ಪ್ರಕರಣಗಳಲ್ಲಿ ನಿಷ್ಪಕ್ಷಪಾತ ತನಿಖೆ: ದರ್ಬೆ ಘಟನೆ ಹಿನ್ನಲೆ-ಪುತ್ತೂರಿನಲ್ಲಿ ಶಾಂತಿಸಭೆಯಲ್ಲಿ ಡಿವೈಎಸ್ಪಿ ಪ್ರಮೋದ್ ಕುಮಾರ್

ಪ್ರಕರಣಗಳಲ್ಲಿ ನಿಷ್ಪಕ್ಷಪಾತ ತನಿಖೆ: ದರ್ಬೆ ಘಟನೆ ಹಿನ್ನಲೆ-ಪುತ್ತೂರಿನಲ್ಲಿ ಶಾಂತಿಸಭೆಯಲ್ಲಿ ಡಿವೈಎಸ್ಪಿ ಪ್ರಮೋದ್ ಕುಮಾರ್


ಪುತ್ತೂರು: ಪ್ರತಿಯೊಂದು ಹಬ್ಬಗಳೂ ಸಮಾಜದಲ್ಲಿ ಶಾಂತಿ-ಸಾಮರಸ್ಯದ ಪಾಠ ಮಾಡಬೇಕಾಗಿದೆ. ಹಾಗಾಗಿ ಹಬ್ಬಗಳ ಸಂದರ್ಭದಲ್ಲಿ ಯಾವುದೇ ಪೂರ್ವಧ್ವೇಷಗಳನ್ನು ಮನಸ್ಸಲ್ಲಿ ಇಟ್ಟುಕೊಳ್ಳದೆ ಆಚರಣೆ ಮಾಡಬೇಕು. ದರ್ಬೆಯ ಘಟನೆ ಬಗ್ಗೆ ಪೊಲೀಸ್ ಇಲಾಖೆ ಪ್ರಕರಣಗಳನ್ನು ದಾಖಲಿಸಿಕೊಂಡು ನಿಷ್ಪಕ್ಷಪಾತವಾಗಿ ತನಿಖೆ ಮಾಡುತ್ತಿದೆ ಎಂದು ಪುತ್ತೂರು ಡಿವೈಎಸ್ಪಿ ಪ್ರಮೋದ್ ಕುಮಾರ್ ಹೇಳಿದರು. 

ಅವರು ಭಾನುವಾರ ಸಂಜೆ ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಪುತ್ತೂರು ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆಯ ವತಿಯಿಂದ ನಡೆದ ಶಾಂತಿಸಭೆಯಲ್ಲಿ ಮಾತನಾಡಿದರು. 

ಹಬ್ಬದ ವಿಚಾರಕ್ಕೆ ಸಂಬಂಧಿಸಿ ಈಗಾಗಲೇ ಪ್ರತಿ ಠಾಣಾ ಮಟ್ಟದಲ್ಲೂ ಶಾಂತಿ ಸಭೆಗಳು ನಡೆದಿದ್ದು, ಆದರೆ ಕಳೆದೆರಡು ದಿನಗಳ ಹಿಂದೆ ದರ್ಬೆಯಲ್ಲಿ ನಡೆದ ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ಎಸ್ಪಿಯವರ ಸೂಚನೆಯಂತೆ ಈಗ ಮತ್ತೊಂದು ಸಭೆಯನ್ನು ನಡೆಸಿ ಪ್ರತಿಯೊಬ್ಬರ ಅಭಿಪ್ರಾಯಗಳನ್ನು ಪಡೆದಿದ್ದೇವೆ. ದರ್ಬೆ ಘಟನೆಯ ಪ್ರಕರಣ ತನಿಖಾ ಹಂತದಲ್ಲಿದ್ದು, ತನಿಖೆ ಬಹಳ ಪಾರದರ್ಶಕವಾಗಿ ಸಾಗುತ್ತಿದೆ. ಎಲ್ಲಾ ವಿಚಾರಗಳ ಕುರಿತು ಮಾಹಿತಿ ಪಡೆದುಕೊಂಡು ನಾವು ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಕೆ ಮಾಡುತ್ತೇವೆ. ತಪ್ಪು ಮಾಡಿದವರು ಅದರ ಫಲವನ್ನು ಅನುಭವಿಸುತ್ತಾರೆ. ಎಲ್ಲರೂ ಕೂಡ ಇತಿಮಿತಿಗಳನ್ನು ಅರಿತುಕೊಂಡು ಈ ನೆಲದ ಕಾನೂನನ್ನು ತಿಳಿದುಕೊಂಡು, ಅದರ ಮೇಲೆ ನಂಬಿಕೆ ಇಡಬೇಕಾಗುತ್ತದೆ. ಹಬ್ಬಗಳ ಆಚರಣೆಗೆ ಕಾನೂನು ಪ್ರಕಾರ ಇಲಾಖೆಗಳು ಅನುಮತಿ ನೀಡುತ್ತದೆ ಎಂದರು.

ಪುತ್ತೂರು ಸಹಾಯಕ ಕಮೀಷನರ್ ಸ್ಟೆಲ್ಲಾ ವರ್ಗೀಸ್ ಮಾತನಾಡಿ, ಪ್ರತಿ ಧರ್ಮಗಳ ಹಬ್ಬದ ಸಂದೇಶ ಜಗತ್ತಿನ ಒಳಿತಾಗಿದ್ದು, ಅಂತಹ ಹಬ್ಬಗಳನ್ನು ಆಚರಣೆ ಮಾಡುವ ಸಂದರ್ಭದಲ್ಲಿ ಇನ್ನೊಬ್ಬರಿಗೆ ತೊಂದರೆ ಆಗದ ರೀತಿ ಆಚರಿಸಬೇಕು. ಬುದ್ಧಿವಂತರ ಜಿಲ್ಲೆ ಎಂಬ ಹೆಸರು ಪಡೆದಿರುವ ದಕ್ಷಿಣ ಕನ್ನಡವು ಕೆಟ್ಟ ವಿಚಾರಗಳಿಗೆ ಪ್ರಚಾರ ಪಡೆಯಬಾರದು ಎಂದರು.

ಪುತ್ತೂರು ತಹಶೀಲ್ದಾರ್ ಎಸ್.ಬಿ.ಕೂಡಲಗಿ ಮಾತನಾಡಿ, ಪ್ರತಿ ಹಬ್ಬಗಳನ್ನು ಪ್ರೀತಿ-ವಿಶ್ವಾಸ, ಸಹೋದರತೆಯಿಂದ ಆಚರಣೆ ಮಾಡಬೇಕು ಎಂದರು.

ವಿವಿಧ ಸಂಘಟನೆಗಳ ಪ್ರಮುಖರಾದ ಕಾವು ಹೇಮನಾಥ ಶೆಟ್ಟಿ, ಗೋಳಿಕಟ್ಟೆ ಇಬ್ರಾಹಿಂ, ಹನೀಫ್ ಬಗ್ಗುಮೂಲೆ, ಹಮೀದ್ ಸಾಲ್ಮರ, ಅಝಾದ್ ಅಬ್ದುಲ್ ರಹಿಮಾನ್, ಅಶ್ರಫ್ ಕಲ್ಲೇಗ, ಲ್ಯಾನ್ಸಿ ಮಸ್ಕರೇನಸ್, ಕೆ.ಎ.ಸಿದ್ದೀಕ್, ಮೌರಿಸ್ ಮಸ್ಕರೇನಸ್ ಮೊದಲಾದವರು ಅಭಿಪ್ರಾಯ ಮಂಡಿಸಿದರು.

ಪುತ್ತೂರು ನಗರ ಠಾಣಾ ಇನ್ಸ್‌ಪೆಕ್ಟರ್ ಜಾನ್ಸನ್ ಡಿಸೋಜ, ಮಹಿಳಾ ಠಾಣಾ ಇನ್ಸ್‌ಪೆಕ್ಟರ್ ಸುನೀಲ್ ಕುಮಾರ್, ಗ್ರಾಮಾಂತರ ಠಾಣಾ ಪಿಎಸ್‌ಐ ಗುಣಪಾಲ್, ಸಂಚಾರ ಠಾಣಾ ಪಿಎಸ್‌ಐ ಸುಹಾಸ್ ಆರ್. ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article