ಮಂಗಳೂರು ವಿಮಾನ ನಿಲ್ದಾಣ ಅವೈಜ್ಞಾನಿಕ ಪಾರ್ಕಿಂಗ್ ದರ: ಆ.4 ರಂದು ಪ್ರತಿಭಟನೆ
ದ.ಕ. ಜಿಲ್ಲಾ ಟ್ಯಾಕ್ಸಿಮೆನ್ಸ್ ಆಂಡ್ ಮ್ಯಾಕ್ಸಿ ಕ್ಯಾಬ್ ಎಸೋಸಿಯೇಶನ್ ಅಧ್ಯಕ್ಚ ಆನಂದ ಕೆ. ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸರಕಾರದ ಎಲ್ಲಾ ತೆರಿಗೆಗಳನ್ನು ಪಾವತಿಸಿ, ಮೋಟಾರು ವಾಹನ ಕಾಯ್ದೆಯ ಎಲ್ಲಾ ನಿಯಮಗಳನ್ನು ಪಾಲಿಸಿ ಸಂಚರಿಸುತ್ತಿರುವ ಪ್ರವಾಸಿ ವಾಹನಗಳ ಮೇಲೆ ಅನಗತ್ಯ ಕ್ರಮಗಳನ್ನು ಹೇರುತ್ತಿದ್ದು ಇನ್ನೊಂದೆಡೆ ಖಾಸಗಿ ವಾಹನಗಳಿಗೆ ಎಲ್ಲಾ ರೀತಿಯ ಸವಲತ್ತು ನೀಡಿ ಮಲತಾಯಿ ಧೋರಣೆ ಅನುಸರಿಸುತ್ತಿರುವುದು ಖಂಡನೀಯ ಎಂದರು.
ಖಾಸಗಿ ವಾಹನಗಳಿಗೆ ಡ್ರಾಪ್ ಮತ್ತು ಪಿಕಪ್ ವಿಚಾರದಲ್ಲಿ ಹತ್ತು ನಿಮಿಷ ಉಚಿತವಾಗಿ ನೀಡಿ ಬಳಿಕ 100 ರೂ. ದರವನ್ನು ನಿಗದಿ ಪಡಿಸಲಾಗಿದೆ. ಆದರೆ ಪ್ರವಾಸಿ ವಾಹನಗಳಿಗೆ ಪ್ರಯಾಣಿಕರ ಪಿಕಪ್ ಸಮಯದಲ್ಲಿ ಒಂದು ನಿಮಿಷವೂ ಉಚಿತ ಅವಕಾಶ ನೀಡದೆ ಲಘು ವಾಹನಗಳಿಗೆ ದುಪ್ಪಟ್ಟು ದರ 180 ರೂ. ಹಾಗೂ ಮ್ಯಾಕ್ಸಿ ಕ್ಯಾಬ್‌ಗಳಿಗೆ 500 ರಿಂದ 600 ರೂ. ವರೆಗೆ (ಹೆಚ್ಚುವರಿ) ದರ ವಸೂಲಿ ಮಾಡಲಾಗುತ್ತಿದೆ. ಇದು ಹಿಂದಿನ ದರಕ್ಕೆ ಹೋಲಿಸಿದರೆ ಮೂರು ಪಟ್ಟು ಅಧಿಕ ಎಂದು ದೂರಿದರು.
ಖಾಸಗಿ ವಾಹನಗಳಿಗೆ ಫಾಸ್ಟ್ ಟ್ಯಾಗ್ ಮೂಲಕ ದರ ಪಾವತಿಸಲು ವ್ಯವಸ್ಥೆ ಮಾಡಲಾಗಿದ್ದು, ಪ್ರವಾಸಿ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಮತ್ತು ನಗದು ಪಾವತಿಗೆ ಅವಕಾಶ ಕೊಡದೆ ಮೊಬೈಲ್ ಆನ್‌ಲೈನ್ ಪಾವತಿ ಮೂಲಕವೇ ಕಡ್ಡಾಯ ಮಾಡಿರುವುದು ಹೆಚ್ಚುವರಿ ದರ ವಸೂಲಿ ಮಾಡುವ ತಂತ್ರದ ಭಾಗವೇ ಆಗಿದೆ. ವಿಮಾನ ನಿಲ್ದಾಣದ ಪ್ರವೇಶ ದ್ವಾರದ ಹಾಗೂ ನಿರ್ಗಮನ ದ್ವಾರದ ಬಳಿ ಪ್ರವಾಸಿ ವಾಹನಗಳಿಗೆ ಪ್ರತ್ಯೇಕ ಸಾಲನ್ನು ನಿಗದಿ ಪಡಿಸಲಾಗಿದ್ದು, ನಿರ್ಗಮನ ದ್ವಾರದಲ್ಲಿ ನಮಗೆ ಕಾಯ್ದಿರಿಸಿದ ಸಾಲಿನಲ್ಲಿ ಖಾಸಗಿ ವಾಹನಗಳಿಗೂ ಸಂಚಾರಕ್ಕೆ ಅವಕಾಶ ನೀಡುವ ಮೂಲಕ ಅನಗತ್ಯವಾಗಿ ಶುಲ್ಕ ಪಾವತಿಸುವ ಅನಿವಾರ್ಯತೆ ಪ್ರವಾಸಿ ವಾಹನಗಳಿಗೆ ಸೃಷ್ಟಿಯಾಗುತ್ತಿದೆ ಎಂದರು.
ಉಭಯ ಜಿಲ್ಲೆಗಳಲ್ಲಿ ಸುಮಾರು 12,000 ದಷ್ಟು ಪ್ರವಾಸಿ ವಾಹನಗಳು ದಿನನಿತ್ಯ ಸಂಚಾರ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿದೆ. ತಮ್ಮ ದಿನನಿತ್ಯದ ಆದಾಯದ ಮೇಲೆಯೇ ನಮ್ಮೆಲ್ಲಾ ಕುಟುಂಬದವರು ಅವಲಂಬಿತವಾಗಿದ್ದು ಅದೆಷ್ಟೋ ಸವಾಲುಗಳ ನಡುವೆ ಉತ್ತಮ ಹಾಗೂ ಪ್ರಾಮಾಣಿಕ ಸೇವೆ ಒದಗಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ನಮ್ಮ ಸಮಸ್ಯೆ ಈಡೇರಿಕೆಗೆ ಆಗ್ರಹಿಸಿ ಉಭಯ ಜಿಲ್ಲೆಗಳ ಜನಪ್ರತಿನಿಧಿಗಳಿಗೆ ಅಹವಾಲು ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ವಿವರಿಸಿದರು.
ಎಸೋಸಿಯೇಶನ್ ಪ್ರಮುಖರಾದ ರಮೇಶ್ ಕೋಟ್ಯಾನ್, ಹರಿಶ್ಚಂದ್ರ, ಹರೀಶ್ ಶೆಟ್ಟಿ, ಉದಯಕುಮಾರ್, ಪ್ರಕಾಶ್ ಸಾಲ್ಯಾನ್, ರಾಜೇಶ್, ರೋಷನ್, ಶುಭಕರ ಶೆಟ್ಟಿ ಇದ್ದರು.