ಸಮಯಪ್ರಜ್ಞೆ ಮೆರೆದು ಘಟನೆ ತಪ್ಪಿಸಿದ ಶಾಲಾ ಬಾಲಕನಿಗೆ ಮುಖ್ಯಮಂತ್ರಿಯಿಂದ ಅಭಿನಂದನೆ
ಈ ಕುರಿತು ತನ್ನ ಎಕ್ಸ್ ಖಾತೆ ಮೂಲಕ ಅಭಿನಂದನೆ ಹೇಳಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ನರಿಕೊಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ೫ನೇ ತರಗತಿ ವಿದ್ಯಾರ್ಥಿ ಮನ್ವಿತ್‌ನ ಸಮಯಪ್ರಜ್ಞೆ ಹಾಗೂ ಧೈರ್ಯ ನಿಜಕ್ಕೂ ಹೃದಯಸ್ಪರ್ಶಿ ಮತ್ತು ಶ್ಲಾಘನೀಯ. ಅಡುಗೆ ಸಿಬ್ಬಂದಿಯನ್ನು ಅಪಾಯದಿಂದ ಕಾಪಾಡಿದ ಮನ್ವಿತ್‌ಗೆ ಹೃದಯಪೂರ್ವಕ ಅಭಿನಂದನೆಗಳು.
ವಿದ್ಯುತ್ ಚಾಲಿತ ಕಾಯಿ ತುರಿಯುವ ಯಂತ್ರದಲ್ಲಿ ಅಕ್ಷರ ದಾಸೋಹ ಸಿಬ್ಬಂದಿಯ ಕೈಬೆರಳು ಸಿಲುಕಿಕೊಂಡು ಅವರು ನೋವಿನಿಂದ ಕಿರುಚುತ್ತಿದ್ದಾಗ, ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಬಾಲಕ ಮನ್ವಿತ್ ತಕ್ಷಣ ವಿದ್ಯುತ್ ಸ್ವಿಚ್ ಆಫ್ ಮಾಡುವ ಮೂಲಕ ಸಂಭವಿಸಬಹುದಾಗಿದ್ದ ದೊಡ್ಡ ಅಪಾಯವನ್ನು ತಪ್ಪಿಸಿದ್ದಾನೆ.
ಬಾಲಕನ ಒಂದು ಕ್ಷಣದ ಜಾಗರೂಕತೆ, ಸರಿಯಾದ ನಿರ್ಧಾರವೊಂದು ಅಡುಗೆ ಸಿಬ್ಬಂದಿಯ ಕೈಬೆರಳನ್ನು ಉಳಿಸಿದೆ. ಮನ್ವಿತ್‌ನ ಈ ಮಾನವೀಯ ಕಾಳಜಿ, ಧೈರ್ಯ ಮತ್ತು ಸಮಯಪ್ರಜ್ಞೆ ಎಲ್ಲರಿಗೂ ಮಾದರಿಯಾಗಲಿ. ಬಾಲಕನ ಮುಂದಿನ ಭವಿಷ್ಯ ಉಜ್ವಲವಾಗಲಿ, ಸಮಾಜದ ಒಳಿತಿಗಾಗಿ ಸದಾ ಸ್ಪಂದಿಸುವ ಉತ್ತಮ ಪ್ರಜೆಯಾಗಿ ಬೆಳೆದು ನಾಡಿಗೆ ಕೀರ್ತಿ ತರಲಿ ಎಂದು ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ.
