ಮಂಗಳೂರು ದಸರಾಕ್ಕೆ ಮತ್ತಷ್ಟು ವೈಭವ: ಪದ್ಮರಾಜ್ ಆರ್. ಪೂಜಾರಿ
ನಗರದ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಭಾಂಗಣದಲ್ಲಿ ಭಾನುವಾರ ನಡೆದ ಮಂಗಳೂರು ದಸರಾದ ಪೂರ್ವ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.
ಮಂಗಳೂರು ದಸರಾದಲ್ಲಿ ಪೂಜೆ ಪಡೆಯಲಿರುವ ಮಹಾಗಣಪತಿ, ಆದಿಶಕ್ತಿ, ನವದುರ್ಗೆ, ಶಾರದೆ ಮೂರ್ತಿಗಳ ರಚನೆಗೆ ಈಗಾಗಲೇ ಮುಹೂರ್ತ ನೆರವೇರಿದೆ. ದಸರಾವನ್ನು ಈ ಬಾರಿಯೂ ವೈಭವೋಪೇತವಾಗಿ ನಡೆಸಲು ಆಡಳಿತ ಸಮಿತಿ ನಿರ್ಧರಿಸಿದೆ. ಅ.11ರಂದು ಆರಂಭವಾಗುವ ದಸರಾ ವೈಭವ ಅ.22ರವರೆಗೆ ನಡೆಯಲಿದ್ದು, ಪ್ರತಿನಿತ್ಯ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ, ಅನ್ನದಾನಗಳು ನಡೆಯಲಿದೆ. ನಾನಾ ವ್ಯವಸ್ಥೆಗಳ ಜವಾಬ್ದಾರಿಗೆ ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಸ್ಥಾನದ ಅಧ್ಯಕ್ಷರಾದ ಜೈರಾಜ್ ಎಚ್. ಸೋಮಸುಂದರ್ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಭಿವೃದ್ಧಿ ಸಮಿತಿ ಸದಸ್ಯರಾದ ಚಿತ್ತರಂಜನ್ ಗರೋಡಿ, ಹರಿಕೃಷ್ಣ ಬಂಟ್ವಾಳ್ ದಸರಾದ ಸಲಹೆ, ಮಾರ್ಗದರ್ಶನ ನೀಡಿದರು. ವೇದಿಕೆಯಲ್ಲಿ ಟ್ರಸ್ಟಿಗಳಾದ ಸಂತೋಷ್ ಜೆ. ಪೂಜಾರಿ, ಕೃತಿನ್ ಡಿ. ಅಮೀನ್, ಕಿಶೋರ್ ದಂಡೆಕೇರಿ, ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಡಾ.ಬಿ.ಜಿ. ಸುವರ್ಣ, ಸದಸ್ಯರಾದ ಶೈಲೇಂದ್ರ ವೈ. ಸುವರ್ಣ, ರಾಧಾಕೃಷ್ಣ, ಜತಿನ್ ಅತ್ತಾವರ್, ರಮಾನಾಥ ಕಾರಂದೂರು, ಗೌರವಿ ರಾಜಶೇಖರ್, ಲೀಲಾಕ್ಷ ಕರ್ಕೇರಾ, ಚಂದನ್‌ದಾಸ್, ಲತೀಶ್ ಎಂ. ಸುವರ್ಣ, ವಾಸುದೇವ ಕೋಟ್ಯಾನ್ ಉಪಸ್ಥಿತರಿದ್ದರು.
ಕುಸುಮಾಧರ್ ಕಾರ್ಯಕ್ರಮ ನಿರೂಪಿಸಿದರು.
ಸಿಎಂರಿಂದ ದಸರಾ ಉದ್ಘಾಟನೆ:
ವೈಭವದ ಮಂಗಳೂರು ದಸರಾ ಮಹೋತ್ಸವವನ್ನು ಅ.12ರಂದು ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸಲಿದ್ದಾರೆ. ಈ ಸಂದರ್ಭ ಕ್ಷೇತ್ರದ ಅಭಿವೃದ್ಧಿಯ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಸೇರಿದಂತೆ ನಾನಾ ಕ್ಷೇತ್ರದ ಗಣ್ಯರು, ಧಾರ್ಮಿಕ ಮುಖಂಡರು, ಉಪಸ್ಥಿತರಿರುವರು ಎಂದು ಪದ್ಮರಾಜ್ ಹೇಳಿದರು.
ನಾನಾ ರೀತಿಯ ಸ್ಪರ್ಧೆಗಳು:
ಮಂಗಳೂರು ದಸರಾದಲ್ಲಿ ಈ ಬಾರಿಯ ವೈಭವದಲ್ಲಿ ಅಕ್ಷರಾಭ್ಯಾಸ, ಮೆಹಂದಿ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಕಿನ್ನಿ ಪಿಲಿ ಕುಣಿತ, ಹೂಮಾಲೆ ಕಟ್ಟುವ ಸ್ಪರ್ಧೆ, ಬೆಂಕಿರಹಿತ ಅಡುಗೆ ಸ್ಪರ್ಧೆ, ಆಂಗಿಕಂ, ಜನಪದ ಸಮೂಹ ಗಾಯನ ಸ್ಪರ್ಧೆ ಸೇರಿದಂತೆ ನಾನಾ ಸ್ಪರ್ಧೆಗಳು ನಡೆಯಲಿದೆ ಎಂದು ಪದ್ಮರಾಜ್ ಆರ್.ತಿಳಿಸಿದರು.