ಡಿ.ಸಿ. ಮನ್ನಾ ಭೂಮಿಯ ಹಂಚಿಕೆ-ಸರಕಾರದ ವಿರುದ್ಧ ಅಸಮಾಧಾನ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಬಹು ವರ್ಷಗಳ ಬೇಡಿಕೆಯಾಗಿದ್ದ ಡಿ.ಸಿ. ಮನ್ನಾ ಭೂಮಿಯ ಹಂಚಿಕೆಯ ಕುರಿತ ಕಾನೂನು ತೊಡಕನ್ನು ನಿವಾರಿಸುವ ಬಗ್ಗೆ ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟದ ಸಭೆಯಲ್ಲಿ ಚರ್ಚಿಸಿ ನಿರ್ಣಯ ತೆಗೆದುಕೊಳ್ಳುವ ಬಗ್ಗೆ ಜಿಲ್ಲೆಯ ದಲಿತ ಪರ ಸಂಘಟನೆಗಳು ಕಂದಾಯ ಸಚಿವರಾದ ಜಿ. ಪರಮೇಶ್ವರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಡಿ.ಸಿ. ಮನ್ನಾ ಭೂ ಹಂಚಿಕೆಯ ಸಮಸ್ಯೆಯನ್ನು ನಿವಾರಿಸುವ ಬಗ್ಗೆ ನಿರ್ಣಯ ತೆಗೆದುಕೊಳ್ಳುವ ವಿಶ್ವಾಸ ಜಿಲ್ಲೆಯ ಎಲ್ಲಾ ದಲಿತ ವರ್ಗ ಹಾಗೂ ದಲಿತಪರ ಸಂಘಟನೆಗಳಲ್ಲಿ ಇತ್ತು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಸ್ವಾಭಿಮಾನಿ ಪ್ರೊ. ಬಿ. ಕೃಷ್ಣಪ್ಪ ಬಣ), ದ.ಕ. ಜಿಲ್ಲಾ ಸಮಿತಿ ತಿಳಿಸಿದೆ. ಆದರೆ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಡಿ.ಸಿ. ಮನ್ನಾ ಭೂಮಿಯ ವಿಚಾರವಾಗಿ ಯಾವುದೇ ನಿರ್ಣಯ ಕೈಗೊಳ್ಳದೆ ಜಿಲ್ಲೆಯ ಎಲ್ಲಾ ದಲಿತ ವರ್ಗದ ಜನರು ಹಾಗೂ ದಲಿತ ಸಂಘಟನೆಗಳ ಬಹುಕಾಲದ ಭೂಮಿಯ ಬೇಡಿಕೆಗೆ ಸ್ಪಂದಿಸದೆ ಸರಕಾರವು ದಲಿತ ವಿರೋಧಿ ಧೋರಣೆಯನ್ನು ತಳೆದಿದೆ ಎಂದು ಸಮಿತಿ ಆರೋಪಿಸಿದೆ.
ಸರಕಾರದ ಈ ದಲಿತ ವಿರೋಧಿ ಧೋರಣೆಯನ್ನು ಕರ್ನಾಟಕದ ದಲಿತ ಸಂಘರ್ಷ ಸಮಿತಿ (ಸ್ವಾಭಿಮಾನಿ ಪ್ರೊ.ಬಿ. ಕೃಷ್ಣಪ್ಪ ಬಣ), ದ.ಕ. ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸಿದೆ. ಅಲ್ಲದೆ ಸರಕಾರದ ಈ ನಡೆಯನ್ನು ಖಂಡಿಸಿ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ ಖಾದರ್ ಹಾಗೂ ಸಂಬಂಧಪಟ್ಟ ಸಚಿವರ ವಿರುದ್ಧ ಮುಂದಿನ ದಿನಗಳಲ್ಲಿ ಪ್ರಬಲ ಪ್ರತಿಭಟನೆಯನ್ನು ಹಮ್ಮಿಕೊಳ್ಳುವ ಎಚ್ಚರಿಕೆಯನ್ನು ಸಂಘಟನೆ ವ್ಯಕ್ತಪಡಿಸಿದೆ.
ಜಿಲ್ಲೆಯ ಸಮಸ್ತ ದಲಿತರ ಏಕಮಾತ್ರ ಬೇಡಿಕೆಯಾಗಿದ್ದ ಡಿ.ಸಿ. ಮನ್ನಾ ಭೂಮಿಯ ವಿಚಾರವಾಗಿ ಯಾವುದೇ ನಿರ್ಣಯ ಕೈಗೊಳ್ಳದೆ ಇರುವ ಸರ್ಕಾರದ ನಡೆಯನ್ನು ಖಂಡಿಸಿ ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಮುಂಚೂಣಿ ಘಟಕದ ಎಲ್ಲಾ ನಾಯಕರು ಪಕ್ಷದ ತಮ್ಮ ಹುದ್ದೆಗಳಿಗೆ ರಾಜೀನಾಮೆಯನ್ನು ಸಲ್ಲಿಸುವ ಮೂಲಕ ಸರಕಾರದ ದಲಿತ ವಿರೋಧಿ ಧೋರಣೆಯನ್ನು ಖಂಡಿಸುವುದರ ಜೊತೆಗೆ ತಮ್ಮ ಸ್ವಾಭಿಮಾನವನ್ನು ಎತ್ತಿ ಹಿಡಿಯುವಂತೆ ಸಮಿತಿಯು ಆಗ್ರಹಿಸಿದೆ.
ಈ ಕುರಿತು ಜಿಲ್ಲಾ ಸಂಚಾಲಕ ಸದಾಶಿವ ಪಡುಬಿದ್ರಿ ಹೇಳಿಕೆ ನೀಡಿದ್ದು, ಈ ವೇಳೆ ಜಿಲ್ಲಾ ಸಂಘಟನಾ ಸಂಚಾಲಕರುಗಳಾದ ರಘು ಎಕ್ಕಾರು, ಕೃಷ್ಣಾನಂದ ಡಿ., ಜಿಲ್ಲಾ ಮಹಿಳಾ ಸಂಚಾಲಕಿ ಸರೋಜಿನಿ ಬಂಟ್ವಾಳ ಉಪಸ್ಥಿತರಿದ್ದರು.