ಅ.19 ರಂದು ಎಂಆರ್‌ಪಿಎಲ್-ಎಂಎಸ್‌ಇಝೆಡ್‌ನ ಗುತ್ತಿಗೆ ಕಾರ್ಮಿಕ, ಭೂನಿರ್ವಸಿತರಿಂದ ಜಿಲ್ಲಾಧಿಕಾರಿಗೆ ಮನವಿ

ಅ.19 ರಂದು ಎಂಆರ್‌ಪಿಎಲ್-ಎಂಎಸ್‌ಇಝೆಡ್‌ನ ಗುತ್ತಿಗೆ ಕಾರ್ಮಿಕ, ಭೂನಿರ್ವಸಿತರಿಂದ ಜಿಲ್ಲಾಧಿಕಾರಿಗೆ ಮನವಿ


ಮಂಗಳೂರು: ಎಂಆರ್‌ಪಿಎಲ್-ಎಂಎಸ್‌ಇಝೆಡ್ ಗುತ್ತಿಗೆ ಕಾರ್ಮಿಕರು, ಭೂನಿರ್ವಸಿತರು ಹಾಗೂ ಸಂತ್ರಸ್ತರ ಹೋರಾಟ ಸಮಿತಿಯು ಅ.19 ರಂದು ವಿವಿಧ ಬೇಡಿಕೆಗಳ ಮನವಿಯನ್ನು ದ.ಕ. ಜಿಲ್ಲಾಧಿಕಾರಿಗೆ ಸಲ್ಲಿಸಲಿದೆ. ನಿಗದಿತ ಸಮಯದೊಳಗೆ ಸೂಕ್ತ ಸ್ಪಂದನೆ ದೊರೆಯದಿದ್ದರೆ ತೀವ್ರ ರೀತಿಯ ಹೋರಾಟ ನಡೆಸುವುದಾಗಿ ಸಮಿತಿಯ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಎಚ್ಚರಿಕೆ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಎಂಆರ್‌ಪಿಎಲ್‌ನ ಸ್ಥಳೀಯ ಗುತ್ತಿಗೆ ಕಾರ್ಮಿಕರು ಸಂಸ್ಥೆಯ ಬಗ್ಗೆ ಕೈಗೆತ್ತಿಕೊಂಡ ಹೋರಾಟದ ಜತೆಗೆ ಎಂಆರ್‌ಪಿಎಲ್‌ನ 4ನೇ ಹಂತದ ಭೂ ನಿರ್ವಸಿತರ ಹಿತರಕ್ಷಣಾ ಸಮಿತಿ ಕುತ್ತೆತ್ತೂರು, ಪೆರ್ಮುದೆ, ತೆಂಕ ಎಕ್ಕಾರು, ಹಾಗೂ ಇತ್ತೀಚೆಗೆ ನಡೆದ ಸ್ಪೋಟದ ಸಂತ್ರಸ್ತರಾದ ಕಳವಾರು ಪರಿಸರ ಹೋರಾಟಗಾರರು ಮತ್ತು ಸಾಮಾಜಿಕ ಹೋರಾಟಗಾರರು ಸೇರಿಕೊಂಡು ಈ ಸಮಿತಿಯನ್ನು ರಚಿಸಿರುವುದಾಗಿ ಅವರು ಹೇಳಿದರು. 

ಹೋರಾಟದ ಭಾಗವಾಗಿ ಜಿಲ್ಲಾಧಿಕಾರಿಗೆ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. ಅದರಂತೆ, ಎಂಆರ್‌ಪಿಎಲ್ ಸಂಸ್ಥೆಯ ಒಳಗಡೆ ದುಡಿಯುವ ಎಲ್ಲಾ ಗುತ್ತಿಗೆ ಕಾರ್ಮಿಕರಿಗೆ ಕೆಲಸದ ಭದ್ರತೆ, ವೈದ್ಯಕೀಯ ಸೌಲಭ್ಯ, ತಾರತಮ್ಯ ನಿವಾರಣೆ ಮೊದಲಾದ ಬಗ್ಗೆ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಬೇಕು. 4ನೇ ಹಂತದ ಭೂಸ್ವಾಧೀನಪಡಿಸಿರುವ ಸಂದರ್ಭದಲ್ಲಿ ನೀಡಿರುವ ಭರವಸೆಯಂತೆಯೇ ಉದ್ಯೋಗ, ಇತರ ಸೌಲಭ್ಯ ಒದಗಿಸಬೇಕು. ಗಂಭೀರ ಸ್ವರೂಪದ ಹಾನಿಗೊಳಗಾದ ಕಳವಾರು ನಿವಾಸಿಗಳು ಜೀವಭಯದಿಂದ ಬದುಕುತ್ತಿದ್ದು, ಅವರ ಮನೆ, ಜಾಗ ಎಂಆರ್‌ಪಿಎಲ್‌ನ ೩ನೇ ಹಂತದ ಯೋಜನೆಯ ಕಂಪೌಂಡ್ ಗೋಡೆಯ ಹತ್ತಿರದಲ್ಲಿದೆ. ಮುಂದಿನ ದಿನಗಳಲ್ಲಿಯೂ ಆತಂಕಕದಲ್ಲಿಯೇ ಬದುಕಬೇಕಾಗಿ ಬರುವುದರಿಂದ ಅವರ ಜಮೀನನ್ನು ಸರಕಾರ ಮತ್ತು ಎಂಆರ್‌ಪಿಎಲ್ ಸಂಸ್ಥೆ ಖರೀದಿಸಿ ಉಳಿದವರಿಗೆ ನೀಡಿದಂತೆಯೇ ಸೌಲಭ್ಯ ನೀಡಬೇಕು. ಭೂನಿರ್ವಸಿತರನ್ನು ಹೊರತುಪಡಿಸಿ ಉಳಿದ ಅರ್ಹ ಸ್ಥಳೀಯರಿಗೂ ನೇರ ಉದ್ಯೋಗದಲ್ಲಿ ಅವಕಾಶ ಮೀಸಲಿಡಬೇಕು. ಆ ವ್ಯಾಪ್ತಿಯಲ್ಲಿ ಕೊಳಚೆ ನೀರಿನ ಸಮಸ್ಯೆ, ಕಂಪನಿಗಳಿಂದ ಬರುವ ದುರ್ವಾಸನೆ, ಪರಿಸರದ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳ ನಿರ್ವಹಣೆಗೆ ಸಂಸ್ಥೆಗಳಿಗೆ ಅನುದಾನದ ಕೊರತೆ ಮೊದಲಾದ ಸಮಸ್ಯೆಗಳ ಕುರಿತಂತೆ ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಮಿತಿಯ ಪದಾಧಿಕಾರಿಗಳನ್ನು ಸೇರಿಸಿಕೊಂಡು ಸಮಿತಿ ರಚಿಸಿ ಪ್ರತಿ ಮೂರು ತಿಂಗಳಿಗೊಮ್ಮೆ ಪರಾಮರ್ಶೆ ಸಭೆ ನಡೆಸಬೇಕು ಎಂಬದು ತಮ್ಮ ಪ್ರಮುಖ ಬೇಡಿಕೆಗಳಾಗಿವೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ನೇತ್ರಾವತಿ ಉಳಿಸಿ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಶಶಿರಾಜ್ ಶೆಟ್ಟಿ ಕೊಳಂಬೆ, ಸಾಮಾಜಿಕ ಹೋರಾಟಗಾರ್ತಿ ಪ್ರಸನ್ನ ರವಿ, ಕೆಪಿಟಿಎಂಎಸ್ ಜಿಲ್ಲಾಧ್ಯಕ್ಷ ಯಶ್‌ಪಾಲ್ ಸಾಲ್ಯಾನ್, ಎಂಆರ್‌ಪಿಎಲ್ 4ನೇ ಹಂತದ ಹೋರಾಟ ಸಮಿತಿಯ ಅಧ್ಯಕ್ಷ ಸುಧಾಕರ ಶೆಟ್ಟಿ, ಪ್ರಮುಖ ಡೋನಿ ಸುವಾರಿಸ್, ಬಾಳ ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷ ಶಂಕರ ಜೋಗಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article