ್ಧ ತ್ವರಿತ ಎಪ್‌ಐಆರ್, ಕಾಂಗ್ರೆಸ್ ನಾಯಕರ ವಿರುದ್ಧ ಕ್ರಮ ಯಾವಾಗ?: ದ.ಕ. ಬಿಜೆಪಿ ಪ್ರಶ್ನೆ

ಯಶ್‌ಪಾಲ್ ಸುವರ್ಣ ವಿರುದ್ಧ ತ್ವರಿತ ಎಪ್‌ಐಆರ್, ಕಾಂಗ್ರೆಸ್ ನಾಯಕರ ವಿರುದ್ಧ ಕ್ರಮ ಯಾವಾಗ?: ದ.ಕ. ಬಿಜೆಪಿ ಪ್ರಶ್ನೆ

ಮಂಗಳೂರು: ಉಡುಪಿಯ ಶಾಸಕ ಯಶ್‌ಪಾಲ್ ಸುವರ್ಣ ಅವರ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಮುಖಂಡರು ನಾ ಮುಂದು ತಾ ಮುಂದು ಎಂಬಂತೆ ಸರಣಿ ಹೇಳಿಕೆಗಳನ್ನು ನೀಡುತ್ತಿರುವುದು ರಾಜಕೀಯ ಪ್ರೇರಿತವಾಗಿದೆ. ಈಗಾಗಲೇ ಯಶ್‌ಪಾಲ್ ಸುವರ್ಣ ಅವರ ವಿರುದ್ಧ ಪೊಲೀಸ್ ಕೇಸು ದಾಖಲಾಗಿರುವ ಸಂದರ್ಭದಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಹಾಗೂ ಮಾಜಿ ಸಚಿವ ರಮಾನಾಥ ರೈ ಅವರ ನಡುವಿನ ರಾಜಕೀಯ ಭಿನ್ನಾಭಿಪ್ರಾಯಗಳ ಮುಸುಕಿನ ಗುದ್ದಾಟವನ್ನು ಮರೆಮಾಚಲು ಬಿಜೆಪಿ ಶಾಸಕರನ್ನು ಗುರಿಯಾಗಿಸಿಕೊಂಡು ಹೇಳಿಕೆಗಳನ್ನು ನೀಡಿ ಕಾಂಗ್ರೇಸ್‌ನ ಹೈ ಕಮಾಂಡನ್ನು ಮೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಅರುಣ್ ಜಿ. ಶೇಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಅವರು ಸರಕಾರದ ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತು ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬುದು ನಿಮ್ಮ ನಿಲುವೂ ಕೂಡಾ ಅಗಿದ್ದರೆ ಈ ಹಿಂದೆ ರಾಜ್ಯಪಾಲರ ಕುರಿತು ಅವಹೇಳನಕಾರಿ ಹಾಗೂ ದ್ವೇಷದ ಹಾಗೂ ಪ್ರಚೋದನಾತ್ಮಕ ಹೇಳಿಕೆ ನೀಡಿ ಮಂಗಳೂರಿನ ಶಾಂತಿಯುತ ವಾತಾವರಣವನ್ನು ಕೆಡಿಸಿದ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಅವರ ವಿರುದ್ಧ ಸರಕಾರ ಯಾವಾಗ ಕಾನೂನು ಕ್ರಮ ಕೈಗೊಳ್ಳುತ್ತದೆ ಎಂದು ಜನತೆಗೆ ತಿಳಿಸಬೇಕು.

ಅದೇ ರೀತಿ, ಮಾಜಿ ಸಚಿವ ರಮಾನಾಥ ರೈ ಅವರು ಇತ್ತೀಚೆಗೆ ಪುರಭವನದ ಹೊರಗೆ ನಡೆದಂತಹ ಪ್ರತಿಭಟನಾ ಸಭೆಯಲ್ಲಿ ದೇಶದ ಪ್ರಧಾನಮಂತ್ರಿಯವರ ಕುರಿತು ಅವಹೇಳನಕಾರಿ ಪದಗಳನ್ನು ಬಳಸಲಾಗಿರುವ ಹಿನ್ನೆಲೆಯಲ್ಲಿ ಇವರುಗಳ ವಿರುದ್ಧ ನಿಮ್ಮ ಕಾಂಗ್ರೇಸ್ ಸರಕಾರ ಯಾವಾಗ ಕಾನೂನು ಕ್ರಮವನ್ನು ಕೈಗೊಳ್ಳುತ್ತದೆ ಎಂಬುದನ್ನು ಪತ್ರಿಕಾ ಗೋಷ್ಟಿಯಲ್ಲಿ ತಿಳಿಸಬಹುದಿತ್ತಲ್ಲವೇ..?

ಕಾಂಗ್ರೆಸ್ ಸಾಮಾನ್ಯ ಕಾರ್ಯಕರ್ತರನ್ನು ಮುಟ್ಟುವ ಅಗತ್ಯ ಬಿಜೆಪಿಗೆ ಇಲ್ಲ. ಭಾರತೀಯ ಜನತಾ ಪಾರ್ಟಿಯು ಪ್ರಜಾಪ್ರಭುತ್ವ ಮತ್ತು ಕಾನೂನಿನ ಆಡಳಿತದಲ್ಲಿ ನಂಬಿಕೆ ಇಟ್ಟಿರುವ ಪಕ್ಷವಾಗಿದೆ. ಸಮಾಜದಲ್ಲಿ ಉದ್ವಿಗ್ನತೆ ಅಥವಾ ದ್ವೇಷಕ್ಕೆ ಕಾರಣವಾಗುವ ಯಾವುದೇ ಹೇಳಿಕೆಗಳ ವಿರುದ್ಧ ಕಾನೂನು ಎಲ್ಲರಿಗೂ ಒಂದೇ ರೀತಿಯಲ್ಲಿ ಅನ್ವಯಿಸಬೇಕು ಎಂಬುದು ನಮ್ಮ ಆಗ್ರಹ.

ಬಿಜೆಪಿ ಶಾಸಕರು ಮತ್ತು ಕಾರ್ಯಕರ್ತರ ವಿರುದ್ಧ ಸ್ವಯಂಪ್ರೇರಿತವಾಗಿ ಪ್ರಕರಣಗಳನ್ನು ದಾಖಲಿಸುವಲ್ಲಿ ತೋರಿಸುವ ತ್ವರಿತತೆ, ನಿಮ್ಮ ಕೃಪಾಪೋಷಿತರು ಮಾಡಿದ ತಪ್ಪಿಗೆ ಕಣ್ಣುಮುಚ್ಚಿ ಕುಳಿತಿರುವುದೇಕೆ...? ಕಾನೂನು ಪ್ರಕಾರ ಸಮಾನವಾಗಿ ಕೆಲಸಮಾಡಬೇಕಾದ ಪೊಲೀಸ್ ಇಲಾಖೆ ಏನು ಮಾಡುತ್ತಿದೆ...?

ಯಾವುದೇ ಸರಕಾರವು ತನ್ನ ಆಡಳಿತದಲ್ಲಿ ರಾಜಧರ್ಮವನ್ನು ಪಾಲಿಸಬೇಕಾದ ಸಂಧರ್ಭದಲ್ಲಿ ರಾಜಕೀಯ ದ್ವೇ?ದಿಂದ ಹಾಗೂ ಪಕ್ಷಪಾತದಿಂದ ಕೆಲಸ ಮಾಡುವುದು ಯಾವ ನ್ಯಾಯ...? ಆಡಳಿತದಲ್ಲಿರುವ ನಿಮ್ಮ ಪಕ್ಷ ಹಾಗೂ ಸರಕಾರವು ಪ್ರಜಾಪ್ರಭುತ್ವ ಮಾದರಿಯಲ್ಲಿ ಉತ್ತರದಾಯಿಯಾಗಿ ಕೆಲಸ ಮಾಡುವುದು ಬಿಟ್ಟು ನಿಮ್ಮ ದ್ವೇಷ ರಾಜಕಾರಣಕ್ಕೆ ಆಡಳಿತ ಯಂತ್ರವನ್ನು ಬಳಸಿಕೊಳ್ಳುವುದು ಅಕ್ಷಮ್ಯ ಅಪರಾಧ ಎಂದು ಅರುಣ್ ಜಿ. ಶೇಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article