ಕರ್ನಾಟಕ ಸುಸ್ಥಿರ ಡೇಟಾ ಸೆಂಟರ್ ನೀತಿ 2026-2031ಕ್ಕೆ ಅನುಮೋದನೆ: ಸಚಿವ ಪ್ರಿಯಾಂಕ್ ಖರ್ಗೆ
ಮಂಗಳೂರಿನಲ್ಲಿ ನಡೆದಿರುವುದು ರಾಜ್ಯದ ಮೊದಲ ವಿಶೇಷ ಸಚಿವ ಸಂಪುಟ ಸಭೆಯಾಗಿದ್ದು, ಕರಾವಳಿ ಭಾಗದ ಅಭಿವೃದ್ಧಿಗೆ ಸಂಬಂಧಿಸಿದ ಹಲವು ವಿಚಾರಗಳೊಂದಿಗೆ ಡಿಜಿಟಲ್ ಮೂಲಸೌಕರ್ಯಕ್ಕೂ ಆದ್ಯತೆ ನೀಡಲಾಗಿದೆ. ಹೊಸ ನೀತಿಯ ಮೂಲಕ ಕರ್ನಾಟಕವನ್ನು ಸುಸ್ಥಿರ ಹಾಗೂ ಜಾಗತಿಕ ಮಟ್ಟದ ಡೇಟಾ ಸೆಂಟರ್ ಹಬ್ ಆಗಿ ರೂಪಿಸುವ ಉದ್ದೇಶ ಹೊಂದಲಾಗಿದೆ. ಡೇಟಾ ಸೆಂಟರ್ಗಳ ವಿಸ್ತರಣೆಯೊಂದಿಗೆ ವಿದ್ಯುತ್, ನೀರು ಮತ್ತು ಇತರೆ ಸಂಪನ್ಮೂಲಗಳ ಸಮರ್ಥ ಬಳಕೆ, ನವೀಕರಿಸಬಹುದಾದ ಇಂಧನ, ಹಸಿರು ತಂತ್ರಜ್ಞಾನ ಹಾಗೂ ಕಾರ್ಬನ್ ಉತ್ಸರ್ಜನೆ ತಗ್ಗಿಸುವ ಕ್ರಮಗಳಿಗೆ ನೀತಿಯಲ್ಲಿ ಒತ್ತು ನೀಡಲಾಗಿದೆ ಎಂದು ಹೇಳಿದರು.
1,300.45 ಕೋಟಿ ರೂ. ಪ್ರೋತ್ಸಾಹಕ ಚೌಕಟ್ಟು..
2026ರಿಂದ 2031ರವರೆಗೆ ಜಾರಿಯಾಗಲಿರುವ ನೀತಿಯಡಿ ಒಟ್ಟು 1,300.45 ಕೋಟಿ ರೂ. ಮೊತ್ತದ ಬಜೆಟ್ ಚೌಕಟ್ಟಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಬಂಡವಾಳ ಹೂಡಿಕೆ, ಎಡ್ಜ್ ಡೇಟಾ ಸೆಂಟರ್ಗಳು, ವಿದ್ಯುತ್ ಮತ್ತು ಡಿಜಿಟಲ್ ಮೂಲಸೌಕರ್ಯ, ಮೌಲ್ಯ ಸರಪಳಿ, ಸಂಶೋಧನೆ ಮತ್ತು ಅಭಿವೃದ್ಧಿ, ಕೌಶಲ್ಯಾಭಿವೃದ್ಧಿ ಹಾಗೂ ಸುಸ್ಥಿರತೆ ಆಧಾರಿತ ಪ್ರೋತ್ಸಾಹಕಗಳಿಗೆ ಆದ್ಯತೆ ನೀಡಲಾಗಿದೆ.
ಡೇಟಾ ಸೆಂಟರ್ ಅಭಿವೃದ್ಧಿಗೆ ಹೊಸ ಮೂಲಸೌಕರ್ಯ
ಡೇಟಾ ಸೆಂಟರ್ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ನವೋದ್ಯಮಕ್ಕೆ ಉತ್ತೇಜನ ನೀಡಲು ಡೇಟಾ ಸೆಂಟರ್ಗಳ ಅತ್ಯುತ್ತಮತಾ ಕೇಂದ್ರ ಸ್ಥಾಪನೆ, ಸುಸ್ಥಿರ ಡೇಟಾ ಸೆಂಟರ್ ವಲಯಗಳು ಹಾಗೂ ಡೇಟಾ ಸೆಂಟರ್ ಪಾರ್ಕ್ಗಳ ಅಭಿವೃದ್ಧಿ ಮತ್ತು ರಾಜ್ಯದ ವಿವಿಧೆಡೆ ಡೇಟಾ ಸೆಂಟರ್ಗಳಿಗೆ ಅಗತ್ಯವಿರುವ ವಿದ್ಯುತ್, ನೀರು ಹಾಗೂ ಇತರೆ ಮೂಲ ಸೌಕರ್ಯಗಳ ಲಭ್ಯತೆಯನ್ನು ಗುರುತಿಸುವ ‘ಸಂಪನ್ಮೂಲ ಲಭ್ಯತಾ ನಕ್ಷೆ’ ಸಿದ್ಧಪಡಿಸುವುದು ನೀತಿಯ ಪ್ರಮುಖ ಅಂಶಗಳಾಗಿವೆ ಎಂದು ಹೇಳಿದ್ದಾರೆ.