ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ ‘ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ’

ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ ‘ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ’


ಪುತ್ತೂರು: ಭಾರತದ ಗ್ರಂಥಾಲಯ ವಿಜ್ಞಾನದ ಪಿತಾಮಹ, ಪದ್ಮಶ್ರೀ ಡಾ. ಎಸ್.ಆರ್. ರಂಗನಾಥನ್ ಅವರ ೧೩೪ನೇ ಜನ್ಮದಿನದ ಅಂಗವಾಗಿ, ಇಲ್ಲಿನ ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ವತಿಯಿಂದ ಕಾಲೇಜಿನ ಸಿಲ್ವರ್ ಜುಬಿಲಿ ಸಭಾಭವನದಲ್ಲಿ ‘ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ-2026’ ಅನ್ನು ಆಚರಿಸಲಾಯಿತು.


ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಪುತ್ತೂರು ಮಹಿಳಾ ಕಾಲೇಜಿನ ಪ್ರಾಚಾರ್ಯ ನಂದಕಿಶೋರ್ ಎಸ್. ಅವರು ಮಾತನಾಡಿ, ಯಾವುದೇ ಶಿಕ್ಷಣ ವ್ಯವಸ್ಥೆಯ ಹೃದಯವೆಂದರೆ ಅದು ಗ್ರಂಥಾಲಯ. ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ನಿರಂತರ ಭೇಟಿ ನೀಡುವುದನ್ನು ರೂಢಿಸಿಕೊಳ್ಳಬೇಕು ಮತ್ತು ಪುಸ್ತಕಗಳ ಬಗ್ಗೆ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು. ಇಂದಿನ ಯುವಜನತೆ ಮೊಬೈಲ್ ಗೀಲಿನಿಂದ ಹೊರಬರಬೇಕು ಎಂದು ಕರೆ ನೀಡಿದರು. 


ಪ್ರತಿದಿನ ದಿನಪತ್ರಿಕೆಗಳು ಹಾಗೂ ಸ್ಪರ್ಧಾತ್ಮಕ ನಿಯತಕಾಲಿಕೆಗಳನ್ನು ಓದುವುದರ ಮೂಲಕ ಜೀವನದಲ್ಲಿ ಯಾವ ರೀತಿ ಉನ್ನತ ಸ್ಥಾನಕ್ಕೇರಬಹುದು ಎಂಬುದನ್ನು ಅವರು ಉದಾಹರಣೆ ಸಮೇತ ವಿದ್ಯಾರ್ಥಿಗಳಿಗೆ ವಿವರಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಉಪಪ್ರಾಚಾರ್ಯ ಡಾ. ವಿಜಯಕುಮಾರ್ ಎಂ. ಮಾತನಾಡಿ, ಡಾ. ಎಸ್.ಆರ್. ರಂಗನಾಥ್ ಅವರು ಭಾರತದಲ್ಲಿ ಗ್ರಂಥಾಲಯ ವಿಜ್ಞಾನದ ಬೆಳವಣಿಗೆಯಲ್ಲಿ ಯಾರೂ ಮರೆಯಲಾರದ ಕೊಡುಗೆಯನ್ನು ನೀಡಿದ್ದಾರೆ. ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವ ಅಭ್ಯಾಸವನ್ನು ರೂಢಿಸಿಕೊಂಡರೆ ಜ್ಞಾನಾರ್ಜನೆಯನ್ನು ಪಡೆಯುವುದರೊಂದಿಗೆ ಸಮಾಜದ ಏಳಿಗೆಯಲ್ಲಿ ಅತ್ಯುತ್ತಮ ಪಾತ್ರ ನಿರ್ವಹಿಸಬಹುದು ಎಂದು ಹೇಳಿದರು.

ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ‘ಡಿಜಿಟಲ್ ಯುಗದಲ್ಲಿ ಗ್ರಂಥಾಲಯದ ಮಹತ್ವ’ ಕುರಿತ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಿ ಗೌರವಿಸಲಾಯಿತು.

ಕಾಲೇಜಿನ ಆಯ್ಕೆ ಶ್ರೇಣಿ ಗ್ರಂಥಪಾಲಕ ಅಬ್ದುಲ್ ರೆಹಮಾನ್ ಸ್ವಾಗತಿಸಿದರು. ಸ್ನಾತಕೋತ್ತರ ವಿಭಾಗದ ಗ್ರಂಥಪಾಲಕ ಮನೋಹರ್ ವಂದಿಸಿದರು. ಲಲಿತಕಲಾ ಸಂಘದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಅಂತಿಮ ವರ್ಷದ ಬಿ.ಎಸ್‌ಸಿ. ವಿಭಾಗದ ವಿದ್ಯಾರ್ಥಿನಿ ದಿಲ್ಶಾನಾ ಕೆ.ಎಸ್. ಕಾರ್ಯಕ್ರಮವನ್ನು ನಿರೂಪಿಸಿದರು. 

ಕಾಲೇಜಿನ ಉಪನ್ಯಾಸಕ ಪ್ರಶಾಂತ್ ರೈ ಮತ್ತು ಗ್ರಂಥಾಲಯದ ಸಿಬ್ಬಂದಿಯವರಾದ ಜೀಟಾ ನೊರೊನ್ಹಾ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article