2,459 ಕೋಟಿ ಪೊಂಜಿ ಹಗರಣ: ಐವರು ಆರೋಪಿಗಳ ವಿರುದ್ಧ ಇ.ಡಿ. ದೂರು

2,459 ಕೋಟಿ ಪೊಂಜಿ ಹಗರಣ: ಐವರು ಆರೋಪಿಗಳ ವಿರುದ್ಧ ಇ.ಡಿ. ದೂರು

35 ಸಾವಿರಕ್ಕೂ ಅಧಿಕ ಹೂಡಿಕೆದಾರರಿಗೆ ವಂಚನೆ ಆರೋಪ: 2,125.60 ಕೋಟಿ ಅಸಲು ಹಣ ಪಾವತಿಯಾಗಿಲ್ಲ

ಮಂಗಳೂರು: ಬೆಳಗಾವಿಯಲ್ಲಿ ನಡೆದ 2,459 ಕೋಟಿ ರೂ. ಮೊತ್ತದ ಬೃಹತ್ ಪೊಂಜಿ ಹೂಡಿಕೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇ.ಡಿ.) ಮಂಗಳೂರು ಉಪವಲಯ ಕಚೇರಿಯು ಪ್ರಮುಖ ಆರೋಪಿ ಶಿವಾನಂದ ಸಿದ್ದಪ್ಪ ನೀಲನವರ ಸೇರಿದಂತೆ ಐವರು ಆರೋಪಿಗಳು ಹಾಗೂ ಸಂಬಂಧಿತ ಸಂಸ್ಥೆಗಳ ವಿರುದ್ಧ ನ್ಯಾಯಾಲಯಕ್ಕೆ ಪ್ರಾಸಿಕ್ಯೂಷನ್ ದೂರು ಸಲ್ಲಿಸಿದೆ.

ಮಂಗಳೂರಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಅ.9ರಂದು ದೂರು ಸಲ್ಲಿಸಲಾಗಿದ್ದು, ಆರೋಪಿಗಳಿಗೆ ಶಿಕ್ಷೆ ವಿಧಿಸುವಂತೆ ಕೋರಲಾಗಿದೆ ಎಂದು ಇ.ಡಿ. ಅ.10 ರಂದು ಪ್ರಕಟಣೆಯಲ್ಲಿ ಬಿಡುಗಡೆ ಮಾಡಿದೆ.

ತಿಂಗಳಿಗೆ ಶೇ.3ರಷ್ಟು ಲಾಭದ ಆಮಿಷ:

ಬೆಳಗಾವಿ ನಗರದ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ಆಧರಿಸಿ ಇ.ಡಿ. ತನಿಖೆ ಆರಂಭಿಸಿತ್ತು. ಶಿವಾನಂದ ಸಿದ್ದಪ್ಪ ನೀಲನವರ ಅವರು ಶಿವಂ ಅಸೋಸಿಯೇಟ್ಸ್ ಸೇರಿದಂತೆ ವಿವಿಧ ಸಂಸ್ಥೆಗಳ ಮೂಲಕ ವಂಚನೆಯ ಹೂಡಿಕೆ ಜಾಲವನ್ನು ನಡೆಸುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಹೂಡಿಕೆದಾರರಿಗೆ ತಿಂಗಳಿಗೆ ಶೇ.3ರಷ್ಟು ಆದಾಯ ನೀಡುವುದಾಗಿ ಭರವಸೆ ನೀಡಿ, ಹೊಸ ಹೂಡಿಕೆದಾರರನ್ನು ಪರಿಚಯಿಸುವವರಿಗೆ ಶೇ.0.5ರಷ್ಟು ಕಮಿಷನ್ ನೀಡುವ ಆಮಿಷವೊಡ್ಡಲಾಗಿತ್ತು. ಈ ಮೂಲಕ 35 ಸಾವಿರಕ್ಕೂ ಅಧಿಕ ಜನರಿಂದ ಒಟ್ಟು 2,459.49 ಕೋಟಿ ರೂ. ಸಂಗ್ರಹಿಸಲಾಗಿತ್ತು ಎಂದು ಇ.ಡಿ. ಆರೋಪಿಸಿದೆ.

ಹಳೆಯ ಹೂಡಿಕೆದಾರರಿಗೆ ಹಣ ಪಾವತಿಸಲು ಹೊಸ ಹೂಡಿಕೆದಾರರಿಂದ ಸಂಗ್ರಹಿಸಿದ ಹಣದ ಒಂದು ಭಾಗವನ್ನು ಬಳಸಲಾಗಿತ್ತು. ಉಳಿದ ಹಣವನ್ನು ಅಕ್ರಮವಾಗಿ ಬೇರೆಡೆಗೆ ವರ್ಗಾಯಿಸಿ ವೈಯಕ್ತಿಕ ಲಾಭಕ್ಕಾಗಿ ಬಳಸಲಾಗಿದೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ. ಪ್ರಸ್ತುತ ಹೂಡಿಕೆದಾರರಿಗೆ 2,125.60 ಕೋಟಿ ರೂ. ಅಸಲು ಹಣ ಪಾವತಿಯಾಗದೆ ಬಾಕಿ ಉಳಿದಿದೆ ಎಂದು ಇ.ಡಿ. ತಿಳಿಸಿದೆ.

ಎಂಟು ಸ್ಥಳಗಳಲ್ಲಿ ಶೋಧ:

2026ರ ಆಗಸ್ಟ್‌ನಲ್ಲಿ ಬೆಳಗಾವಿ, ಚಿಕ್ಕೋಡಿ ಮತ್ತು ನಿಪ್ಪಾಣಿ ಪ್ರದೇಶಗಳಲ್ಲಿನ ಆರೋಪಿಗಳು ಹಾಗೂ ಅವರ ಸಹಚರರಿಗೆ ಸಂಬಂಧಿಸಿದ ಎಂಟು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಈ ವೇಳೆ ದಾಖಲೆಗಳು, ಕೈಬರಹದ ಲೆಕ್ಕಪತ್ರಗಳು, ಮೊಬೈಲ್ ಸಾಧನಗಳು ಹಾಗೂ ಡಿಜಿಟಲ್ ವಹಿವಾಟಿನ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳ ಸಹಚರರ ಬ್ಯಾಂಕ್ ಖಾತೆಗಳು ಮತ್ತು ಸ್ಥಿರ ಠೇವಣಿಗಳಲ್ಲಿದ್ದ ಸುಮಾರು 2.02 ಕೋಟಿ ರೂ. ಹಣವನ್ನು ಸ್ಥಗಿತಗೊಳಿಸಲಾಗಿದೆ ಎಂದು ಇ.ಡಿ. ಹೇಳಿದೆ.

ಹಣವನ್ನು ವಿವಿಧೆಡೆ ವರ್ಗಾವಣೆ:

ಹೂಡಿಕೆದಾರರಿಂದ ಸಂಗ್ರಹಿಸಿದ ಹಣದ ಒಂದು ಭಾಗವನ್ನು ಅಪಾಯಕಾರಿ ಷೇರು ವಹಿವಾಟಿನಲ್ಲಿ ಹೂಡಿಕೆ ಮಾಡಲಾಗಿದ್ದು, ಇದರಿಂದ 185.95 ಕೋಟಿ ರೂ. ನಷ್ಟವಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಸುಮಾರು 25 ಕೋಟಿ ರೂ. ಹಣವನ್ನು ಎರಡು ಸಹಕಾರಿ ಸಾಲ ಸಂಸ್ಥೆಗಳ ಮೂಲಕ ವರ್ಗಾಯಿಸಿ, ಸಹಚರರ ಹೆಸರಿನಲ್ಲಿ ಭೂಮಿ ಖರೀದಿಸಲು ಸಾಲ ಪಡೆಯಲು ಅನುಕೂಲವಾಗುವಂತೆ ಸ್ಥಿರ ಠೇವಣಿಗಳನ್ನು ಮಾಡಲಾಗಿತ್ತು ಎಂದು ಆರೋಪಿಸಲಾಗಿದೆ.

ಇದಲ್ಲದೆ, ಆರೋಪಿಯ ಪತ್ನಿ ಸಂಗೀತಾ ಮತ್ತು ಅಪ್ರಾಪ್ತ ಪುತ್ರ ಸಿದ್ಧಾಂತ್ ಸೇರಿದಂತೆ ಕುಟುಂಬ ಸದಸ್ಯರ ಬ್ಯಾಂಕ್ ಖಾತೆಗಳು ಹಾಗೂ ಶಿವಂ ಸೇವಾ (ಒಪಿಸಿ) ಪ್ರೈವೇಟ್ ಲಿಮಿಟೆಡ್, ಶಿವಂ ಲೈಫ್‌ಲೈನ್ ಪ್ರೈವೇಟ್ ಲಿಮಿಟೆಡ್ ಮತ್ತು ಶಿವಂ ಫುಡ್ಸ್‌ನಂತಹ ಸಂಸ್ಥೆಗಳಿಗೂ ಹಣ ವರ್ಗಾಯಿಸಲಾಗಿದೆ ಎಂದು ಇ.ಡಿ. ತಿಳಿಸಿದೆ.

ಕನ್ನಡ ಚಲನಚಿತ್ರ ಚಾಂಪಿಯನ್ ನಿರ್ಮಾಣಕ್ಕೂ ಹೂಡಿಕೆದಾರರಿಂದ ಸಂಗ್ರಹಿಸಿದ ಸುಮಾರು 5 ಕೋಟಿ ರೂ. ಹಣ ಬಳಸಲಾಗಿದೆ ಎಂಬ ಅಂಶ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಪ್ರಕರಣದ ಪ್ರಮುಖ ಆರೋಪಿ ಶಿವಾನಂದ ಸಿದ್ದಪ್ಪ ನೀಲನವರ ಅವರನ್ನು 2026ರ ಆಗಸ್ಟ್ 13ರಂದು ಬಂಧಿಸಲಾಗಿದ್ದು, ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಇ.ಡಿ. ಪ್ರಕಟಣೆ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article