ವೈವಿಧ್ಯತೆಗೆ ಒಡಕು ಉಂಟು ಮಾಡುವ ಮಾನಸಿಕತೆ ವಿರುದ್ಧ ಹೋರಾಡಲು ಸಿ.ಟಿ. ರವಿ ಕರೆ
ಶುಕ್ರವಾರ ಪುತ್ತೂರಿನಲ್ಲಿ ತಿರಂಗಾ ಯಾತ್ರಾ ಸಮಿತಿಯ ವತಿಯಿಂದ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಿಂದ ಕಿಲ್ಲೆ ಮೈದಾನದವರೆಗೆ ನಡೆದ ಬೃಹತ್ ತಿರಂಗಾ ಯಾತ್ರೆಯ ಬಳಿಕ ಪುರಭವನದ ಸಮಾವೇಶದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ನಮ್ಮ ಹಿರಿಯರ ರಕ್ತವೂ ಸೇರಿದ್ದು, ಎನ್.ಎಸ್.ಕಿಲ್ಲೆ, ಕೆದಂಬಾಡಿ ರಾಮಯ್ಯ ಗೌಡ, ಮಂಜ ಬೈದ್ಯರಂತಹ ಹಲವು ಹೋರಾಟಗಾರರು ಎಲೆಮರೆಯ ಕಾಯಿಯ ರೀತಿ ಪ್ರಾಣತ್ಯಾಗ ಮಾಡಿದ್ದಾರೆ. ದೇಶದಲ್ಲಿ ಭಯೋತ್ಪಾದಕರು ಬಾಲ ಬಿಚ್ಚಿದಾಗ ಬಾಲ ಕಟ್ ಮಾಡುವುದಲ್ಲ. ಅವರ ತಲೆ ಕಟ್ ಮಾಡಬೇಕು. ಹೀಗೆ ನೇರವಾಗಿ ಹೇಳಿದರೆ ನಮ್ಮ ಮೇಲೆ ಕೇಸ್ ಹಾಕುವವರೂ ಇದ್ದಾರೆ ಎಂದ ಅವರು ಪ್ರಧಾನಿ ಮೋದಿಯವರು ಬಡವರಿಗೆ ಬಲ ಕೊಡುವ ಯೋಜನೆಗಳನ್ನು ತಂದು ಬಲಿಷ್ಠ ಭಾರತ ನಿರ್ಮಾಣಕ್ಕೆ ಪ್ರಯತ್ನಿಸುತ್ತಾರೆ ಎಂದರು.
ಕಾಂಗ್ರೇಸ್ ಆಡಳಿತದ ಕಾಲದಲ್ಲಿ ಸೈನಿಕರ ಜಾತಿ ಲೆಕ್ಕ ಹಾಕುವ ಕಾರ್ಯವೂ ನಡೆದಿತ್ತು. ಇದು ಅಪಾಯಕಾರಿ ಮನಸ್ಥಿತಿ. ಭಾರತ ವಿಭಜನೆಯ ಬಳಿಕವೂ ವಿಭಜನೆಯ ಮನೋಸ್ಥಿತಿ ಇನ್ನೂ ಜೀವಂತವಾಗಿದ್ದು, ರಾಷ್ಟ್ರೀಯತೆಯ ವಿರುದ್ಧ ಪ್ರಾದೇಶಿಕತೆಯನ್ನು ಎತ್ತಿಕಟ್ಟುವ ಪ್ರಯತ್ನಗಳೂ ನಡೆಯುತ್ತಿದೆ. ಭಾರತ್ ಮಾತಾ ಕೀ ಜೈ ಎನ್ನುವುದು ಕೂಡ ಪ್ರಚೋದನಕಾರಿ ಎಂಬ ಮನೋಸ್ಥಿತಿ ದೇಶದಲ್ಲಿದೆ ಎಂದರು.
ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ, ಪ್ರಧಾನಿ ಮೋದಿಯವರ ವಿಕಸಿತ ಭಾರತ ಕಲ್ಪನೆಗೆ ದೇಶದ ತ್ರಿವರ್ಣ ಧ್ವಜ, ರಾಷ್ಟ್ರಗೀತೆ ಪ್ರತಿ ಭಾರತೀಯರಿಗೂ ಪ್ರೇರಣೆಯಾಗಬೇಕಿದ್ದು, ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ರಾಷ್ಟ್ರ, ಪ್ರಧಾನಿಯವರಿಗೆ ಶಕ್ತಿ ತುಂಬುವ ಕಾರ್ಯ ಮಾಡಬೇಕು ಎಂದರು.
ಬಿಜೆಪಿ ದ.ಕ.ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ವಿಕಸಿತ ಭಾರತ ಕಲ್ಪನೆಗೆ ಸ್ಫೂರ್ತಿಯಾಗಿ ಪ್ರಧಾನಿ ಅವರು ತಿರಂಗಾ ಯಾತ್ರೆಯನ್ನು ಘೋಷಣೆ ಮಾಡಿದ್ದು, ಪುತ್ತೂರಿನ ಈ ಯಾತ್ರೆಯು ಇಡೀ ರಾಜ್ಯಕ್ಕೆ ಪ್ರೇರಣೆಯಾಗಿದೆ ಎಂದರು.
ಜಿಲ್ಲೆಯ ಶಾಸಕರಾದ ಹರೀಶ್ ಪೂಂಜ, ಡಾ. ವೈ. ಭರತ್ ಶೆಟ್ಟಿ, ಡಿ.ವೇದವ್ಯಾಸ ಕಾಮತ್, ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಉಮಾನಾಥ ಕೋಟ್ಯಾನ್, ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಮಾಜಿ ಶಾಸಕಿ ರೂಪಾಲಿ ನಾಯ್ಕ್, ಬಿಜೆಪಿ ವಿಭಾಗ ಪ್ರಭಾರಿ ಭಾರತೇಶ್ ಪಾಲ್ಗೊಂಡಿದ್ದರು.
ದೇವಸ್ಥಾನದ ಬಳಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಹೈಕೋರ್ಟ್ ನ್ಯಾಯವಾದಿ ಅರುಣ್ ಶ್ಯಾಮ್ ಅವರು ಮೆರವಣಿಗೆಗೆ ಚಾಲನೆ ನೀಡಿದರು. ಮಾಜಿ ಶಾಸಕ ಸಂಜೀವ ಮಠಂದೂರು ಪ್ರಾಸ್ತಾವಕವಾಗಿ ಮಾತನಾಡಿದರು. ಪುತ್ತೂರು ಗ್ರಾಮಾಂತರ ಬಿಜೆಪಿ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್ ಸ್ವಾಗತಿಸಿದರು. ನಗರ ಅಧ್ಯಕ್ಷ ಶಿವಕುಮಾರ್ ಕಳ್ಳಿಮಾರ್ ವಂದಿಸಿದರು. ಹರಿಪ್ರಸಾದ್ ಯಾದವ್ ಕಾರ್ಯಕ್ರಮ ನಿರ್ವಹಿಸಿದರು.