ದ.ಕ. ಜಿಲ್ಲೆ: ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ ಸ್ಥಾಪನೆಗೆ ಆಗ್ರಹ
ಮಂಗಳೂರು: ನಗರದ ಪಾಸ್ಪೋರ್ಟ್ ಸೇವಾ ಕೇಂದ್ರದಲ್ಲಿ ಹೆಚ್ಚುತ್ತಿರುವ ಒತ್ತಡ, ಅರ್ಜಿದಾರರ ಸಂಖ್ಯೆ, ಭೌಗೋಳಿಕ ವ್ಯಾಪ್ತಿ, ಜನಸಂಖ್ಯೆ, ವಿದೇಶಗಳಲ್ಲಿ ಉದ್ಯೋಗ ಹಾಗೂ ಶಿಕ್ಷಣಕ್ಕಾಗಿ ತೆರಳುವವರ ಸಂಖ್ಯೆ ಮತ್ತು ಸಾರ್ವಜನಿಕ ಸೇವೆಯ ಅಗತ್ಯತೆಗಳನ್ನು ಆಧಾರವಾಗಿಟ್ಟುಕೊಂಡು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ ಸ್ಥಾಪಿಸುವ ಸಮಯ ಬಂದಿದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಲಾರೆನ್ಸ್ ಡಿಸೋಜಾ ಅಭಿಪ್ರಾಯಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಾದೇಶಿಕ ಕಚೇರಿ ಸ್ಥಾಪನೆಯಾದಲ್ಲಿ ಕರಾವಳಿ ಭಾಗದ ಜನರಿಗೆ ಪಾಸ್ಪೋರ್ಟ್ಗೆ ಸಂಬಂಧಿತ ಆಡಳಿತಾತ್ಮಕ ಸೇವೆಗಳು ಇನ್ನಷ್ಟು ಸುಲಭವಾಗಿ ಮತ್ತು ಪರಿಣಾಮಕಾರಿಯಾಗಿ ದೊರೆಯಲಿವೆ ಎಂದರು. ಇದಲ್ಲದೆ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಸೇರಿದಂತೆ ಕರಾವಳಿ ಹಾಗೂ ಮಲೆನಾಡಿನ ಎಂಟು ಜಿಲ್ಲೆಗಳಲ್ಲೂ ಹೆಚ್ಚುವರಿ ಪಾಸ್ಪೋರ್ಟ್ ಸೇವಾ ಕೇಂದ್ರಗಳನ್ನು ಆರಂಭಿಸಬೇಕು. ಪ್ರಸ್ತುತ ಜನರು ಪಾಸ್ಪೋರ್ಟ್ ಸೇವೆಗಳಿಗಾಗಿ ದೂರದ ಸ್ಥಳಗಳಿಗೆ ಪ್ರಯಾಣಿಸಬೇಕಾದ ಪರಿಸ್ಥಿತಿ ಇದೆ. ಆಯಾ ಜಿಲ್ಲೆಗಳಲ್ಲಿಯೇ ಸೇವಾ ಕೇಂದ್ರಗಳು ಲಭ್ಯವಾದರೆ ಸಾರ್ವಜನಿಕರಿಗೆ ಸಮಯ ಮತ್ತು ವೆಚ್ಚ ಎರಡೂ ಉಳಿತಾಯವಾಗಲಿದೆ ಎಂದು ಹೇಳಿದರು.
ಕೇಂದ್ರ ವಿದೇಶಾಂಗ ಸಚಿವಾಲಯವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾದೇಶಿಕ ಪಾಸ್ಪೋರ್ಟ್ ಕರಿ ಸ್ಥಾಪಿಸುವ ಕಾರ್ಯಸಾಧ್ಯತೆಯ ಕುರಿತು ಸಮಗ್ರ ಅಧ್ಯಯನ ನಡೆಸಲು ಸಮಿತಿಯನ್ನು ರಚಿಸಬೆಕು ಎಂದು ಆಗ್ರಹಿಸಿದ ಅವರು, ಕಳೆದ ಐದು ವರ್ಷಗಳ ಅವಧಿಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಿಂದ ಎಷ್ಟು ಹೊಸ ಪಾಸ್ಪೋರ್ಟ್
ವಿತರಿಸಲಾಗಿದೆ. ಎಷ್ಟು ನವೀಕರಣ ಅರ್ಜಿಗಳು ಬಂದಿವೆ, ಎಷ್ಟು ತತ್ಕಾಲ್ ಪಾಸ್ಪೋರ್ಟ್ ನೀಡಲಾಗಿದೆ, ಪೊಲೀಸ್ ಪರಿಶೀಲನೆಗೆ ಎಷ್ಟು ಅರ್ಜಿಗಳು ಬಂದಿವೆ ಹಾಗೂ ಎಷ್ಟು ಅರ್ಜಿಗಳು ಬಾಕಿ ಉಳಿದಿವೆ ಹಾಗೂ ಅರ್ಜಿಗಳ ಪ್ರಕ್ರಿಯೆಗೆ ಸರಾಸರಿ ಎಷ್ಟು ಸಮಯ ಬೇಕಾಗಿದೆ ಎಂಬುದರ ಸಂಪೂರ್ಣ ದತ್ತಾಂಶವನ್ನು ಅಧ್ಯಯನ ಮಾಡಬೇಕಾಗಿದೆ ಎಂದರು.
2025ರ ದೇಶದ ಪಾಸ್ಪೋರ್ಟ್ ಪ್ರಕ್ರಿಯೆ ಮಾಹಿತಿ ಪ್ರಕಾರ ಕರ್ನಾಟಕದಲ್ಲಿ 10,01,273 ಅರ್ಜಿಗಳು ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿಗೆ ಸಲ್ಲಿಕೆಯಾಗಿದ್ದು, 9,85,831 ಪಾಸ್ಪೋರ್ಟ್ಗಳನ್ನು ನೀಡಲಾಗಿದೆ. ಕೇರಳದ ಕೊಚ್ಚಿಯಲ್ಲಿ 6,90,398 ಅರ್ಜಿಗಳಲ್ಲಿ 6,84,434 ಪಾಸ್ಪೋರ್ಟ್ ನೀಡಲಾಗಿದ್ದು, ಕೋಯಿಕ್ಕೋಡ್ನಲ್ಲಿ 7,42,250 ಅರ್ಜಿಗಳಲ್ಲಿ 7,37,984 ಪಾಸ್ಪೋರ್ಟ್ ನೀಡಲಾಗಿದೆ. ತಮಿಳುನಾಡಿನ ಚೆನ್ನೈನಲ್ಲಿ 5,62,003 ಅರ್ಜಿಗಳಲ್ಲಿ 5,47,410, ಕೊಯಮತ್ತೂರಿನಲ್ಲಿ 2,00,793 ಅರ್ಜಿಗಳಲ್ಲಿ 1,99,035, ಮಧುರೈನಲ್ಲಿ 2,97,689 ಅರ್ಜಿಗಳಲ್ಲಿ 2,90,621 ಪಾಸ್ಪೋರ್ಟ್ಗಳನ್ನು ಒದಗಿಸಲಾಗಿದೆ. ಕೇರಳದಲ್ಲಿ ಹಾಗೂ ತಮಿಳುನಾಡಿನಲ್ಲಿ ತಲಾ ಮೂರು ಪ್ರಾದೇಶಿಕ ಪಾಸ್ಪೋರ್ಟ್ ಕೇಂದ್ರಗಳಿದ್ದರೆ, ರಾಜ್ಯದಲ್ಲಿರುವುದು ಕೇವಲ ಎಂದು ಮಾತ್ರ. ಕೇರಳದಲ್ಲಿ 19 ಪಾಸ್ಪೋರ್ಟ್ ಸೇವಾ ಕೇಂದ್ರಗಳಿದ್ದು, ತಮಿಳುನಾಡಿನಲ್ಲಿ 32 ಹಾಗೂ ಕರ್ನಾಟಕದಲ್ಲಿ ದ.ಕ. ಸೇರಿದಂತೆ 5 ಸೇವಾ ಕೇಂದ್ರಗಳು ಮಾತ್ರವೇ ಕಾರ್ಯ ನಿರ್ವಹಿಸುತ್ತಿವೆ. ಕೇರಳ ಮತ್ತು ತಮಿಳುನಾಡಿಗೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿಯೂ ಸರಾಸರಿ ವಾರ್ಷಿಕ ಸುಮಾರು 10 ಲಕ್ಷದಷ್ಟು ಪಾಸ್ಪೋರ್ಟ್ಗಳು ನೀಡಲಾಗುತ್ತಿದೆ. ಹಾಗಾಗಿ ಕರಾವಳಿಗೆ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿಯ ಅಗತ್ಯವಿದೆ. ಈ ಬಗ್ಗೆ ಜಿಲ್ಲೆಯ ಸಂಸದರು ಗಮನ ಹರಿಸಿ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಅವ್ಯವಸ್ಥೆ..
ಸಿಬ್ಬಂದಿ ಕೊರತೆ, ಅರ್ಜಿದಾರರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಇಲ್ಲದಿರುವುದು, ಪಾರ್ಕಿಂಗ್ ಸಮಸ್ಯೆಯಿಂದಾಗಿ ಮಂಗಳೂರು ಪಾಸ್ಪೋರ್ಟ್ ಸೇವಾ ಕೇಂದ್ರಕ್ಕೆ ದ.ಕ.ದ ವಿವಿಧ ಭಾಗ ಹಾಗೂ ಸುತ್ತಮುತ್ತಲಿನ ವಿವಿಧ ಜಿಲ್ಲೆಗಳಿಂದ ಪ್ರತಿನಿತ್ಯ ಬರುವ ನೂರಾರು ಅರ್ಜಿದಾರರು ತೊಂದರೆ ಅನುಭವಿಸುವಂತಾಗಿದೆ. ತಾಸುಗಟ್ಟಲೆ ಸರತಿ ಸಾಲಿನಲ್ಲಿ ಕಾಯಬೇಕಾದ, ಪಾಸ್ಪೋರ್ಟ್ ಕಚೇರಿ ಹೊರಗಡೆ ಅಲೆದಾಟ ನಡೆಸಬೇಕಾದ ಪರಿಸ್ಥಿತಿ ಇದೆ. ಈ ಬಗ್ಗೆ ಕೇಂದ್ರ ಕೇಂದ್ರ ವಿದೇಶಾಂಗ ಸಚಿವಾಲಯ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ನಗರ ಬ್ಲಾಕ್ ಅಧ್ಯಕ್ಷ ಬಿ. ಪ್ರಕಾಶ್ ಸಾಲಿಯಾನ್, ಮುಖಂಡರಾದ ಶುಭಾಶ್ಚಂದ್ರ ಕೊಲ್ನಾಡು, ನೀರಜ್ಪಾಲ್, ನಿತ್ಯಾನಂದ ಶೆಟ್ಟಿ, ಜಾನ್ ಮೊಂತೆರೋ, ವಹಾಬ್ ಕುದ್ರೋಳಿ ಉಪಸ್ಥಿತರಿದ್ದರು.