ಸವದಿಗೆ ಸಚಿವ ಸ್ಥಾನ: ಕಟೀಲು ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಸವದಿ ಪುತ್ರ
Monday, August 3, 2026
ಮಂಗಳೂರು: ರಾಜ್ಯ ಸಚಿವ ಸಂಪುಟದಲ್ಲಿ ಲಕ್ಷ್ಮಣ್ ಸವದಿ ಅವರಿಗೆ ಸಚಿವ ಸ್ಥಾನ ದೊರೆತಿರುವ ಹಿನ್ನೆಲೆಯಲ್ಲಿ, ಅವರ ಪುತ್ರ ಶಶಿಕಾಂತ್ ಸವದಿ ಅವರು ಸೋಮವಾರ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು.
ಪೂಜೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಶಿಕಾಂತ್ ಸವದಿ, "ಕಟೀಲು ಶ್ರೀ ದುರ್ಗಾಪರಮೇಶ್ವರಿ ತಾಯಿಯ ಅಪಾರ ಆಶೀರ್ವಾದದಿಂದಲೇ ನಮ್ಮ ತಂದೆಯವರಿಗೆ ಈ ಉನ್ನತ ಸಚಿವ ಸ್ಥಾನ ಲಭಿಸಿದೆ. ನಿನ್ನೆ ರಾತ್ರಿ ಈ ಸಂತಸದ ವಿಷಯ ನಮಗೆ ತಿಳಿಯಿತು. ನಾನು ವ್ಯವಹಾರ ನಿಮಿತ್ತ ಉಡುಪಿಯಲ್ಲಿದ್ದ ಕಾರಣ, ತಕ್ಷಣವೇ ಕಟೀಲಿಗೆ ಆಗಮಿಸಿ ದೇವಿಯ ದರ್ಶನ ಪಡೆದಿದ್ದೇನೆ. ನಮ್ಮ ಕುಟುಂಬವು ಕಟೀಲು ತಾಯಿಯನ್ನು ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ಆರಾಧಿಸಿಕೊಂಡು ಬರುತ್ತಿದ್ದು, ದೇವಿಯ ಕೃಪೆಯಿಂದಲೇ ಈ ಶುಭ ಸುದ್ದಿ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ತಂದೆಗೆ ಸಚಿವ ಸ್ಥಾನ ದೊರೆಯುವುದು ನಿರೀಕ್ಷಿತವಾಗಿತ್ತು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಂಪುಟದಲ್ಲಿ ಸ್ಥಾನ ಸಿಗುವ ವಿಶ್ವಾಸ ನಮಗಿತ್ತು. ತಂದೆಯವರ ದೀರ್ಘಕಾಲದ ರಾಜಕೀಯ ಶ್ರಮಕ್ಕೆ ಇಂದು ಫಲ ಸಿಕ್ಕಿದೆ ಎಂದು ಹೇಳಿದರು.