ಧರ್ಮಸ್ಥಳ ಶಾಂತಿವನ ಟ್ರಸ್ಟ್: ಅಂಚೆ-ಕುಂಚ ಸ್ಪರ್ಧೆಗೆ ಚಿತ್ರಗಳ ಆಹ್ವಾನ
ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಶಾಂತಿವನ ಟ್ರಸ್ಟ್, ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ನಡೆಸುವ ರಾಜ್ಯಮಟ್ಟದ 24ನೇ ಅಂಚೆ-ಕುಂಚ ಸ್ಪರ್ಧೆಗೆ ಅಂಚೆ ಕಾರ್ಡಿನಲ್ಲಿ ಚಿತ್ರಗಳನ್ನು ಆಹ್ವಾನಿಸಲಾಗಿದೆ.
‘ನಮ್ಮೂರ ಸಂತೆ’ ಎಂಬ ವಿಷಯದಲ್ಲಿ 20*14 ಸೆಂ.ಮೀ. ಡ್ರಾಯಿಂಗ್ ಶೀಟ್ ಅಥವಾ ಅಂಚೆ ಕಾರ್ಡ್ ಮೂಲಕ ಚಿತ್ರಗಳನ್ನು ಬಿಡಿಸಿ 2027 ಮಾ.31ರ ಒಳಗೆ ನಿರ್ದೇಶಕರು, ಅಂಚೆ ಕುಂಚ ವಿಭಾಗ, ಶ್ರೀ ಧ.ಮಂ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ, ಶ್ರೀ ಕ್ಷೇತ್ರ ಧರ್ಮಸ್ಥಳ-574216 ಇವರಿಗೆ ಕಳುಹಿಸಿ ಕೊಡಬಹುದು.
ಈ ಸ್ಪರ್ಧೆ ಕರ್ನಾಟಕ ರಾಜ್ಯದ ಪ್ರಾಥಮಿಕ ಶಾಲಾ ವಿಭಾಗ, ಪ್ರೌಢಶಾಲಾ ವಿಭಾಗ, ಕಾಲೇಜು ವಿಭಾಗ ಹಾಗೂ ಸಾರ್ವಜನಿಕ ವಿಭಾಗಗಳಲ್ಲಿ ನಡೆಯುತ್ತದೆ. ಶಾಲಾ, ಕಾಲೇಜು ವಿಭಾಗದ ಸ್ಪರ್ಧಿಗಳು ಚಿತ್ರಗಳನ್ನು ವಿದ್ಯಾಲಯದ ಮುದ್ರೆಯೊಂದಿಗೆ ಮುಖ್ಯಸ್ಥರು ದೃಢೀಕರಿಸಿರಬೇಕು. ಕಲಾವಿದರ ಸಂಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ ನಮೂದಿಸಬೇಕು. ಚಿತ್ರಗಳನ್ನು ಪೆನ್ಸಿಲ್, ಇಂಡಿಯನ್ ಇಂಕ್, ಜಲವರ್ಣ ಬಳಸಿ ಬಿಡಿಸಬಹುದು. ಪ್ರತಿ ವಿಭಾಗದಲ್ಲೂ ಪ್ರಥಮ, ದ್ವಿತೀಯ, ತೃತೀಯ ಹಾಗೂ ಪ್ರೋತ್ಸಾಹಕ ಬಹುಮಾನಗಳಿರುತ್ತವೆ ಎಂದು ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಡಾ. ಐ. ಶಶಿಕಾಂತ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.