ಪರಿಸರ ಹಳ್ಳಿ ನಡಿಗೆ: ಗದ್ದೆ, ತೋಡು, ಗೋಶಾಲೆ, ಜೇನು ಕೃಷಿ ಕಂಡ ಪೇಟೆ ಮಕ್ಕಳು
Sunday, August 23, 2026
ಕಿನ್ನಿಗೋಳಿ: ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗ ಸಂಯೋಜಿಸಿದ ಪರಿಸರ ಹಳ್ಳಿ ನಡಿಗೆ ಕಾರ್ಯಕ್ರಮದಲ್ಲಿ ಮಂಗಳೂರು ನಗರದ ಪರಿಸರಾಸಕ್ತರು ಮಾತ್ರವಲ್ಲದೆ ಸುರತ್ಕಲ್ ವಿದ್ಯಾದಾಯಿನಿ, ಮಂಗಳೂರಿನ ಅಲೋಶಿಯಸ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಇನ್ನೂರು ಮಂದಿ ಈ ನಡಿಗೆಯಲ್ಲಿದ್ದರು. ಆರೇಳು ಕಿಲೋಮೀಟರ್ ಹಾದಿಯಲ್ಲಿ, ಹಾಡಿಯಲ್ಲಿ, ಗದ್ದೆಯಲ್ಲಿ, ತೋಟದಲ್ಲಿ, ಸಂಕದಲ್ಲಿ ಹೀಗೆ ನಡೆಯುತ್ತ ಖುಷಿ ಪಟ್ಟರು.
ಎರೆಹುಳ ಕಂಡಾಗ ಅಚ್ಚರಿ ಪಟ್ಟರು, ಸೆಗಣಿ ತೋರಿಸಿದಾಗ ಎಬೇ ಎಂದು ಓಡಿದರು. ನಾವು ತಿನ್ನುವ ಅಕ್ಕಿ ಇದರಲ್ಲೇ ಆಗುವುದು ಎಂದು ಭತ್ತದ ಗಿಡಗಳನ್ನು ತೋರಿಸಿದಾಗ ಓ ಮೈ ಗಾಡ್ ಎಂದು ಅಚ್ಚರಿಗೊಂಡರು. ಬೇಯಿಸಿದ ಗೆಣಸು ತಿಂದು ಖುಷಿಪಟ್ಟರು. ಕೆಸರು ತುಳಿದು, ಹರಿವ ತೊರೆಯ ನೀರಿನಲ್ಲಿ ತೊಳೆದುಕೊಂಡರು.
ತಾಳಿಪಾಡಿ ವೆಂಕಟರಮಣ ದೇವಸ್ಥಾನ, ಗಿರೀಶ್ ಶೆಟ್ಟಿಯವರ ತೋಟ, ನೂರಕ್ಕೂ ದೇಸೀ ತಳಿಯ ದನಗಳಿರುವ ಪಾಂಚಜನ್ಯ ಗೋಶಾಲೆ, ಮುನ್ನೂರಕ್ಕೂ ಹೆಚ್ಚು ಪೆಟ್ಟಿಗೆ ಇಟ್ಟಿರುವ ಪ್ರಜ್ವಲ್ ಶೆಟ್ಟಿಗಾರ್ ಅವರ ಜೇನುಕೃಷಿಗಳನ್ನು ನೋಡಿದರು. ಜೇನು ಸವಿದು ಸಂಭ್ರಮಿಸಿದರು. ತಾಳಿಪಾಡಿ ಶಕ್ತಿದರ್ಶನ ಯೋಗಾಶ್ರಮದ ಪೂಜ್ಯ ದೇವದಾಸ ರಾವ್ ಅವರಲ್ಲಿ ಪ್ರಶ್ನೆಗಳನ್ನು ಕೇಳಿ ಕೇಳಿ ಉತ್ತರ ಪಡೆದರು. ಒಟ್ಟಾರೆ ಆದಿತ್ಯವಾರದ ರಜೆಯ ಮಜಾ ಕಿನ್ನಿಗೋಳಿ ಪರಿಸರದ ನಡಿಗೆಯಲ್ಲಿ ಕಂಡುಬಂತು.
ಗೋಶಾಲೆಯ ಶ್ರೀಧರ್, ರಾಮಚಂದ್ರ ಭಟ್, ಅರುಣಾಂಬಿಕ ಭಟ್, ಗೌರಿ, ದಯಾಸಾಗರ್, ಪ್ರವೀಣ್ ಮೊಂತೆರೋ ಮುಂತಾದವರಿದ್ದರು.
ಪತಿ, ನನ್ನ ಒಂದನೇ ಮತ್ತು ಆರನೇ ತರಗತಿಯ ಮಕ್ಕಳೊಂದಿಗೆ ಬಂದಿದ್ದೆ. ಮಕ್ಕಳಿಗೆ ಮಾತ್ರವಲ್ಲ ನಮಗೂ ಖುಷಿ ಆಯಿತು ಲಕ್ಷ್ಮೀ ಆಚಾರ್ಯ, ಮಂಗಳೂರು.
ನಡಿಗೆ ಎಂಬುವುದು ಬದುಕಿನ ಶಿಕ್ಷಣವಾಗಬೇಕು. ಹಳ್ಳಿಯ ಬದುಕಿನ ಅನುಭವ ನಗರದವರಿಗೆ ಆಗಬೇಕು. ಶಾಲಾ ವಿದ್ಯಾರ್ಥಿಗಳಿಗೆ ಆಗಬೇಕೆಂದು ಈ ಕಾರ್ಯಕ್ರಮ. ಆವಾಗಾವಾಗ ಇಂತಹ ಪರಿಸರ ನಡಿಗೆ ಆಯೋಜಿಸುತ್ತಿದ್ದೇವೆ. -ಕೆ. ರತ್ನಾಕರ ಕುಳಾಯಿ, ಕೃಷಿಕ ಗ್ರಾಹಕ ಬಳಗದ ಕಾರ್ಯದರ್ಶಿ

