ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ವಿಚಾರ-ದಸರಾ ಬಳಿಕ ಆರು ಜಿಲ್ಲೆಗಳ ಉಸ್ತುವಾರಿ ಸಚಿವರು, ಶಾಸಕರ ಸಭೆ: ಯು.ಟಿ. ಖಾದರ್
ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಸಂಬಂಧಿಸಿ ನಗರದ ದಿ ಓಶಿಯನ್ ಪರ್ಲ್ ಸಭಾಂಗಣದಲ್ಲಿ ರವಿವಾರ ನಡೆದ ದ.ಕ. ಜಿಲ್ಲೆಯ ಶಾಸಕರು, ವಿವಿಧ ಸಂಘ ಸಂಸ್ಥೆಗಳ ಧುರೀಣರ ಪೂರ್ವ ಭಾವಿ ಚಿಂತನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈಗಾಗಲೇ ಹೈಕೋರ್ಟ್ ಪೀಠ ಸ್ಥಾಪನೆ ಸಾಧ್ಯತೆಯ ಬಗ್ಗೆ ಪರಿಶೀಲಿಸಲು ರಾಜ್ಯ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರು ನ್ಯಾಯಬದ್ಧವಾಗಿ ಮೂವರು ನ್ಯಾಯಮೂರ್ತಿಗಳ ಸಮಿತಿ ರಚಿಸಿದ್ದಾರೆ. ಇದೊಂದು ಉತ್ತಮ ಸಮಿತಿ. ಈ ಸಮಿತಿಯನ್ನು ನೋಡುವಾಗಲೇ ಹೈಕೋರ್ಟ್ ಪೀಠ ಮಂಗಳೂರಿಗೆ ಸಿಗುತ್ತದೆ ಎಂಬ ಭಾವನೆ ಮೂಡಿದೆ ಎಂದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಸರಕಾರದ ಪೂರ್ಣ ಸಹಕಾರ, ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ ಎಂದು ಅವರು ಹೇಳಿದರು.
ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಎಲ್ಲ ಸೌಕರ್ಯಗಳು ಇವೆ. ಪಕ್ಕದ ಜಿಲ್ಲೆಗಳಾದ ಚಿಕ್ಕಮಗಳೂರು, ಉಡುಪಿ, ಕಾರವಾರ, ಕೊಡಗು, ಶಿವಮೊಗ್ಗ ಮತ್ತು ಉತ್ತರ ಕನ್ನಡದವರಿಗೆ ರಾಜಧಾನಿ ಬೆಂಗಳೂರು ದೂರವಾ ಗುತ್ತದೆ. ಹೀಗಾಗಿ ಆ ಜಿಲ್ಲೆಯವರು ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಖಂಡಿತ ಬೆಂಬಲ ನೀಡುತ್ತಾರೆ ಎಂಬ ಭರವಸೆ ನಮಗೆ ಇದೆ. ಎಲ್ಲರನ್ನು ವಿಶ್ವಾಸ ತೆಗೆದುಕೊಂಡು ಒಗ್ಗಟ್ಟಿನ ಸಂದೇಶವನ್ನು ಹೈಕೋರ್ಟ್ ಪೀಠ ಸ್ಥಾಪನೆಗೆ ಸಂಬಂಧಿಸಿ ಅಭಿಪ್ರಾಯ ಸಂಗ್ರಹಿಸಲು ರಚನೆಯಾದ ಸಮಿತಿಗೆ ನೀಡಲಾಗುವುದು ಎಂದು ಹೇಳಿದರು.
ಡಿಸಿ ನೇತೃತ್ವದಲ್ಲಿ ಸಮಿತಿ:
ಮಂಗಳೂರಿನಲ್ಲಿ ಹೈಕೋರ್ಟ್ ಸ್ಥಾಪನೆಗೆ ಈಗ ಇರುವ ಸೌಲಭ್ಯಗಳು ಮುಂದೆ ಏನೆಲ್ಲಾ ಮಾಡಬೇಕು ಎನ್ನುವ ಬಗ್ಗೆ ಚೆಕ್ಲೀಸ್ಟ್ ಮಾಡಲು ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್ವಿ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು ಎಂದು ಖಾದರ್ ಮಾಹಿತಿ ನೀಡಿದರು.
ಹೈಕೋರ್ಟ್ ಪೀಠ ಸ್ಥಾಪನೆಯಿಂದ ಕೇವಲ ವಕೀಲರಿಗೆ, ಹೈಕೋರ್ಟ್ನಲ್ಲಿ ಕೇಸ್ ಇದ್ದವರಿಗೆ ಮಾತ್ರ ಲಾಭವಿಲ್ಲ. ಇಡೀ ದ.ಕ. ಜಿಲ್ಲೆ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಅಭಿವೃದ್ಧಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಖಂಡಿತ ಲಾವಾಗುತ್ತದೆ ಎಂದು ತಿಳಿಸಿದರು.
ದ.ಕ. ಜಿಲ್ಲೆಯ ಹಿರಿಯ ವಕೀಲರು ಹೈಕೋರ್ಟ್ ಪೀಠ ಸ್ಥಾಪನೆಗೆ ಶ್ರಮಿಸುತ್ತಿದ್ದಾರೆ. ಹಿಂದೆ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಕೇವಲ 2 ಲಾ ಕಾಲೇಜುಗಳು ಇದ್ದವು. ಈಗ 7 ಲಾ ಕಾಲೇಜುಗಳು ಇವೆ. ದ.ಕ. ಜಿಲ್ಲೆಯಲ್ಲಿ ಸುಮಾರು 2,500ಕ್ಕೂ ಅಧಿಕ ವಕೀಲರು ಸೇವೆ ಸಲ್ಲಿಸುತ್ತಿದ್ದಾರೆ ಎಂದು ಖಾದರ್ ಹೇಳಿದರು.
ತುಳು ರಾಜ್ಯದ ಎರಡನೇ ಹೆಚ್ಚುವರಿ ಆಡಳಿತ ಭಾಷೆ ಆಗಬೇಕೆಂದು ಬಹಳ ಹಿಂದಿನಿಂದಲೂ ಬೇಡಿಕೆ ಇತ್ತು. ಆದರೆ ಅದು ಯಾವಾಗ ಆಗುತ್ತದೆ ಎಂಬ ನಿರೀಕ್ಷೆ ಯಾರಲ್ಲೂ ಇರಲಿಲ್ಲ. ಈಗ ಅದು ಸಾಕಾರಗೊಂಡಿದೆ. ಅದೇ ರೀತಿ ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಖಚಿತ. ಆಗದಿರುವುದನ್ನು ಆಗುವಾಗೆ ಮಾಡುವ ಶಕ್ತಿ ಮಂಗಳೂರಿನ ವರಿಗೆ ಇದೆ. ಆ ಶಕ್ತಿ ಈ ಮಣ್ಣಿನಲ್ಲಿದೆ ಎಂದು ಖಾದರ್ ತಿಳಿಸಿದರು.
ನಾನು ಡ್ರೈವರ್, ಐವನ್ ಕಂಡೆಕ್ಟರ್:
ನಾನು ವಕೀಲರಾಗಿ ಪ್ರಾಕ್ಟೀಸ್ ಸ್ವಲ್ಪ ಸಮಯ ಮಾಡಿದ್ದೆ. ವಕೀಲರಾಗಿ ಹೊರಬರುವಾಗ ನನಗೆ ಎರಡು ದಾರಿ ಕಂಡು ಬಂದಿತ್ತು.‘ ಅವಕಾಶ ಸಿಕ್ಕಿದರೆ ವಿಧಾನ ಸಭೆಗೆ ಇಲ್ಲವಾದರೆ ಹೈಕೋರ್ಟ್ಗೆ’. ಅದರಂತೆ ವಿಧಾನ ಸಭೆಗೆ ಪ್ರವೇಶ ದಾರಿ ಸಿಕ್ಕಿದೆ. ಮುಂದೆ ಯಾವ ದಾರಿ ನೋಡುವಾ! ‘ಈಗ ಹೈಕೋರ್ಟ್ ಪೀಠ ಸ್ಥಾಪನೆಗೆ ಸಂಬಂಧಿಸಿ ರಚನೆಯಾಗಿರುವ ಹೋರಾಟ ಸಮಿತಿಯಲ್ಲಿ ಚಾಲಕನ ಜವಾಬ್ದಾರಿಯನ್ನು ನನಗೆ ನೀಡಲಾಗಿದೆ. ನಿರ್ವಾಹಕರಾಗಿ ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ಇದ್ದಾರೆ. ಐವನ್ ಅವರು ಹೇಳಿದಂತೆ ನಾವು ಮುಂದುವರಿಯಬೇಕಾಗಿದೆ ಎಂದು ತಿಳಿಸಿದರು.
ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್, ಬಂಟ್ವಾಳ ಶಾಸಕ ರಾಜೇಶ್ ನಾಯಕ್, ಮಂಗಳೂರು ವಿವಿ ಕುಲಪತಿ ಪ್ರೊ. ಪಿ.ಎಲ್. ಧರ್ಮ, ರಾಜ್ಯ ಸಭಾ ಮಾಜಿ ಸದಸ್ಯ ಬಿ. ಇಬ್ರಾಹೀಂ, ಮಾಜಿ ಶಾಸಕ ಜೆ. ಆರ್.ಲೋಬೊ, ಹಿರಿಯ ವಕೀಲರಾದ ಒ.ಟಿ.ಭಟ್, ದ.ಕ. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ದ.ಕ. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಗದೀಶ್ ಶೇಣವ, ದ.ಕ.ಜಿಲ್ಲಾ ಪ್ರಧಾನ ಜಿಲ್ಲಾ ಸರಕಾರಿ ಫ್ಲೀಡರ್ ಎಂ.ಪಿ.ನೊರೊನ್ಹಾ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್ವಿ, ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ದ.ಕ. ಜಿಲ್ಲಾ ಎಸ್ಪಿ ಡಾ.ಅರುಣ್ ಕೆ, ಮಾಜಿ ಸಚಿವರಾದ ಬಿ.ರಮಾನಾಥ ರೈ ಮತ್ತು ಅಭಯಚಂದ್ರ ಜೈನ್, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿಎಸ್ ಗಟ್ಟಿ, ಎಸ್ಡಿಎಂ ಲಾ ಕಾಲೇಜು ಪ್ರಾಂಶುಪಾಲ ಡಾ. ತಾರಾನಾಥ, ಮಾಜಿ ಮೇಯರ್ಗಳಾದ ಕೆ.ಅಶ್ರಫ್, ಶಶಿಧರ ಹೆಗ್ಡೆ ಮತ್ತು ಭಾಸ್ಕರ ಕೆ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಕೊಂಕಣಿ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಅಲ್ವಾರಿಸ್, ಹಿರಿಯ ವಕೀಲರಾದ ಮನೋರಾಜ್ ರಾಜೀವ್ ಮತ್ತಿತರರು ಉಪಸ್ಥಿತರಿದ್ದರು.
ಹೈಕೋರ್ಟ್ ಪೀಠ ಹೋರಾಟ ಸಮಿತಿ ಸಂಚಾಲಕ ಮತ್ತು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.