ಮಂಗಳೂರು ವಿಮಾನ ನಿಲ್ದಾನ-ಟೂರಿಸ್ಟ್ ವಾಹನಗಳಿಂದ ದುಬಾರಿ ಶುಲ್ಕ: ನಿಲ್ಲಿಸದಿದ್ದರೆ ಸತ್ಯಾಗ್ರಹ

ಮಂಗಳೂರು ವಿಮಾನ ನಿಲ್ದಾನ-ಟೂರಿಸ್ಟ್ ವಾಹನಗಳಿಂದ ದುಬಾರಿ ಶುಲ್ಕ: ನಿಲ್ಲಿಸದಿದ್ದರೆ ಸತ್ಯಾಗ್ರಹ


ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೂರಿಸ್ಟ್ ವಾಹನಗಳಿಂದ ದುಬಾರಿ ಶುಲ್ಕ ವಸೂಲಿ ಮಾಡಲಾಗುತ್ತಿದ್ದು, ಇದನ್ನು 10 ದಿನಗಳ ಒಳಗೆ ನಿಲ್ಲಿಸದಿದ್ದರೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ದಕ್ಷಿಣ ಕನ್ನಡ ಟ್ಯಾಕ್ಸಿಮೆನ್ಸ್ ಆಂಡ್ ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್ ತಿಳಿಸಿದೆ.

ಮಂಗಳವಾರದಂದು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್ ಉಡುಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಕೆ.ರಘುಪತಿ ಭಟ್, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲ್ವಿಚಾರಣೆ ನೋಡುತ್ತಿರುವ ಅದಾನಿ ಸಂಸ್ಥೆಯಿಂದ ಟೂರಿಸ್ಟ್ ವಾಹನಗಳಿಗೆ ಅನ್ಯಾಯಗಳಾಗುತ್ತಿವೆ. ಟೂರಿಸ್ಟ್ ವಾಹನಗಳು ಪಾರ್ಕಿಂಗ್ ಲಾಟ್ ಗೆ ಹೋಗದೇ ಇದ್ದರೂ ಗ್ರಾಹಕರನ್ನು ಪಿಕ್ ಅಪ್ ಮಾಡುವ ಸಂದರ್ಭದಲ್ಲಿ 180 ರೂ. ಶುಲ್ಕ ಪಾವತಿ ಮಾಡಬೇಕಾಗಿದೆ. ಇದರ ವಿರುದ್ದ ಈಗಾಗಲೇ ಕಾವೂರು ಜಂಕ್ಷನ್ ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿ ಅದಾನಿ ಸಂಸ್ಥೆ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಅವರು ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ. ಇದರ ನಡುವೆ ಅ.1ರಿಂದ ಗ್ರಾಹಕರನ್ನು ಡ್ರಾಪ್ ಮಾಡಿ ಹೊರಗೆ ಬರುವಾಗಲೂ 50 ರೂ. ವಸೂಲಿ ಮಾಡಲಾಗುತ್ತಿದೆ. ಖಾಸಗಿ ವಾಹನಗಳಿಗೆ ಈ ಶುಲ್ಕವಿಲ್ಲ ಎಂದು ಹೇಳಿದರು. 

ಬೆಂಗಳೂರು, ಮುಂಬೈ ಸೇರಿದಂತೆ ದೇಶದ ಬೇರೆ ಯಾವುದೇ ವಿಮಾನ ನಿಲ್ದಾಣಗಳಲ್ಲಿ ಈ ರೀತಿ ಟೂರಿಸ್ಟ್ ವಾಹನಗಳಿಂದ ಶುಲ್ಕ ವಸೂಲಿ ಮಾಡುತ್ತಿಲ್ಲ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರವೇಶ ಶುಲ್ಕವಿಲ್ಲ. ಅಲ್ಲಿ 8 ನಿಮಿಷಗಳವರೆಗೆ ಡ್ರಾಪ್ ಶುಲ್ಕವಿಲ್ಲ. ಮಂಗಳೂರಿನಲ್ಲಿ 10 ನಿಮಿಷದವರೆಗೆ ಡ್ರಾಪ್ ಶುಲ್ಕ ಪಡೆಯಬಾರದು. 10 ನಿಮಿಷಗಳ ಅನಂತರ 100 ರೂ. ತೆಗೆದುಕೊಳ್ಳಬಹುದು. ಅದನ್ನು ಪಾವತಿಸಲು ಟೂರಿಸ್ಟ್ ವಾಹನದವರು ಸಿದ್ಧರಿದ್ದಾರೆ ಎಂದು ರಘುಪತಿ ಭಟ್ ಹೇಳಿದರು. 

ಉಡುಪಿಯಲ್ಲಿ 4,000, ದ.ಕದಲ್ಲಿ 2,500 ಸೇರಿದಂತೆ ಒಟ್ಟು 6,500 ಮಂದಿ ಅಸೋಸಿಯೇಷನ್ ನಲ್ಲಿ ನೋಂದಾಯಿತ ಟೂರಿಸ್ಟ್ ಟ್ಯಾಕ್ಸಿಮೆನ್ ಗಳಿದ್ದಾರೆ. ಅಲ್ಲದೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಕಾಸರಗೋಡು, ಮಡಿಕೇರಿ, ಭಟ್ಕಳದಿಂದಲೂ ಟೂರಿಸ್ಟ್ ವಾಹನಗಳು ಬರುತ್ತವೆ. ಈ ರೀತಿ ನಿಯಮಬಾಹಿರವಾಗಿ ಶುಲ್ಕ ವಸೂಲಿ ಮಾಡುವುದನ್ನು 10 ದಿನಗಳೊಳಗೆ ನಿಲ್ಲಿಸದಿದ್ದರೆ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು. ಜಿಲ್ಲಾಡಳಿತ, ಕೇಂದ್ರ ಸರಕಾರ ಕೂಡಲೇ ಮಧ್ಯಪ್ರವೇಶಿಸಿ ನ್ಯಾಯಯುತವಾಗಿ ಬಾಡಿಗೆ ಮಾಡುತ್ತಿರುವವರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಅವರು ಒತ್ತಾಯಿಸಿದರು. 

ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್ ನ ದ.ಕ. ಅಧ್ಯಕ್ಷ ಆನಂದ ಕೆ., ಪದಾಧಿಕಾರಿಗಳಾದ ಸುರೇಶ್ ಸಾಲ್ಯಾನ್, ರಮೇಶ್ ಕೆ.ಕೋಟ್ಯಾನ್, ಹರೀಶ್ ಶೆಟ್ಟಿ ಕುತ್ತಾರು, ರಾಜೇಶ್ ಉರ್ವಸ್ಟೋರ್, ಅಝೀಝ್ ದೇರಳಕಟ್ಟೆ, ಕರುಣಾಕರ್ ಕುಂಟಿಕಾನ, ರೋಶನ್ ಕಿನ್ನಿಗೋಳಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article