BSNL-ಮಂಗಳೂರಿನಲ್ಲೂ ಸ್ಯಾಟ್ಲೈಟ್ ಫೋನ್ಗೆ ಉತ್ತಮ ಸ್ಪಂದನೆ ವ್ಯಕ್ತ: ಹೇಮಂತ್ ಸದಾಶಿವ ಬೊರಲೆ
ಮಂಗಳೂರು: ಭಾರತ್ ಸಂಚಾರ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ಇತ್ತೀಚೆಗೆ ಹೊರ ತಂದಿರುವ ವಿಶೇಷ ಸ್ಯಾಟಲೈಟ್ ಫೋನ್ಗೆ ವ್ಯಾಪಕ ಬೇಡಿಕೆ ವ್ಯಕ್ತವಾಗುತ್ತಿದ್ದು, ಮಂಗಳೂರಿನಲ್ಲೂ ಸ್ಯಾಟ್ಲೈಟ್ ಫೋನ್ಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಸಂಸ್ಥೆಯ ಮಂಗಳೂರು ವಿಭಾಗದ ಮಹಾ ಪ್ರಬಂಧಕ ಹೇಮಂತ್ ಸದಾಶಿವ ಬೊರಲೆ ತಿಳಿಸಿದರು.
ಅವರು ಸಂಸ್ಥೆಯ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಎಸ್ಎನ್ಎಲ್ನ ಸ್ಯಾಟಲೈಟ್ ಫೋನ್ ಸೇವೆಗಳಿಗೆ ಉತ್ತಮ ಸ್ಪಂದನೆ ದೊರಕಿದೆ. ಸಾಂಪ್ರದಾಯಿಕ ಮೊಬೈಲ್ ಜಾಲ, ಬ್ರಾಡ್ಬ್ಯಾಂಡ್ ಅಥವಾ ಭೂ ಆಧಾರಿತ ಸಂವಹನ ಸೌಲಭ್ಯಗಳು ಇಲ್ಲದ ಕಡೆಯೂ ಈ ಸ್ಯಾಟಲೈಟ್ ಫೋನ್ ಸೇವೆಗಳು ಸಹಕಾರಿಯಾಗುತ್ತಿದೆ. ದುರ್ಗಮ ಪ್ರದೇಶ, ವಿಪತ್ತು ನಿರ್ವಹಣೆ ಮತ್ತು ತುರ್ತು ಪ್ರತಿಕ್ರಿಯೆ, ಮಹತ್ವದ ಸಂವಹನ ಅಗತ್ಯಗಳಿಗೆ ಈ ಸೇವೆ ಉಪಯುಕ್ತವಾಗಿದೆ. ಮಂಗಳೂರಿನಲ್ಲಿ ಮುಖ್ಯವಾಗಿ ಮೀನುಗಾರಿಕೆಗೆ ತೆರಳುವವರಿಗೆ ಇದು ಬಹಳಷ್ಟು ಪ್ರಯೋಜನವಾಗುತ್ತಿದೆ. ಈ ವ್ಯವಸ್ಥೆಯಡಿ 20ಕ್ಕೂ ಅಧಿಕ ಮಂದಿ ಸ್ಯಾಟ್ಲೈಟ್ ಫೋನ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿದ್ದು, ಅದರ ಪರಿಶೀಲನಾ ಪ್ರಕ್ರಿಯೆ ನಡೆದು ಅಂತಿಮ ಹಂತದಲ್ಲಿದೆ ಎಂದರು.
ಗ್ರಾಮೀಣ ಬ್ರಾಡ್ಬ್ಯಾಂಡ್ ವಿಸ್ತರಣೆ:
ಭಾರತ್ ನೆಟ್ ಉದ್ಯಮಿ ಯೋಜನೆಯಡಿ 35 ಬಿಎನ್ಯು ಪಾಲುದಾರರು ಬಿಎಸ್ಎನ್ಎಲ್ನೊಂದಿಗೆ ಮಂಗಳೂರಿನಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪಾಲುದಾರರು ಗ್ರಾಮೀಣ ಪ್ರದೇಶಗಳಲ್ಲಿ 88 ಒಎಲ್ಟಿ (ಒಪ್ಟಿಕಲ್ ಲೈನ್ ಟರ್ಮಿನಲ್)ಗಳನ್ನು ಸ್ಥಾಪಿಸಿದ್ದು, 5,000ಕ್ಕೂ ಹೆಚ್ಚು ಎಫ್ಟಿಟಿಎಚ್ ಸಂಪರ್ಕಗಳನ್ನು ಒದಗಿಸಿದ್ದಾರೆ. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಬ್ರಾಡ್ಬ್ಯಾಂಡ್ ಲಭ್ಯತೆ ಗಣನೀಯವಾಗಿ ಬಲಗೊಂಡಿದೆ. ಸುಳ್ಯ, ಕಡಬದ ಗ್ರಾಮೀಣ ಪ್ರದೇಶಗಳಿಗೂ ಈ ಮೂಲಕ ಬ್ರಾಡ್ಬ್ಯಾಂಡ್ ತಲುಪಿದೆ ಎಂದರು.
ಗ್ರಾಹಕರ ಸಂಖ್ಯೆ ಹೆಚ್ಚಳ:
ಬಿಎಸ್ಎನ್ಎಲ್ ಗುಣಮಟ್ಟದ ಸೇವೆಗೆ ಆದ್ಯತೆ ನೀಡುತ್ತಿದ್ದು, 4ಜಿ ಜಾಲದ ವಿಸ್ತರಣೆಯಾಗುತ್ತಿದೆ. ಬಿಎಸ್ಎನ್ಎಲ್ ೪ಜಿ ಜಾಲವು 5ಜಿ ಸೇವೆಗಳ ವಿಕಾಸಕ್ಕೆ ಅಡಿಪಾಯವಾಗಿದ್ದು, ದೂರಸಂಪರ್ಕ ತಂತ್ರಜ್ಞಾನದಲ್ಲಿ ಭಾರತದ ಆತ್ಮನಿರ್ಭರತೆಯನ್ನು ಬಲಪಡಿಸುತ್ತದೆ. ಬಿಎಸ್ಎನ್ಎಲ್ ಗ್ರಾಹಕರ ಸಂಖ್ಯೆಯೂ ಹೆಚ್ಚಳಗೊಂಡಿದೆ. ಗ್ರಾಮೀಣ ಭಾಗದಲ್ಲೂ ಗುಣಮಟ್ಟದ ಸೇವೆಗೆ ಕ್ರಮಕೈಗೊಳ್ಳಲಾಗುತ್ತಿದೆ ಎಂದರು.
1 ರೂ.ಗೆ ಬಿಎಸ್ಎನ್ಎಲ್ ಸಿಮ್:
ಬಿಎಸ್ಎನ್ಮ್ಲ್ನಿಂದ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಹೊಸ ಸಿಮ್ 1 ರೂ.ಗೆ ನೀಡಲಾಗುತ್ತಿದೆ. ಆ. 12ರಿಂದ ಆರಂಭಗೊಂಡಿರುವ ಈ ಕೊಡುಗೆ ಸೆ. 12ರವರೆಗೆ ಚಾಲ್ತಿಯಲ್ಲಿರಲಿದೆ. ಈ ಕೊಡುಗೆಯಡಿ 24 ದಿನಗಳ ಅವಧಿಗೆ ಅನಿಯಮಿತ ಧ್ವನಿ ಕರೆಗಳು, ಪ್ರತಿದಿನ 1 ಜಿಬಿ ಡೇಟಾ, ಪ್ರತಿದಿನ 100 ಎಸ್ಎಂಎಸ್ಗಳ ಸೌಲಭ್ಯ ಗ್ರಾಹಕರಿಗೆ ದೊರಕಲಿದೆ. ಇದಲ್ಲದೆ 2,399 ರೂ.ಗಳ ವಾರ್ಷಿಕ ಪ್ಲಾನ್ ಕೂಡಾ ನೀಡುತ್ತಿದ್ದು, 365 ದಿನಗಳೊಂದಿಗೆ ಹೆಚ್ಚುವರಿ 47 ದಿನಗಳ ಅವಧಿಯ ಕೊಡುಗೆ ಇದಾಗಿರಲಿದೆ.
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆ. 1ರಿಂದ ಆರಂಭಗೊಂಡು 90 ದಿನಗಳ ಅವಧಿಗೆ ಹೊಸ ಎಫ್ಟಿಟಿಎಚ್ ಗ್ರಾಹಕರಿಗಾಗಿ ಬಿಎಸ್ಎನ್ಎಲ್ ವಿಶೇಷ ಪ್ರಚಾರಾತ್ಮಕ ಕೊಡುಗೆಯನ್ನು ನೀಡುತ್ತಿದೆ. ಕೇರಳವನ್ನು ಹೊರತುಪಡಿಸಿ ಎಲ್ಲಾ ಟೆಲಿಕಾಂ ವಲಯಗಳಿಗೆ ಇದು ಅನ್ವಯಿಸುತ್ತದೆ. ಕರ್ನಾಟಕದ ಗ್ರಾಹಕರಿಗೆ ಈ ಕೊಡುಗೆ ಎಫ್ಎಂಸಿ 499 ರೂ. ಇರುವ ಫೈಬರ್ ಬೇಸಿಕ್ ಯೋಜನೆಗೆ ಅನ್ವಯಿಸುತ್ತದೆ. ಹೊಸ ಗ್ರಾಹಕರು ಎಫ್ಟಿಟಿಎ ಸಂಪರ್ಕ ಪಡೆದ ಕ್ಯಾಲೆಂಡರ್ ತಿಂಗಳು ಸಂಪೂರ್ಣ ಉಚಿತವಾಗಿರುತ್ತದೆ ನಂತರ ಮೊದಲ ಮೂರು ತಿಂಗಳಲ್ಲಿ ತಿಗಳಿಗೆ 100 ರೂ. ರಿಯಾಯಿತಿ ದೊರಕಲಿದೆ ಎಂದರು.
ಬಿಎಸ್ಎನ್ಎಲ್ ಮಂಗಳೂರು ವಿಭಾಗದ ಪ್ರಮುಖ ಅಧಿಕಾರಿಗಳಾದ ಕೃಷ್ಣ ಮೊಗೇರ, ವಿಜಿ ವಿ., ಮಮತಾ ಮತ್ತಿತರರು ಇದ್ದರು.