ದರ್ಬೆ ಘಟನೆ ‘ವಾಣಿಜ್ಯ ಭಯೋತ್ಪಾದನೆ’ ಭಾಗ: ಜಗದೀಶ್ ಕಾರಂತ್

ದರ್ಬೆ ಘಟನೆ ‘ವಾಣಿಜ್ಯ ಭಯೋತ್ಪಾದನೆ’ ಭಾಗ: ಜಗದೀಶ್ ಕಾರಂತ್


ಪುತ್ತೂರು: ಹಿಂದೂಗಳು ವ್ಯಾಪಾರ ಕ್ಷೇತ್ರದಿಂದ ಹಿಂದೆ ಸರಿಯಬೇಕು ಎಂಬ ವಾಣಿಜ್ಯ ಭಯೋತ್ಪಾದನೆಯ ಮೊದಲ ಘಟನೆ ಇದಾಗಿದ್ದು, ಇದು ಅನಿರೀಕ್ಷಿತ ಘಟನೆಯಲ್ಲ. ಮತಾಂಧತೆಯ ಮನಸ್ಥಿತಿಯ ಪ್ರದರ್ಶನ ಎಂದು ಹಿಂದೂ ಜಾಗರಣಾ ವೇದಿಕೆಯ ಮುಖಂಡ ಜಗದೀಶ್ ಕಾರಂತ್ ಆರೋಪಿಸಿದರು.

ಅವರು ದರ್ಬೆ ಘಟನೆಯಲ್ಲಿ ಗಾಯಗೊಂಡು ಪುತ್ತೂರಿನ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಂಜನಾ ಪೈ ಅವರನ್ನು ಬುಧವಾರ ಭೇಟಿ ಮಾಡಿದ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದರು. 

ಎಲ್ಲಾ ಅಂಗಡಿಗಳಲ್ಲಿಯೂ ತಪ್ಪುಗಳು ನಡೆಯುತ್ತವೆ. ಜೆರಾಕ್ಸ್ ಅಂಗಡಿಯೊಂದರಲ್ಲಿ ನಡೆದ ದಾಖಲೆ ಸುಟ್ಟ ಅಚಾನಕ್ ಘಟನೆಗೆ ಕ್ಷಣಾರ್ಧದಲ್ಲಿ ನೂರಾರು ಮಂದಿ ಬಂದು ದಾಳಿ ನಡಸಿದ ಹಿಂದಿನ ದುರುದ್ದೇಶ ಮೊದಲು ಬಹಿರಂಗವಾಗಬೇಕು. ತಪ್ಪು ನಡೆದಾಗ ಗೂಂಡಾಗಿರಿ ಮತ್ತು ಹಲ್ಲೆ ನಡೆಸುವುದೇ ಉತ್ತರವೆಂದಾದರೆ ಮುಂದಿನ ದಿನಗಳಲ್ಲಿ ರಸ್ತೆ-ರಸ್ತೆಗಳಲ್ಲಿ ಕಾದಾಟ ಆರಂಭವಾಗುವ ಸ್ಥಿತಿ ನಿರ್ಮಾಣವಾಗಬಹುದು. ಸಮಾಜದಲ್ಲಿ ಶಾಂತಿ ಕಾಪಾಡುವ ಸಾಮಾಜಿಕ ಪ್ರಜ್ಞೆ ಇರುವವರು ಈ ವಿಚಾರವನ್ನು ಗಂಭೀರವಾಗಿ ಗಮನಿಸಬೇಕು ಎಂದು ಅವರು ಹೇಳಿದರು. 

ಸಿಂಗಂ ವೇಷದಲ್ಲಿ ರಾಜಕೀಯ ಬಕೆಟ್‌ಗಿರಿ ಬೇಡ..:

ದರ್ಬೆ ಘಟನೆಯಲ್ಲಿ ಮಹಿಳೆಯ ಮೇಲೆ ಕೊಲೆಯತ್ನದಂತಹ ಗಂಭೀರ ಪ್ರಕರಣ ದಾಖಲಾಗಿದೆ. ಮೂಳೆ ಮುರಿದು ಆಸ್ಪತ್ರೆ ಸೇರಿದವರ ಮೇಲೆ ಪ್ರಕರಣಗಳಿವೆ. ಆದರೆ ಈ ಕೃತ್ಯಕ್ಕೆ ಕಾರಣವಾದವರ ಮೇಲೆ ಪ್ರಕರಣ ಅಥವಾ ಬಂಧನ ಮಾಡುವುದು ಕಂಡುಬರುತ್ತಿಲ್ಲ. ಈ ಅಧಿಕಾರಿಗಳು ಯಾರನ್ನು ತೃಪ್ತಿಪಡಿಸಲು ಮುಂದಾಗಿದ್ದಾರೆ ಎಂದು ಪ್ರಶ್ನಿಸಿದ ಜಗದೀಶ್ ಕಾರಂತ್ ಕೇವಲ ಸಿಂಗಂ ವೇಷ ಹಾಕಿಕೊಂಡು ಒಂದು ಸಮಾಜದ ಭಾವನೆಗಳನ್ನು ಹತ್ತಿಕ್ಕುವ, ಬಲ ಪ್ರಯೋಗದ ಮೂಲಕ ಸಮಾಜವನ್ನು ತುಳಿಯುವ ಪ್ರಯತ್ನ ನಡೆಸುವುದನ್ನು ಹಿಂದೂ ಸಮಾಜ ಸಹಿಸುವುದಿಲ್ಲ. ಎಲ್ಲರ ಮೇಲೂ ಒಂದೇ ರೀತಿಯ ಕಾನೂನು ಕ್ರಮ ಜರುಗಿಸಬೇಕಿತ್ತು. ಆದರೆ ಬೇರೆ ಬೇರೆ ಸಬೂಬುಗಳನ್ನು ನೀಡಿ ಪತ್ರಿಕಾಗೋಷ್ಠಿಗಳಲ್ಲಿ ಸಮರ್ಥನೆ ನೀಡುವ ಪ್ರಯತ್ನ ಮಾಡಬಾರದು. ರಾಜಕೀಯ ಬಕೆಟ್‌ಗಿರಿಯನ್ನು ಜಾಗೃತ ಸಮಾಜ ಸಹಿಸುವುದಿಲ್ಲ. ಮೊದಲು ಭಯೋತ್ಪಾದನೆಯ ಮನೋಭಾವವನ್ನು ನಿಲ್ಲಿಸಬೇಕು. ನಿಮ್ಮ ದಕ್ಷತೆಗೆ ಹಾಗೂ ಸಿಂಗಂ ‘ಗಿರಿ’ ಇದೊಂದು ಸವಾಲಾಗಿದೆ ಎಂದರು. 

ಆ.31ಕ್ಕೆ ಪುತ್ತೂರು ಚಲೋ ಕಾರ್ಯಕ್ರಮ:

ಹಿಂದೂ ಸಮಾಜಕ್ಕೆ ಪ್ರಾಮಾಣಿಕವಾಗಿ ನ್ಯಾಯ ಮತ್ತು ರಕ್ಷಣೆ ದೊರೆಯದಿದ್ದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯವನ್ನು ಹುಡುಕುವ ಹಾಗೂ ಅದನ್ನು ಪಡೆಯುವ ಹಕ್ಕು ಮತ್ತು ಶಕ್ತಿ ಹಿಂದೂ ಸಮಾಜಕ್ಕಿದೆ. ಅದನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ನ್ಯಾಯಕ್ಕಾಗಿ ಮೂರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಆ.31ರಂದು ಪುತ್ತೂರು ಚಲೋ’ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ಹತ್ತಿಕ್ಕುವ ರೀತಿಯಲ್ಲಿ ರಾಜಕೀಯ ಮುಂದುವರಿದರೆ ಹಿಂದೂ ಸಮಾಜದ ತಾಳ್ಮೆ ಯಾವ ಹಂತದಲ್ಲಾದರೂ ತಪ್ಪಬಹುದು ಎಂದು ಅವರು ಎಚ್ಚರಿಸಿದರು.

ಹಿಂದು ಜಾಗರಣ ವೇದಿಕೆಯ ಪ್ರಾಂತ ಸಂಘಟನಾ ಕಾರ್ಯದರ್ಶಿ ಪ್ರಶಾಂತ್, ರವಿರಾಜ್ ಶೆಟ್ಟಿ ಕಡಬ, ಜಿಲ್ಲಾ ಸಂಯೋಜಕ ಮೋಹನ್ ದಾಸ್ ಕಾಣಿಯೂರು, ಸುಪ್ರಿತ್, ಪ್ರಶಾಂತ್ ಕೆಂಪುಗುಡ್ಡೆ, ಅಜಿತ್ ರೈ ಹೊಸಮನೆ ಸಹಿತ ಹಲವಾರು ಮಂದಿ ಜೊತೆಗಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article