ಅಪಘಾತಕ್ಕೀಡಾಗಿದ್ದ ವಾಹನ ತೆರವುಗೊಳಿಸುವಾಗಲೇ ಅಪಘಾತ: ಓರ್ವ ಸಾವು

ಅಪಘಾತಕ್ಕೀಡಾಗಿದ್ದ ವಾಹನ ತೆರವುಗೊಳಿಸುವಾಗಲೇ ಅಪಘಾತ: ಓರ್ವ ಸಾವು


ಕುಂದಾಪುರ: ಅಪಘಾತಕ್ಕೀಡಾಗಿ ರಸ್ತೆ ಬದಿಗೆ ಕೆಟ್ಟು ನಿಂತಿದ್ದ ಲಾರಿಯನ್ನು ಪೊಲೀಸರು ತೆರವು ಮಾಡಿಸುತ್ತಿರುವಾಗಲೇ ಇನ್ನೊಂದು ಲಾರಿ ಅಪಘಾತ ನಡೆದು ಓರ್ವ ಮೃತಪಟ್ಟ ದುರ್ಘಟನೆ ಉಡುಪಿ ಜಿಲ್ಲಾ ಉತ್ತರ ಗಡಿ ಭಾಗದ ಶಿರೂರಿನಲ್ಲಿ ನಡೆದಿದೆ. 

ಮೃತರನ್ನು ಶಿರೂರು ನಿವಾಸಿ ನಾಗೇಂದ್ರ ಮಹಾಲೆ (45) ಎಂದು ಗುರುತಿಸಲಾಗಿದೆ.

ಘಟನೆ ವಿವರ:

ಶಿರೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇತ್ತೀಚಿಗೆ ಒಂದು ಅಪಘಾತ ನಡೆದಿದ್ದು ಸರಕು ತುಂಬಿದ ಲಾರಿಯೊಂದು ಕೆಟ್ಟು ನಿಂತಿತ್ತು. ಬೈಂದೂರು ಪೊಲೀಸರು ಜೆಸಿಬಿ ಸಹಾಯದಿಂದ ಅದನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸುತ್ತಿದ್ದರು.  ಈ ಹಿನ್ನೆಲೆಯಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ರಸ್ತೆಯಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಸಂಚಾರ ನಿಯಂತ್ರಿಸಲಾಗುತ್ತಿತ್ತು. ನಾಗೇಂದ್ರ ಮಹಾಲೆ ಸೇರಿದಂತೆ ಹಲವು ಕುತೂಹಲಿಗರು ರಸ್ತೆ ಬದಿಯಲ್ಲಿ ನಿಂತು ಲಾರಿ ತೆರವು ಕಾರ್ಯವನ್ನು ವೀಕ್ಷಿಸುತ್ತಿದ್ದರು.

ಈ ವೇಳೆ ಕೇರಳದಿಂದ ಮಹಾರಾಷ್ಟ್ರಕ್ಕೆ ರಬ್ಬರ್ ತುಂಬಿಕೊಂಡು ತೆರಳುತ್ತಿದ್ದ ಮತ್ತೊಂದು ಲಾರಿ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಸರಿದು ಓಡ ತೊಡಗಿತು.  ಅಲ್ಲಿ ನಿಲ್ಲಿಸಿದ್ದ ನಾಲ್ಕು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಲಾರಿ, ಮೂರು ಬೈಕ್‌ಗಳನ್ನು ಎಳೆದುಕೊಂಡು ಹೋಗಿ ಮುಂದಕ್ಕೆ ಸಾಗಿದ್ದು, ಬಳಿಕ ಹೈವೆ ಪ್ಯಾಟ್ರೋಲ್ ವಾಹನಕ್ಕೆ ಡಿಕ್ಕಿ ಹೊಡೆದಿದೆ.

ಅದೇ ವೇಳೆ ದ್ವಿಚಕ್ರ ವಾಹನಗಳ ಸಮೀಪ ವೀಕ್ಷಿಸುತ್ತಾ ನಿಂತಿದ್ದ ನಾಗೇಂದ್ರ ಮಹಾಲೆ ಅವರಿಗೂ ಲಾರಿ ಡಿಕ್ಕಿ ಹೊಡೆದಿದ್ದು, ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತದಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕಾರ್ಯಾಚರಣೆಗಾಗಿ ಪೊಲೀಸರು ಕೆಳಗಿಳಿದಿದ್ದು, ಪ್ಯಾಟ್ರೋಲ್ ವಾಹನದಲ್ಲಿ ಯಾರೂ ಇರಲಿಲ್ಲ. ಘಟನೆಗೆ ಸಂಬಂಧಿಸಿ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article