ದರ್ಬೆ ಘಟನೆ ಕೋಮುಬಣ್ಣ ಹಚ್ಚಬೇಡಿ: ಪುತ್ತೂರಲ್ಲಿ ಎಸ್‌ಪಿ ಎಚ್ಚರಿಕೆ
ದರ್ಭೆ ಗಲಾಟೆಯ ಹಿನ್ನಲೆಯಲ್ಲಿ ಪುತ್ತೂರಿಗೆ ಭೇಟಿ ನೀಡಿದ ಅವರು ಭಾನುವಾರ ಮಾದ್ಯಮಗಳೊಂದಿಗೆ ಮಾತನಾಡಿದರು. ದರ್ಬೆ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ 3 ಪ್ರಕರಣಗಳನ್ನು ದಾಖಲಿಸಲಾಗಿದೆ. ಇದರಲ್ಲಿ ಸುದರ್ಶನ ಪೈ ಎಂಬಾತನನ್ನು ಬಂಧಿಸಲಾಗಿದೆ. ಈತನ ವಿರುದ್ಧ ಈ ಹಿಂದೆ ಬೆಂಗಳೂರಿನ ರಾಮನಗರ ಜಿಲ್ಲೆಯಲ್ಲಿ ನಡೆದ ಕೊಲೆಪ್ರಕರಣಕ್ಕೆ ಸಂಬಂಧಿಸಿ ಹಾಗೂ ಮಂಗಳೂರಿನಲ್ಲಿ ಮಾದಕದ್ರವ್ಯ ವಿತರಣೆಗೆ ಸಂಬಂಧಿಸಿ ಪ್ರಕರಣಗಳು ದಾಖಲಾಗಿದೆ. ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ನೌಶಾದ್ ವಿರುದ್ದವೂ ಈ ಹಿಂದೆ ಒಂದು ಪ್ರಕರಣ ದಾಖಲಾಗಿದೆ. ಸದಾಶಿವ ಪೈ ವಿರುದ್ದವೂ ಈ ಹಿಂದೆ ಒಂದು ಪ್ರಕರಣ ದಾಖಲಾಗಿದೆ.
ಈ ಘಟನೆಗೆ ಸಂಬಂಧಿಸಿ ಎಲ್ಲಾ ವೀಡಿಯೊಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಯಾವುದೇ ಕೇಸುಗಳನ್ನು ಧರ್ಮದ ಆಧಾರ ಅಥವಾ ಸಾರ್ವಜನಿಕರ ಒತ್ತಡದ ಮೇಲೆ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ನಾವು ನ್ಯಾಯಾಲಯಕ್ಕೆ ದಾಖಲೆ ಕೊಡಬೇಕಾಗುತ್ತದೆ. ಆ ದಾಖಲೆಗಳನ್ನು ಸಂಗ್ರಹಿಸಿ ಎಲ್ಲಾ ಪ್ರಕರಣಗಳಿಗೆ ಸಂಬಂಧಿಸಿ ಕ್ರಮ ಕೈಗೊಳ್ಳುತ್ತೇವೆ. ಎರಡೂ ಕಡೆಗಳಿಂದ ಅವರನ್ನು ಬಂಧಿಸಿ, ಇವರನ್ನು ಬಂಧಿಸಿ ಎಂಬ ಬೇಡಿಕೆಗಳಿವೆ. ಆದರೆ ಪರಿಶೀಲನೆ ಮಾಡಿದ ಬಳಿಕವೇ ಕ್ರಮಕೈಗೊಳ್ಳುತ್ತೇವೆ.
ಬಂದ್ ಕರೆ ಇಲ್ಲೀಗಲ್-ಕ್ರಮ:
ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪ್ರಕರಣಕ್ಕೆ ಸಂಬಂಧಿಸಿ ನೌಶಾದ್ ಎಂಬಾತನಿಗೆ ಈಗಾಗಲೇ ನೋಟೀಸು ನೀಡಲಾಗಿದೆ. ಪರಿಶೀಲನೆ ಮಾಡಿದ ಬಳಿಕ ಕ್ರಮ ಜರಗಿಸಲಾಗುತ್ತದೆ. ನೌಶಾದ್ ನನ್ನು 48 ಗಂಟೆಗಳೊಳಗೆ ಬಂಧನ ಮಾಡದಿದ್ದರೆ ಹಿಂದೂ ಜಾಗರಣಾ ವೇದಿಕೆ ಪುತ್ತೂರು ಜಿಲ್ಲಾಬಂದ್ ಮಾಡುವುದಾಗಿ ತಿಳಿಸಿದೆ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಬಂದ್ ಎನ್ನುವುದು ಇಲ್ಲೀಗಲ್ ಆಗುತ್ತದೆ. ಅದರ ಬಗ್ಗೆ ಕ್ರಮಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದರು.
ದರ್ಬೆಯಲ್ಲಿ ಗುಂಪು ಚದುರಿಸಲು ಲಘುಲಾಠಿ ಪ್ರಹಾರ ಮಾಡಿದ ಪೊಲೀಸರು ಪುತ್ತೂರು ಸರ್ಕಾರಿ ಆಸ್ಪತ್ರೆ ಬಳಿಗೂ ಹೋಗಿದ್ದಾರೆ. ಆಗ ಸಾರ್ವಜನಿಕರು ಪೊಲೀಸರು ಕುಡಿದಿದ್ದಾರೆ ಅವರು ಇಲ್ಲಿ ಬರಬಾರದು ಎಂದು ವಾದಿಸಿದ್ದಾರೆ. ತಕ್ಷಣ ಅವರನ್ನು ಅಲ್ಲಿಂದ ಕಳುಹಿಸಲಾಗಿದೆ. ಅದನ್ನು ಬಿಟ್ಟರೆ ಅಂತಹ ಘಟನೆಗಳು ನಡೆದಿಲ್ಲ. ಸಾರ್ವಜನಿಕರು ಮಾತನಾಡಿದ್ದನ್ನೇ ಕರ್ತವ್ಯಕ್ಕೆ ಅಡ್ಡಿ ಎಂದು ಭಾವಿಸಲು ಆಗುವುದಿಲ್ಲ. ಪೊಲೀಸರು ಅಲ್ಲಿಗೆ ವೀಡಿಯೊ ಮಾಡಲು ಹೋಗಿದ್ದಾರೆ. ಅದಕ್ಕೆ ಯಾವುದೇ ಅಡ್ಡಿ ಮಾಡಿಲ್ಲ ಎಂದು ಎಸ್.ಪಿ ಅವರು ಸ್ಪಷ್ಟೀಕರಿಸಿದರು.