17 ವರ್ಷದಿಂದ ತಲೆ ಮರೆಸಿದ್ದ ಆರೋಪಿಯ ಬಂಧನ
Saturday, October 10, 2026
ಬಂಟ್ವಾಳ: ಸುಮಾರು 17 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕಿನ ತಲಪಾಡಿ ನಿವಾಸಿ ಹನೀಫ್ ಅಲಿಯಾಸ್ ಕೊಕ್ಕಡ ಹನೀಫ್ (57) ಬಂಧಿತ ಆರೋಪಿಯಾಗಿದ್ದಾನೆ.
ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ 2009ರಲ್ಲಿ ದಾಖಲಾಗಿದ್ದ ಅಬಕಾರಿ ಕಾಯ್ದೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಹನೀಫ್, ಸುದೀರ್ಘ ಅವಧಿಯಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನೆನ್ನಲಾಗಿದೆ.
ಅದೇ ರೀತಿ 2023ರಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದರಲ್ಲಿಯೂ ಆರೋಪಿಯಾಗಿದ್ದು, ಈತನ ವಿರುದ್ಧ ವಾರೆಂಟ್ ಜಾರಿಯಾಗಿತ್ತು.
ಮೂಡುಬಿದಿರೆ ಸಮೀಪದ ಶಿರ್ತಾಡಿಯಲ್ಲಿ ಈತ ಇರುವ ಬಗ್ಗೆ ಖಚಿತ ಮಾಹಿತಿಯನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.