ಅ.18 ರಂದು 5ನೇ ಆವೃತ್ತಿಯ ಪಿಲಿಪರ್ಬ: ಶಾಸಕ ಕಾಮತ್
ಅವರು ಇಂದು ನಗರದ ಖಾಸಗಿ ಹೊಟೇಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಅಂದು ಬೆಳಗ್ಗೆ 9.30ಕ್ಕೆ ಮಂಗಳೂರಿನ ಕೇಂದ್ರ ಮೈದಾನದಲ್ಲಿ ಉದ್ಘಾಟನೆ ಗೊಳ್ಳಲಿದ್ದು, ಬೆಳಗ್ಗೆ 10 ಗಂಟೆಗೆ ವಿಶಾಲ ವೇದಿಕೆಯಲ್ಲಿ ನಡೆಯಲಿದ್ದು, ಈ ಸ್ಪರ್ಧೆಯಲ್ಲಿ 11 ತಂಡಗಳು ಭಾಗವಹಿಸಲಿದ್ದು, ಪ್ರತಿ ತಂಡವೂ ವೈಭವದ ಮೆರವಣಿಗೆಯ ಮೂಲಕ ವೇದಿಕೆಯ ಪ್ರವೇಶ ಮಾಡಲಿದ್ದು, 20 ನಿಮಿಷಗಳ ಪ್ರದರ್ಶನ ನೀಡಲಿವೆ ಎಂದರು.
ಸ್ಪರ್ಧೆಯಲ್ಲಿ ಅಕ್ಕಿ ಮುಡಿ ಹಾರಿಸುವುದು ಕಡ್ಡಾಯವಾಗಿದ್ದು, ಕರಿಹುಲಿ, ಮರಿಹುಲಿ, ಹಿಮ್ಮೇಳ, ಧರಣಿ ಮಂಡಲವನ್ನು ಒಳಗೊಂಡಿರುತ್ತದೆ. ಸ್ಪರ್ಧೆಯಲ್ಲಿ 6 ತೀರ್ಪುಗಾರರು ಇದ್ದು, ನಾಲ್ಕು ಮಂದಿ ವೇದಿಕೆಯಲ್ಲಿ ಹಾಗೂ ಇಬ್ಬರು ವಿಡಿಯೋ ವೀಕ್ಷಿಸುತ್ತಾ ಥರ್ಡ್ ಅಂಪಾಯರ್ ರೂಪದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಹೇಳಿದರು.
ಅತ್ಯುತ್ತಮ ಪ್ರದರ್ಶನ ನೀಡಿದ ಪ್ರಥಮ ತಂಡಕ್ಕೆ 5 ಲಕ್ಷ, ದ್ವಿತೀಯ ತಂಡಕ್ಕೆ 3 ಲಕ್ಷ, ತೃತೀಯ ತಂಡಕ್ಕೆ 2 ಲಕ್ಷ ಬಹುಮಾನ ನೀಡಿ ಗೌರವಿಸಲಾಗುವುದು, ಅಲ್ಲದೇ ಶಿಸ್ತಿನ ತಂಡ, ಅತ್ಯುತ್ತಮ ಹುಲಿ ಮೆರವಣಿಗೆ ತಂಡ, ಪರ್ಬದ ಪಿಲಿ, ಕಪ್ಪು ಪಿಲಿ, ಮರಿ ಪಿಲಿ, ಮುಡಿ, ಶಾಸೆ, ಬಣ್ಣಗಾರಿಕೆ, ಧರಣಿ ಮಂಡಲ ವಿಭಾಗಗಳಿಗೆ ಪ್ರತ್ಯೇಕ ಬಹುಮಾನವಾಗಿ 50 ಸಾವಿರ ಹಾಗೂ 25 ಸಾವಿರ ಬಹುಮಾನ ನೀಡಲಾಗುವುದು ಮಾತ್ರವಲ್ಲ ಪ್ರತಿ ಹುಲಿವೇಷ ತಂಡಕ್ಕೆ ಗೌರವ ಮೊತ್ತ ನೀಡಲಾಗುವುದು ಎಂದರು.
ಕಾರ್ಯಕ್ರಮಕ್ಕೆ ಜಿಲ್ಲೆಯ ಪ್ರಮುಖ ಗಣ್ಯರು ಭಾಗವಹಿಸಲಿದ್ದು, 5 ಸಾವಿರ ಮಂದಿ ವೀಕ್ಷಣೆಗೆ ಸೂಕ್ತ ಗ್ಯಾಲರಿ ನಿರ್ಮಾಣ ಮಾಡಲಾಗುವುದು ಎಂದ ಅವರು ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಗೌರವ ಅಧ್ಯಕ್ಷ ದಿವಾಕರ್ ಪಾಂಡೇಶ್ವರ್, ಅಧ್ಯಕ್ಷ ಗಿರಿಧರ್ ಶೆಟ್ಟಿ, ಪ್ರಮುಖರಾದ ನವನೀತ್ ಶೆಟ್ಟಿ, ಯತೀಶ್ ಬೈಕಂಪಾಡಿ, ಅಶ್ವಿತ್ ಕೊಟ್ಟಾರಿ, ಲಲಿತ್ ಮೆಂಡನ್, ಜಗದೀಶ್ ಕದ್ರಿ, ಚೇತನ್ ಕಾಮತ್, ಶಾನ್ ಕೋಡಿಕೆರೆ ಮತ್ತಿತರರು ಉಪಸ್ಥಿತರಿದ್ದರು.
ಸ್ಪರ್ಧೆಯಲ್ಲಿ ಹಮುಮಾನ್ ಟೈಗರ್ಸ್ ಉಪ್ಪಳ, ಪಾಂಡೇಶ್ವರ ಶಾದರಾ ಹುಲಿ, ಶಿವಶಕ್ತಿ ಟೈಗರ್ಸ್ ಕುಂಜತ್ತೂರು ಮಂಜೇಶ್ವರ, ಕೋಡಿಯಾಲ್ ಬೈಲ್ ಫ್ರೆಂಡ್ಸ್ ಲೆಜೆಂಡ್ ಟೈಗರ್ಸ್, ಪೊಳಲಿ ದ ಕಿಂಗ್ ಟೈಗರ್ಸ್ ರಾಜ್ ಫ್ರೆಂಡ್ಸ್, ಫ್ರೆಂಡ್ಸ್ ಬಪ್ಪಲ್ ಶ್ರೀ ದುರ್ಗಾಪರಮೇಶ್ವರಿ ಹುಲಿ, ಟ್ಯಾಲೆಂಟ್ ಟೈಗರ್ಸ್ ಎಂವೈಬಿ ಕಚ್ಚೂರು ಮಾಲ್ತಿದೇವಿ ಅಪ್ಪೆನ ಮೋಕೆದ ಜೋಕುಲು, ಫ್ರೆಂಡ್ಸ್ ಅಂಗಾರಗುಡ್ಡ ಟೈಗರ್ಸ್ ಮುಲ್ಕಿ, ಪುರಲ್ದ ಅಪ್ಪೆನ ಮೋಕೆದ ಬೊಳ್ಳಿಲು ಪೊಳಲಿ ಟೈಗರ್ಸ್, ನಂದಿಗುಡ್ಡ ಹುಲಿ ಬಾಬುಗುಡ್ಡ ಹಾಗೂ ಕಾರ್ಕಳ ಟೈಗರ್ಸ್ ಪ್ರಶಾಂತ್ ಕಾಮತ್ ಅಭಿಮಾನಿ ಬಳಗ ಭಾಗವಹಿಸಲಿದೆ.