ಅಕ್ರಮ ಜಾನುವಾರು ಸಾಗಾಟ: ಚಾಲಕ ವಶ
Sunday, August 23, 2026
ಪುತ್ತೂರು: ಪುತ್ತೂರಿನ ಆನಡ್ಕ ಕಡೆಯಿಂದ ಪಡೀಲ್ ಕಡೆಗೆ ಪಿಕ್‌ಅಪ್ ಒಂದರಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಜಾನುವಾರುಗಳನ್ನು ಪುತ್ತೂರು ನಗರಠಾಣಾ ಪಿಎಸೈ ಸುರೇಶ್ ಸಿ.ಟಿ ಮತ್ತು ತಂಡ ಕಾರ್ಯಾಚರಣೆ ಮೂಲಕ ಪತ್ತೆ ಹಚ್ಚಿದೆ. ಈ ಸಂಬಂಧ ಪಿಕ್‌ಅಪ್ ಚಾಲಕನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಪೊಲೀಸರ ವಶವಾದ ಆರೋಪಿಯನ್ನು ಮಹಮ್ಮದ್ ಜಬ್ಬಾರ್ ಎಂದು ಗುರುತಿಸಲಾಗಿದೆ.
ಪುತ್ತೂರು ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ಲು ಎಂಬಲ್ಲಿ ಪೊಲೀಸರು ವಾಹನವನ್ನು ತಡೆದು ನೋಡಿದಾಗ ಅದರಲ್ಲಿ ಮೂರು ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿಹಾಕಿರುವುದು ಕಂಡುಬಂದಿದೆ.
ಈ ಜಾನುವಾರುಗಳನ್ನು ಶಾಂತಿಗೋಡು ಗ್ರಾಮದ ಅಶೋಕ್ ಎಂಬವರಿಂದ ಖರೀದಿಸಿ ಪರವಾನಿಗೆ ರಹಿತವಾಗಿ ಸಾಗಾಟ ಮಾಡಲಾಗುತ್ತಿದ್ದು, ವಧೆ ಮಾಡುವ ಉದ್ದೇಶದಿಂದ ಸಾಗಿಸಲಾಗುತ್ತಿದೆ ಎಂದು ಬಂಧಿತ ಆರೋಪಿ ಮಾಹಿತಿ ನೀಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ನಗರಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.