'ಅಖಂಡ ಭಾರತ ಸಂಕಲ್ಪ ದಿನ’ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಡಳಿತವು ಬಜರಂಗದಳ ವಿಭಾಗ ಸಂಯೋಜಕ ಪುನೀತ್ ಅತ್ತಾವರ ಅವರ ಮೇಲೆ ಹೇರಿರುವ ಜಿಲ್ಲಾ ಪ್ರವೇಶ ನಿರ್ಬಂಧಕ್ಕೆ ಖಂಡನೆ: ವಿಶ್ವ ಹಿಂದೂ ಪರಿಷದ್
ಮಂಗಳೂರು: ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಆಯೋಜಿಸಲಾಗುವ ‘ಅಖಂಡ ಭಾರತ ಸಂಕಲ್ಪ ದಿನ’ವು ಸಂಪೂರ್ಣವಾಗಿ ದೇಶಭಕ್ತಿಯ ಸದ್ಭಾವನೆಯ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದಲ್ಲಿ ಭಾರತದ ವಿಭಜನೆಯ ಕರಾಳ ಇತಿಹಾಸ, ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹಾಪುರುಷರ ಹಾಗೂ ಕ್ರಾಂತಿಕಾರಿಗಳ ಸ್ಮರಣೆಯನ್ನು ಮಾಡಲಾಗುತ್ತದೆ. ಇದು ಯುವಜನತೆಯಲ್ಲಿ ರಾಷ್ಟ್ರಪ್ರೇಮವನ್ನು ಜಾಗೃತಗೊಳಿಸುವ ಪ್ರಕ್ರಿಯೆಯಾಗಿದೆಯೇ ವಿನಃ, ಇದರಲ್ಲಿ ಯಾವುದೇ ಕೋಮುದ್ವೇಷದ ಹೇಳಿಕೆಗಳಾಗಲಿ ಅಥವಾ ಕೋಮು ಪ್ರಚೋದನೆ ನೀಡುವಂತಹ ಯಾವುದೇ ಅಂಶಗಳಾಗಲಿ ಇರುವುದಿಲ್ಲ.
ಆದರೆ, ಉಡುಪಿ ಜಿಲ್ಲಾಡಳಿತವು ಸಂಪೂರ್ಣ ಸತ್ಯಾಸತ್ಯತೆಗಳನ್ನು ಪರಿಶೀಲಿಸದೆ, ಪುನೀತ್ ಅತ್ತಾವರ ಅವರಿಗೆ ಉಡುಪಿ ಜಿಲ್ಲೆಗೆ ಪ್ರವೇಶಿಸದಂತೆ ತಡೆದು ಆಜ್ಞೆ ಹೊರಡಿಸಿರುವುದು ಅತ್ಯಂತ ಖಂಡನೀಯ ಹಾಗೂ ಪ್ರಜಾಪ್ರಭುತ್ವ ವಿರೋಧಿ ನಡವಳಿಕೆಯಾಗಿದೆ.
ವಿಶ್ವ ಹಿಂದೂ ಪರಿಷತ್ ಈ ಏಕಪಕ್ಷೀಯ ಕ್ರಮವನ್ನು ಬಲವಾಗಿ ಖಂಡಿಸುತ್ತದೆ. ಜಿಲ್ಲಾಡಳಿತವು ತಕ್ಷಣವೇ ತಾನು ವಿಧಿಸಿರುವ ಈ ನಿರ್ಬಂಧವನ್ನು ಹಿಂಪಡೆಯಲು ಬಲವಾಗಿ ಆಗ್ರಹಿಸುತ್ತೇವೆ.