ಯುಸಿಎಂ-ಸೆಂಟ್ರಲ್ ರೈಲ್ವೆ ನಿಲ್ದಾಣ ರಸ್ತೆಯನ್ನು ಸ್ವಚ್ಛಗೊಳಿಸಿದ ಜೆನ್‌ಝೀಗಳು

ಯುಸಿಎಂ-ಸೆಂಟ್ರಲ್ ರೈಲ್ವೆ ನಿಲ್ದಾಣ ರಸ್ತೆಯನ್ನು ಸ್ವಚ್ಛಗೊಳಿಸಿದ ಜೆನ್‌ಝೀಗಳು


ಮಂಗಳೂರು: ರಾಮಕೃಷ್ಣ ಮಿಷನ್‌ನ ಸ್ವಚ್ಛ ಮಂಗಳೂರು ಅಭಿಯಾನದ ವತಿಯಿಂದ ಎಂ.ಆರ್.ಪಿ.ಎಲ್. ಹಾಗೂ ಸ್ವಚ್ಛ ಮಂಗಳೂರು ಪ್ರತಿಷ್ಠಾನದ ಸಹಯೋಗದಲ್ಲಿ ಅಕ್ಟೋಬರ್ ತಿಂಗಳ ಸ್ವಚ್ಛತಾ ಶ್ರಮದಾನವನ್ನು ಮಂಗಳೂರಿನ ರೈಲ್ವೆ ನಿಲ್ದಾಣ ರಸ್ತೆ ಪ್ರದೇಶದಲ್ಲಿ ನಡೆಯಿತು.


ಎಂ.ಆರ್.ಪಿ.ಎಲ್. ಸಂಸ್ಥೆಯ ಹಿರಿಯ ವ್ಯವಸ್ಥಾಪಕ ಎಂ.ಕೆ. ರಾವ್ ಹಾಗೂ ಸಿಎಸ್‌ಆರ್ ವ್ಯವಸ್ಥಾಪಕ ಕೇಶವ ಪಾಟಾಳಿ ಅವರು ಜಂಟಿಯಾಗಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಎಂ.ಆರ್.ಪಿ.ಎಲ್‌ನ ಜನರಲ್ ಮ್ಯಾನೇಜರ್ ಮಂದಾರ್ ಕಾಳೆ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಪ್ರೊಫೆಸರ್ ಬಬಿತಾ ಶೆಟ್ಟಿ ಉಪಸ್ಥಿತರಿದ್ದು, ಸ್ವಯಂಸೇವಕರನ್ನು ಪ್ರೋತ್ಸಾಹಿಸಿದರು. 


ಮಂಗಳೂರಿನ ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿರುವ ವಿಶ್ವವಿದ್ಯಾಲಯ ಕಾಲೇಜು ಗ್ರಂಥಾಲಯ ಸಮೀಪದ ಪ್ರದೇಶದಲ್ಲಿ ಬಹುಕಾಲದಿಂದ ‘ಬೈಕ್ ಸ್ಪಾಟ್’ ಆಗಿ ಗುರುತಿಸಿಕೊಂಡಿದ್ದ ಸ್ಥಳವನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಹಿರಿಯ ಸ್ವಯಂಸೇವಕರು ಕೈಗೊಂಡರು. ರೈಲ್ವೆ ಪ್ರಯಾಣಿಕರು, ಪ್ರವಾಸಿಗರು ಹಾಗೂ ನಗರದ ಸಾರ್ವಜನಿಕರು ನಿರಂತರವಾಗಿ ಸಂಚರಿಸುವ ಈ ರಸ್ತೆಯಲ್ಲಿದ್ದ ಅನಗತ್ಯ ಬ್ಯಾನರ್‌ಗಳು, ತ್ಯಾಜ್ಯ, ಒಣ ಎಲೆಗಳು ಮತ್ತು ಇತರ ಅವಶೇಷಗಳನ್ನು ತೆರವುಗೊಳಿಸಲಾಯಿತು. 


ಬಹುಕಾಲದಿಂದ ಅಶುಚಿತ್ವದಿಂದ ಕೂಡಿದ್ದ ಈ ಪ್ರದೇಶವನ್ನು ಸ್ವಚ್ಛಗೊಳಿಸಿ, ಸಾರ್ವಜನಿಕರಿಗೆ ಉತ್ತಮ ಅನುಭವ ನೀಡುವಂತೆ ರೂಪಿಸಲಾಯಿತು. ವಿಠಲದಾಸ್ ಪ್ರಭು, ಸತ್ಯನಾರಾಯಣ ಕೆ.ವಿ., ಅನಿರುದ್ಧ ನಾಯಕ್, ಕಮಲಾಕ್ಷ ಪೈ, ಆರ್.ಕೆ.ಭಟ್, ಪ್ರಕಾಶ್, ಅಶೋಕ್, ಉದಯ್.ಕೆ.ಪಿ., ತಾರಾನಾಥ ಆಳ್ವ, ಮೆಹಬೂಬ್, ಗಂಗಾಧರ ಶಾಸ್ತ್ರಿ, ನಾಗೇಶ್ ಸೇರಿದಂತೆ ಹಲವು ಹಿರಿಯ ಸ್ವಯಂಸೇವಕರು ಈ ಕಾರ್ಯದಲ್ಲಿ ಕೈಜೋಡಿಸಿದರು.


ನಿಟ್ಟೆ ಫಿಜಿಯೋಥೆರಪಿ ಸಂಸ್ಥೆಯ ಅಧ್ಯಾಪಕರಾದ ರುಚಿತಾ ನರ್ಸಿಯಾ ಮತ್ತು ಅರುಣ್ ವರ್ಗೀಸ್ ಅವರ ನೇತೃತ್ವದಲ್ಲಿ, ವಿದ್ಯಾರ್ಥಿ ಸಂಯೋಜಕರಾದ ಅಶ್ವಿನಿ ಮತ್ತು ಎಡ್ವಿನ್ ವಿಜಯ್ ಅವರ ಸಹಕಾರದೊಂದಿಗೆ ವಿದ್ಯಾರ್ಥಿಗಳ ಮತ್ತೊಂದು ತಂಡ ರೈಲ್ವೆ ನಿಲ್ದಾಣ ರಸ್ತೆಯ ಪಾದಚಾರಿ ಮಾರ್ಗವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ರಸ್ತೆಯ ಬದಿಯ ಗೋಡೆಗಳ ಮೇಲಿದ್ದ ಪೋಸ್ಟರ್‌ಗಳು ಮತ್ತು ಅನಗತ್ಯ ಅಂಟುಹಾಳೆಗಳನ್ನು ತೆಗೆದುಹಾಕಿದರು. ಗೋಡೆಗಳ ಮೇಲಿದ್ದ ಕೊಳಕು ಮತ್ತು ಅಂಟಿನ ಗುರುತುಗಳನ್ನು ಬ್ರಷ್‌ಗಳಿಂದ ಉಜ್ಜಿ, ನೀರಿನಿಂದ ತೊಳೆದು ಸ್ವಚ್ಛಗೊಳಿಸಿದರು. ಇದರಿಂದ ಸಾರ್ವಜನಿಕ ಸ್ಥಳದ ಗೋಡೆಗಳು ಸ್ವಚ್ಛವಾಗಿ ಕಾಣುವಂತಾದವು.


ಸ್ವಚ್ಛತೆಯಲ್ಲಿ ಯುವಶಕ್ತಿ ಜೆನ್ ಝೀಗಳ ಭಾಗಿ:

ಈ ಶ್ರಮದಾನದ ಪ್ರಮುಖ ಆಕರ್ಷಣೆಯಾಗಿದ್ದುದು ಯುವಜನರ ಉತ್ಸಾಹಭರಿತ ಪಾಲ್ಗೊಳ್ಳುವಿಕೆ. ಕೆನರಾ ಪದವಿ ಕಾಲೇಜು ಹಾಗೂ ನಿಟ್ಟೆ ಫಿಸಿಯೋಥೆರಪಿ ಸಂಸ್ಥೆಯ ಜೆನ್‌ಝೀ ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ರೈಲ್ವೆ ನಿಲ್ದಾಣ ರಸ್ತೆಯ ಗೋಡೆಗಳ ಮೇಲಿದ್ದ ಪೋಸ್ಟರ್‌ಗಳು, ಬ್ಯಾನರ್‌ಗಳು ಮತ್ತು ಅನಗತ್ಯ ಅಂಟುಹಾಳೆಗಳನ್ನು ತೆರವುಗೊಳಿಸಿ, ಬ್ರಷ್‌ಗಳಿಂದ ಗೋಡೆಗಳನ್ನು ಉಜ್ಜಿ, ನೀರಿನಿಂದ ಸ್ವಚ್ಛಗೊಳಿಸುವ ಮೂಲಕ ಸಾರ್ವಜನಿಕ ಸ್ಥಳಗಳ ಸೌಂದರ್ಯವನ್ನು ಮರಳಿ ತರುವಲ್ಲಿ ತಮ್ಮ ಶ್ರಮವನ್ನು ಸಮರ್ಪಿಸಿದರು.


ಸ್ವಚ್ಛಗೊಳಿಸಿದ ಗೋಡೆಗಳಿಗೆ ಬಣ್ಣಗಳ ಸ್ಪರ್ಶದೊಂದಿಗೆ ಹೊಸ ರೂಪ ನೀಡುವ ಕಾರ್ಯವನ್ನೂ ಕೈಗೊಳ್ಳಲಾಯಿತು. ಈ ಯುವಕರು ಮುಂದಿನ ಹಂತದಲ್ಲಿ ಉಳಿದ ಗೋಡೆಗಳಿಗೆ ಬಣ್ಣ ನೀಡಿ, ವರ್ಲಿ ಕಲೆಯ ಮೂಲಕ ಅಲಂಕರಿಸುವ  ಯೋಜನೆಯನ್ನು ರೂಪಿಸಲಾಗಿದೆ. ಇದರೊಂದಿಗೆ, ರಸ್ತೆ ಬದಿಯಲ್ಲಿ ಗಿಡಗಳನ್ನು ನೆಡುವ ಮೂಲಕ  ‘ಬೈಕ್ ಸ್ಪಾಟ್’ಅನ್ನು ಹಸಿರು ಪ್ರದೇಶವಾಗಿ ಪರಿವರ್ತಿಸುವ ಉದ್ದೇಶವೂ ಇದೆ.


ಸ್ವಚ್ಛ ಮಂಗಳೂರು ಅಭಿಯಾನವು ಕೇವಲ ಸ್ವಚ್ಛತಾ ಕಾರ್ಯಕ್ಕೆ ಸೀಮಿತವಾಗದೆ, ಸಾರ್ವಜನಿಕ ಸ್ಥಳಗಳ ಸೌಂದರ್ಯವರ್ಧನೆ, ಪರಿಸರ ಜಾಗೃತಿ ಮತ್ತು ನಾಗರಿಕ ಜವಾಬ್ದಾರಿಯನ್ನು ಉತ್ತೇಜಿಸುವ ನಿರಂತರ ಜನಾಂದೋಲನವಾಗಿದೆ. ಈ ಹಿನ್ನಲೆಯಲ್ಲಿ ರೈಲ್ವೆ ನಿಲ್ದಾಣದ ಮೂಲಕ ಮಂಗಳೂರಿಗೆ ಆಗಮಿಸುವ ಪ್ರಯಾಣಿಕರು ಹಾಗೂ ಸಾರ್ವಜನಿಕರನ್ನು ಸ್ವಚ್ಛ, ಸುಂದರ ಮತ್ತು ಕಲಾತ್ಮಕ ಪರಿಸರ ಸ್ವಾಗತಿಸುವಂತೆ ಮಾಡುವ ಈ ಪ್ರಯತ್ನವು ನಾಗರಿಕರ ಸಹಭಾಗಿತ್ವದ ಉತ್ತಮ ಉದಾಹರಣೆಯಾಗಿ ಸ್ವಚ್ಛ ಮಂಗಳೂರಿನತ್ತ ನಿರಂತರ ಹೆಜ್ಜೆ ಇಡುವ ಒಂದು ವಿನಮ್ರ ಪ್ರತ್ನವಾಗಿದೆ.











Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article