ನವರಾತ್ರಿ ಹೆಸರಿನಲ್ಲಿ ಅಶ್ಲೀಲತೆ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ: ದುರ್ಗಾವಾಹಿನಿ ಮಂಗಳೂರು ವತಿಯಿಂದ ತೀವ್ರ ಖಂಡನೆ
ಮಂಗಳೂರು: ಪವಿತ್ರ ನವರಾತ್ರಿ ಉತ್ಸವದ ಸಂದರ್ಭದಲ್ಲಿ ದಾಂಡಿಯಾ ಹೆಸರಿನಲ್ಲಿ ಅಸಭ್ಯ ನೃತ್ಯ ಹಾಗೂ ಪಾಶ್ಚಿಮಾತ್ಯ ಹಾಡುಗಳನ್ನು ಆಯೋಜಿಸಿ, ಹಿಂದೂ ಧರ್ಮೀಯರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಘಟನೆಯನ್ನು ದುರ್ಗಾವಾಹಿನಿ ಮಂಗಳೂರು ಸಂಘಟನೆಯು ತೀವ್ರವಾಗಿ ಖಂಡಿಸುತ್ತದೆ.
ಅ.18 ರಂದು ಸುಲ್ತಾನ್ ಬತ್ತೇರಿಯ ‘ಎಡ್ಜ್ ವಾಟರ್’ ಎಂಬಲ್ಲಿ ಶಾಲೇಟ್ ಪಿಂಟೋ ಅವರ ನೇತೃತ್ವದಲ್ಲಿ "Shalet Pinto Presents Dandiya Night 2.0 - On Occasion of Navratri" ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನವರಾತ್ರಿ ಹಬ್ಬ ಹಾಗೂ ದಾಂಡಿಯಾ ನೃತ್ಯವು ದುರ್ಗಾದೇವಿಯ ಆರಾಧನೆ ಮತ್ತು ಭಕ್ತಿ-ಶ್ರದ್ಧೆಯ ಸಂಕೇತವಾಗಿದೆ. ಆದರೆ, ಈ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕತೆಯನ್ನು ಬದಿಗೊತ್ತಿ, ಅಸಭ್ಯ ಉಡುಪು ಧರಿಸಿ, ಅಶ್ಲೀಲ ನೃತ್ಯ ಹಾಗೂ ಪಾಶ್ಚಿಮಾತ್ಯ ಹಾಡುಗಳನ್ನು ಪ್ರದರ್ಶಿಸಲಾಗಿದೆ. ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ.
ಪವಿತ್ರ ನವರಾತ್ರಿ ಹಬ್ಬದ ಹೆಸರನ್ನು ದುರ್ಬಳಕೆ ಮಾಡಿಕೊಂಡು ಇಂತಹ ಅಸಭ್ಯ ಚಟುವಟಿಕೆಗಳನ್ನು ನಡೆಸಿದ ಆಯೋಜಕರಾದ ಶಾಲೇಟ್ ಪಿಂಟೋ ಹಾಗೂ ಇದಕ್ಕೆ ಸಂಬಂಧಪಟ್ಟವರ ವಿರುದ್ಧ ಈಗಾಗಲೇ ಬರ್ಕೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ. ಪೊಲೀಸರು ತಕ್ಷಣವೇ ಎಫ್.ಐ.ಆರ್ (FIR) ದಾಖಲಿಸಿ, ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ದುರ್ಗಾವಾಹಿನಿ ಆಗ್ರಹಿಸುತ್ತದೆ.