ಸ್ಮಾರಕ ನಿರ್ಮಾಣಕ್ಕೆ ಆಗ್ರಹ
ಮಂಗಳೂರು: ದೇಶದಲ್ಲಿ 1857ರ ಪ್ರಥಮ ಸ್ವಾತಂತ್ರ್ಯ ಸಮರಕ್ಕೂ 20 ವರ್ಷ ಮೊದಲು 1837ರಲ್ಲಿ ತುಳುನಾಡಿನ ಜನತೆ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಸಮರವನ್ನು ನಡೆಸಿದ್ದಾರೆ. ಈ ಹೋರಾಟದಲ್ಲಿ ವಿಜಯಿಗಳ ನೆನಪಿಗೆ ಸ್ಮಾರಕ ನಿರ್ಮಾಣವಾಗಬೇಕು ಎಂದು ಸಾಮಾಜಿಕ ಕಾರ್ಯಕರ್ತ ಗೋಪಾಲ ಪೆರಾಜೆ ಆಗ್ರಹಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹೋರಾಟದಲ್ಲಿ ವಿಜಯಿಗಳಾದ ಅಂದಿನ ಹೋರಾಟಗಾರರು ವಿಜಯ ಪತಾಕೆಯನ್ನು ಹಾರಿಸಿ 13 ದಿನ ತುಳುನಾಡಿನ ಆಡಳಿತ ನಡೆಸಿದ್ದರು. ಇವರಲ್ಲಿ ಭಾಗಿಯಾದ ಮೂರು ಜನ ಪ್ರಮುಖರನ್ನು ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ಹಾಗೂ ಮತ್ತೊಬ್ಬರನ್ನು ಮಡಿಕೇರಿ ಕೋಟೆಯೊಳಗೆ ಗಲ್ಲುಗೈರಿಸಲಾಗಿತ್ತು. ಈ ಸಮರದ ನೆನಪಿಗೆ ದ.ಕ.ಜಿಲ್ಲಾಧಿಕಾರಿ ಕಟ್ಟಡ ಅವರಣದಲ್ಲಿ ಯುದ್ಧ ಸ್ಮಾರಕ ನಿರ್ಮಾಣ, ಪ್ರತೀ ವರ್ಷ ಏ. 5ರಂದು ನೆನಪಿನ ಕಾರ್ಯಕ್ರಮ ಯೋಜನೆ, ಘಟನೆಯ ನೆನಪಿಗೆ ತುಳುನಾಡಿನ ಉತ್ಸವ ಏರ್ಪಡಿಸುವುದು ಹಾಗೂ ಘಟನೆ ಕೇಂದ್ರ ಸ್ಥಳ ಬೆಳ್ಳಾರೆಯಲ್ಲಿ ಥೀಮ್ ಪಾರ್ಕ್ ನಿರ್ಮಾಣವಾಗಬೇಕು ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದರು.
ಪ್ರಮುಖರಾದ ಮಾಧವ ಗೌಡ ಸುಳ್ಯಕೋಡಿ, ಬೆನೆಟ್ ಅಮಣ್ಣ, ಕೃಷ್ಣ ಮೂರ್ತಿ ಸುರತ್ಕಲ್ ಉಪಸ್ಥಿತರಿದ್ದರು.