ಬಗೆ ಹರಿಯದ ಡಿಸಿ ಮನ್ನಾ ಭೂಮಿ ಹಂಚಿಕೆ ಸಮಸ್ಯೆ: ದಲಿತ ಸಂಘಟನೆ ಆಕ್ರೋಶ

ಬಗೆ ಹರಿಯದ ಡಿಸಿ ಮನ್ನಾ ಭೂಮಿ ಹಂಚಿಕೆ ಸಮಸ್ಯೆ: ದಲಿತ ಸಂಘಟನೆ ಆಕ್ರೋಶ


ಮಂಗಳೂರು: ರಾಜ್ಯ ಸಚಿವ ಸಂಪುಟ ಸಭೆ ಈ ಬಾರಿ ಮಂಗಳೂರಿನಲ್ಲಿ ನಡೆದಿದ್ದು, ಡಿಸಿ ಮನ್ನಾ ಭೂಮಿ ಹಂಚಿಕೆಯ ಸಮಸ್ಯೆಯನ್ನು ಬಗೆಹರಿಸುವ ಆಶ್ವಾಸನೆ ಈಡೇರಿಲ್ಲ. ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ದಲಿತ ಸಂಘಟನೆ ಸಮನ್ವಯ ಸಮಿತಿ ಹೋರಾಟದ ಎಚ್ಚರಿಕೆ ನೀಡಿದೆ.

ಮಂಗಳೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮನ್ವಯ ಸಮಿತಿಯ ಮುಖಂಡ ರಘು ಕೆ. ಎಕ್ಕಾರು, ಇತ್ತೀಚೆಗೆ ದ.ಕ. ಜಿಲ್ಲಾ ಉಸ್ತುವಾರಿ ಸಚಿರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಸಂದರ್ಭ, ಮಂಗಳೂರಿ ನಲ್ಲಿ ನಡೆಯುವ ರಾಜ್ಯ ಸಂಪುಟ ಸಭೆಯಲ್ಲೇ ಈ ಭೂಮಿ ಹಂಚಿಕೆ ಸಮಸ್ಯೆ ಬಗೆಹರಿಸುವುದಾಗಿ ಆಸ್ವಾಸನೆ ನೀಡಿದ್ದರು. ಆದರೆ ಸಂಪುಟ ಸಭೆ ಮುಗಿದರೂ ಕೊಟ್ಟ ಭರವಸೆ ಈಡೇರಿಸದೆ ದಲಿತ ಸಮುದಾಯಕ್ಕೆ ದ್ರೋಹ ಎಸಗಲಾಗಿದೆ ಎಂದು ಆರೋಪಿಸಿದರು. 

30 ವರ್ಷಗಳಿಂದ ದಲಿತ ಸಂಘಟನೆಗಳು ಡಿಸಿ ಮನ್ನಾ ಭೂಮಿ ಹಂಚಿಕೆಯ ನ್ಯೂನ್ಯತೆಗಳನ್ನು ಸರಿಪಡಿಸಲು ನಿರಂತರ ಹೋರಾಟ ನಡೆಸುತ್ತಾ ಬಂದಿವೆ. ಪ್ರತಿಬಾರಿ ಜಿಲ್ಲಾಧಿಕಾರಿ ಸಭೆಯಲ್ಲಿ ಈ ವಿಷಯ ಬಂದಾಗ ‘ಕರಡು ನಿಯಮ 2017’ ತಿದ್ದುಪಡಿ ನೆಪಹೇಳಲಾಗುತ್ತಿದೆ. ಆದರೆ ಭೂಮಿ ಹಂಚಿಕೆ ಮಾಡಲು ಸಚಿವರು ಹಾಗೂ ಜನಪ್ರತಿ ನಿಧಿಗಳು ಇಚ್ಛಾಶಕ್ತಿ ತೋರುತ್ತಿಲ್ಲ. ಕರಾವಳಿ ಅಭಿವೃದ್ಧಿ, ಧಾರ್ಮಿಕ ಕ್ಷೇತ್ರಗಳು, ಬಂಡವಾಳಶಾಹಿ ಯೋಜನೆಗಳಿಗೆ ಕೋಟ್ಯಂತರ ರೂಪಾಯಿ ನೀಡುವ ಸರಕಾರ ದಲಿತರ ನೋವಿಗೆ ಸ್ಪಂದಿಸುತ್ತಿಲ್ಲ. ದಲಿತರನ್ನು ಕೇವಲ ಮತಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದ್ದು, ದಲಿತರ ಶಕ್ತಿ ಏನು ಎಂಬುದನ್ನು ನಾವು ತೋರಿಸುತ್ತೇವೆ ಎಂದು ಅವರು ಹೇಳಿದರು.

ಸಚಿವ ಖಾದರ್ ಹೋದಲೆಲ್ಲಾ ಪ್ರತಿಭಟನೆ

ಡಿಸಿ ಮನ್ನಾ ಸಂಪುಟದಿಂದ ಕೈತಪ್ಪಲು ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರೇ ಕಾರಣ ಎಂದು ಆರೋಪಿ ಸಿದ ಅಶೋಕ್ ಕೊಂಚಾಡಿ, ಕಳೆದ ಒಂಭತ್ತು ವರ್ಷಗಳಿಂದ ಸುಲ್ಳು ಭರವಸೆ ನೀಡಲಾಗುತ್ತಿದೆ. ದಲಿತರ ಭೂಮಿ ಯನ್ನು ಕಬಳಿಸಿರುವ ದೊಡ್ಡ ಕುಲಗಳನ್ನು ರಕ್ಷಿಸಲು ಜಿಲ್ಲಾ ಉಸ್ತುವಾರಿ ಸಚಿವರೇ ನಿಂದಿದ್ದಾರೆಯೇ ಎಂಬ ಅನುಮಾನವಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಪಾಲ್ಗೊಳ್ಳುವ ಸಾರ್ವಜನಿಕ ಕಾರ್ಯಕ್ರಮ ಗಳನ್ನು ಬಹಿಷ್ಕರಿಸುವುದು, ಜನಾಭಿಪ್ರಾಯ ಮೂಡಿಸುವುದಲ್ಲದೆ, ಭಿತ್ತಿಪತ್ರ ಚಳವಳಿ ಪಾದಯಾತ್ರೆ ಹಾಗೂ ಪ್ರತಿಭಟನೆಗಳ ಮೂಲಕ ಸರಕಾರ ವಿರುದ್ಧ ತೀವ್ರ ಹೋರಾಟ ನಡೆಸುವುದಾಗಿ ಹೇಳಿದರು.

ಮುಖಂಡರಾದ ರಮೇಶ್ ಕೋಟ್ಯಾನ್, ಚಂದ್ರಕುಮಾರ್, ಗಿರೀಶ್ ಕುಮಾರ್,ರೋಹಿತ್ ಉಳ್ಳಾಲ್, ಕೃಷ್ಣಾನಂದ ಡಿ., ಜಗದೀಶ್ ಪಾಂಡೇಶ್ವರ, ಸರೋಜಿನಿ ಬಂಟ್ವಾಳ, ಯಶೋದ ಹೊಸಬೆಟ್ಟು, ರಮೇಶ್ ಕಾವೂರು, ಸಂಜೀವ ಆರ್. ಬೆಳ್ತಂಗಡಿ ಮೊದಲಾದವರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article