ಎಂಆರ್‌ಪಿಎಲ್: ಸಿವಿಒ ಆಗಿ ಮೊಹಮ್ಮದ್ ಅಲಿ ಶಿಹಾಬ್ ಅಧಿಕಾರ ಸ್ವೀಕಾರ
Friday, August 14, 2026
ಮಂಗಳೂರು: ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್ಪಿಎಲ್)ನ ಮುಖ್ಯ ಜಾಗೃತತಾ ಅಧಿಕಾರಿ (ಸಿವಿಒ)ಯಾಗಿ 2011ನೇ ಬ್ಯಾಚ್‌ನ ನಾಗಾಲ್ಯಾಂಡ್ ಕೇಡರ್ನ ಐಎಎಸ್ ಅಧಿಕಾರಿ ಮೊಹಮ್ಮದ್ ಅಲಿ ಶಿಹಾಬ್ ಎ. ಅವರು ಬುಧವಾರ ಅಧಿಕಾರ ಸ್ವೀಕರಿಸಿದರು.
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಧೀನದಲ್ಲಿರುವ ಹಾಗೂ ಒಎನ್‌ಜಿಸಿಯ ಅಂಗಸಂಸ್ಥೆಯಾಗಿರುವ ಎಂಆರ್ಪಿಎಲ್ನಲ್ಲಿ ಅವರ ನೇಮಕಾತಿಗೆ ಭಾರತ ಸರ್ಕಾರದ ಸಮರ್ಥ ಪ್ರಾಧಿಕಾರ ಅನುಮೋದನೆ ನೀಡಿತ್ತು.
2011ನೇ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿರುವ ಮೊಹಮ್ಮದ್ ಅಲಿ ಶಿಹಾಬ್ ಅವರು ಆಡಳಿತ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದಾರೆ. ನಾಗಾಲ್ಯಾಂಡ್ ರಾಜ್ಯ ಸಚಿವಾಲಯ ಹಾಗೂ ಜಿಲ್ಲಾ ಆಡಳಿತದಲ್ಲಿ ವಿವಿಧ ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಅವರು, ಸರ್ಕಾರದ ಹಲವು ಪ್ರಮುಖ ಅಭಿವೃದ್ಧಿ ಕ್ಷೇತ್ರಗಳಲ್ಲೂ ಕಾರ್ಯನಿರ್ವಹಿಸಿದ್ದಾರೆ.
ಉತ್ತಮ ಆಡಳಿತ ಫಲಿತಾಂಶಗಳನ್ನು ನೀಡಿದ ಅನುಭವ ಹೊಂದಿರುವ ಮೊಹಮ್ಮದ್ ಅಲಿ ಶಿಹಾಬ್ ಅವರ ನಾಯಕತ್ವದಲ್ಲಿ ಎಂಆರ್ಪಿಎಲ್ನ ಜಾಗೃತತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆ ಇದೆ ಎಂದು ಕಂಪನಿ ತಿಳಿಸಿದೆ.