ಎಂಆರ್‌ಪಿಎಲ್‌ಗೆ ಎರಡು ರಾಷ್ಟ್ರೀಯ ಪ್ರಶಸ್ತಿ: ಸ್ವದೇಶಿ ತಂತ್ರಜ್ಞಾನ ಅಭಿವೃದ್ಧಿ, ನಾವೀನ್ಯತೆಗೆ ಸಂದ ಪುರಸ್ಕಾರ
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಧೀನದಲ್ಲಿರುವ ಸೆಂಟರ್ ಫಾರ್ ಹೈ ಟೆಕ್ನಾಲಜಿ ವತಿಯಿಂದ ನೀಡಲಾಗುವ 2025-26ನೇ ಸಾಲಿನ ನಾವೀನ್ಯತೆ ಪ್ರಶಸ್ತಿಗಳಲ್ಲಿ ಎಂಆರ್‌ಪಿಎಲ್ ಅತ್ಯುತ್ತಮ ಸ್ವದೇಶಿ ತಂತ್ರಜ್ಞಾನ ಅಭಿವೃದ್ಧಿ ಮತ್ತು ಸಂಸ್ಕರಣಾಗಾರದಲ್ಲಿನ ಅತ್ಯುತ್ತಮ ನಾವೀನ್ಯತೆ ವಿಭಾಗಗಳಲ್ಲಿ ವಿಜೇತ ಸಂಸ್ಥೆಯಾಗಿ ಹೊರಹೊಮ್ಮಿದೆ.
ಗೋವಾದ ಎಟಿಐ-ಒಎನ್‌ಜಿಸಿಯಲ್ಲಿ ನಡೆದ 29ನೇ ಇಂಧನ ತಂತ್ರಜ್ಞಾನ ಮತ್ತು ನಾವೀನ್ಯತೆ ಸಮಾವೇಶದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಅತ್ಯುತ್ತಮ ಸ್ವದೇಶಿ ತಂತ್ರಜ್ಞಾನ ಅಭಿವೃದ್ಧಿ, ಸಂಸ್ಕರಣಾಗಾರದಲ್ಲಿನ ಅತ್ಯುತ್ತಮ ನಾವೀನ್ಯತೆಗೆ ಈ ಪ್ರಶಸ್ತಿಗಳು ಲಭಿಸಿವೆ.
ಪ್ರಶಸ್ತಿಗಳ ಆಯ್ಕೆ ಪ್ರಕ್ರಿಯೆಗೆ ವೈಜ್ಞಾನಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ಜಿ.ಡಿ.ಯಾದವ್ ನೇತೃತ್ವದ ಸಮಿತಿ ಚಾಲನೆ ನೀಡಿತ್ತು. ಎಂಆರ್‌ಪಿಎಲ್ ವ್ಯವಸ್ಥಾಪಕ ನಿರ್ದೇಶಕ ಮುಂಡ್ಕೂರು ಶ್ಯಾಮಪ್ರಸಾದ್ ಕಾಮತ್ ನೇತೃತ್ವದ ನಿಯೋಗ ಪ್ರಶಸ್ತಿಗಳನ್ನು ಸ್ವೀಕರಿಸಿತು. ನಿಯೋಗದಲ್ಲಿ ನಿರ್ದೇಶಕ(ರಿಫೈನರಿ) ನಂದಕುಮಾರ್ ವೇಲಾಯುಧನ್ ಪಿಳ್ಳೈ, ಕಾರ್ಯನಿರ್ವಾಹಕ ನಿರ್ದೇಶಕ(ರಿಫೈನರಿ) ಎನ್.ಆನಂದ ಕುಮಾರ್, ಜಿಜಿಎಂ(ಮೆಂಟೆನನ್ಸ್) ಎಚ್.ಸಿ.ಸತ್ಯನಾರಾಯಣ, ಜಿಜಿಎಂ(ಟಿಎಸ್) ಸುಧೀರ್ ಪೈ ಎಂ., ಇನ್ನೋವೇಶನ್ ಸೆಂಟರ್ ಮುಖ್ಯ ವ್ಯವಸ್ಥಾಪಕ ಕಾರ್ತಿಕ್ ಆರ್. ಹಾಗೂ ಮುಖ್ಯ ವ್ಯವಸ್ಥಾಪಕ ಎಸ್.ನಿರ್ಮಲ್ ಗಣೇಶ್ ಉಪಸ್ಥಿತರಿದ್ದರು.
ಸತತ ಐದನೇ ವರ್ಷ ರಾಷ್ಟ್ರೀಯ ಮನ್ನಣೆ
ಇಂಧನ ತಂತ್ರಜ್ಞಾನ ಸಮಾವೇಶ ಮತ್ತು ಇಂಡಿಯಾ ಎನರ್ಜಿ ವೀಕ್ ಸೇರಿದಂತೆ ಭಾರತ ಸರ್ಕಾರದ ಪ್ರಮುಖ ವೇದಿಕೆಗಳಲ್ಲಿ ನಾವೀನ್ಯತೆಗಾಗಿ ಸತತ ಐದನೇ ಬಾರಿಗೆ ರಾಷ್ಟ್ರೀಯ ಮನ್ನಣೆ ಪಡೆದಿದೆ. ಈ ಸಾಧನೆಗಳು ಸ್ವದೇಶಿ ತಂತ್ರಜ್ಞಾನ ಅಭಿವೃದ್ಧಿ, ಕಾರ್ಯಾಚರಣೆಯ ದಕ್ಷತೆ ಮತ್ತು ನಾವೀನ್ಯತೆಗೆ ಆದ್ಯತೆ ನೀಡುವ ಭವಿಷ್ಯ ಸನ್ನದ್ಧ ಸಂಸ್ಕರಣಾಗಾರವಾಗಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ.