ಕರ್ನಾಟಕ ಬ್ಯಾಂಕ್‌ಗೆ ₹435.89 ಕೋಟಿ ನಿವ್ವಳ ಲಾಭ: ಒಟ್ಟು ವ್ಯವಹಾರ ₹2.07 ಲಕ್ಷ ಕೋಟಿ ದಾಟಿ ದಾಖಲೆ
ಮಂಗಳೂರಿನಲ್ಲಿ ನಡೆದ ಬ್ಯಾಂಕಿನ ನಿರ್ದೇಶಕ ಮಂಡಳಿ ಸಭೆಯಲ್ಲಿ ತ್ರೈಮಾಸಿಕದ ಆರ್ಥಿಕ ಫಲಿತಾಂಶಗಳಿಗೆ ಅನುಮೋದನೆ ನೀಡಲಾಯಿತು.
ಬ್ಯಾಂಕಿನ ಒಟ್ಟು ಠೇವಣಿಗಳು 2025ರ ಸೆಪ್ಟೆಂಬರ್ ಅಂತ್ಯದ ₹1,02,817.19 ಕೋಟಿಯಿಂದ 2026ರ ಸೆಪ್ಟೆಂಬರ್ ಅಂತ್ಯಕ್ಕೆ ₹1,15,117.15 ಕೋಟಿಗೆ ಏರಿಕೆಯಾಗಿದ್ದು, ಶೇ.12ರಷ್ಟು ಬೆಳವಣಿಗೆ ದಾಖಲಿಸಿದೆ. ಚಿಲ್ಲರೆ ಅವಧಿ ಠೇವಣಿಗಳು ₹72,197.32 ಕೋಟಿಯಾಗಿವೆ. ಒಟ್ಟು ಮುಂಗಡಗಳು ₹92,015.26 ಕೋಟಿಗೆ ತಲುಪಿದ್ದು, ಹಿಂದಿನ ವರ್ಷದ ₹73,644.14 ಕೋಟಿಗೆ ಹೋಲಿಸಿದರೆ ಶೇ.25ರಷ್ಟು ಹೆಚ್ಚಳವಾಗಿದೆ.
ಬ್ಯಾಂಕಿನ ನಿವ್ವಳ ಬಡ್ಡಿ ಮಾರ್ಜಿನ್ ಶೇ.2.72ರಿಂದ ಶೇ.3.17ಕ್ಕೆ ಏರಿಕೆಯಾಗಿದೆ. 2026ರ ಸೆಪ್ಟೆಂಬರ್ ಅಂತ್ಯಗೊಂಡ ಆರು ತಿಂಗಳ ಅವಧಿಯಲ್ಲಿ ₹854.84 ಕೋಟಿ ನಿವ್ವಳ ಲಾಭ ಗಳಿಸಿದ್ದು, ಹಿಂದಿನ ವರ್ಷದ ಇದೇ ಅವಧಿಯ ₹611.52 ಕೋಟಿ ಲಾಭಕ್ಕಿಂತ ಗಣನೀಯ ಹೆಚ್ಚಳವಾಗಿದೆ.
ಅನುತ್ಪಾದಕ ಆಸ್ತಿಗಳ ಪ್ರಮಾಣ ಇಳಿಕೆ:
ಬ್ಯಾಂಕಿನ ಆಸ್ತಿ ಗುಣಮಟ್ಟದಲ್ಲಿಯೂ ಸುಧಾರಣೆ ಕಂಡುಬಂದಿದೆ. ಒಟ್ಟು ಅನುತ್ಪಾದಕ ಆಸ್ತಿಗಳ ಪ್ರಮಾಣ ಕಳೆದ ವರ್ಷದ ಶೇ.3.33ರಿಂದ ಶೇ.2.27ಕ್ಕೆ ಇಳಿದಿದೆ. ನಿವ್ವಳ ಅನುತ್ಪಾದಕ ಆಸ್ತಿಗಳ ಪ್ರಮಾಣ ಶೇ.1.35ರಿಂದ ಶೇ.0.74ಕ್ಕೆ ಇಳಿಕೆಯಾಗಿದೆ. ರೈಟ್‌ಆಫ್‌ಗಳನ್ನು ಹೊರತುಪಡಿಸಿದ ಪ್ರೊವಿಷನ್ ಕವರೇಜ್ ಅನುಪಾತವು ಶೇ.60.22ರಿಂದ ಶೇ.68.05ಕ್ಕೆ ಏರಿಕೆಯಾಗಿದೆ.
ಚಿಲ್ಲರೆ, ಕೃಷಿ ಹಾಗೂ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಆರ್‌ಎಎಂ) ವಲಯದ ವ್ಯವಹಾರ ಶೇ.19ರಷ್ಟು ವೃದ್ಧಿಯಾಗಿದೆ. 2025ರ ಸೆಪ್ಟೆಂಬರ್ ಅಂತ್ಯಕ್ಕೆ ₹47,958.40 ಕೋಟಿಯಷ್ಟಿದ್ದ ಈ ವಲಯದ ವ್ಯವಹಾರವು 2026ರ ಸೆಪ್ಟೆಂಬರ್ ಅಂತ್ಯಕ್ಕೆ ₹56,968.79 ಕೋಟಿಗೆ ತಲುಪಿದೆ.
ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಎಸ್. ಭಟ್ ಮಾತನಾಡಿ, ಗ್ರಾಹಕರ ವಿಶ್ವಾಸ, ಷೇರುದಾರರ ಬೆಂಬಲ ಹಾಗೂ ಸಿಬ್ಬಂದಿಯ ಪರಿಶ್ರಮದಿಂದ ಬ್ಯಾಂಕ್ ಈ ಸಾಧನೆ ಮಾಡಿದೆ. ಶಿಸ್ತಿನ ಸಾಲ ವಿತರಣೆ, ಪರಿಣಾಮಕಾರಿ ಸಾಲ ವಸೂಲಾತಿ ಮತ್ತು ಸಾಲದ ಖಾತೆಗಳ ನಿರಂತರ ಮೇಲ್ವಿಚಾರಣೆಯಿಂದ ಅನುತ್ಪಾದಕ ಆಸ್ತಿಗಳ ಪ್ರಮಾಣ ಕಡಿಮೆ ಮಾಡಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಲಪಡಿಸುವುದು, ಸುರಕ್ಷಿತ ತಂತ್ರಜ್ಞಾನ ಅಳವಡಿಸಿಕೊಳ್ಳುವುದು ಹಾಗೂ ಗ್ರಾಹಕರಿಗೆ ಅನುಕೂಲಕರ ಸೇವೆ ಒದಗಿಸುವುದಕ್ಕೆ ಬ್ಯಾಂಕ್ ಆದ್ಯತೆ ನೀಡುತ್ತಿದೆ. ಮುಂದಿನ ದಿನಗಳಲ್ಲಿಯೂ ಸಮತೋಲಿತ ಬೆಳವಣಿಗೆ ಮತ್ತು ಗ್ರಾಹಕಸ್ನೇಹಿ ಸೇವೆಯ ಮೂಲಕ ಪ್ರಗತಿ ಮುಂದುವರಿಸುವ ಗುರಿ ಹೊಂದಲಾಗಿದೆ ಎಂದರು.
ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕಿ ಬೀಜಿ ಎಸ್.ಎಸ್. ಮಾತನಾಡಿ, ಪರಿಣಾಮಕಾರಿ ಕಾರ್ಯನಿರ್ವಹಣೆ, ತಂತ್ರಜ್ಞಾನ ಸುಧಾರಣೆ ಮತ್ತು ಸಿಬ್ಬಂದಿಯ ಬದ್ಧತೆಯಿಂದ ಬ್ಯಾಂಕ್ ಪ್ರಗತಿ ಸಾಧಿಸುತ್ತಿದೆ. ಸಾಲ ವಸೂಲಾತಿ ವ್ಯವಸ್ಥೆ ಸುಧಾರಣೆ, ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯ ಬೆಳೆಸುವುದು ಹಾಗೂ ಸಿಬ್ಬಂದಿಯ ಕೌಶಲಾಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು.