ಡಿಸಿ ಮನ್ನಾ ಭೂಮಿ: ನ್ಯೂನತೆ ಸರಿಪಡಿಸಿ ಮಂಜೂರಾತಿ

ಡಿಸಿ ಮನ್ನಾ ಭೂಮಿ: ನ್ಯೂನತೆ ಸರಿಪಡಿಸಿ ಮಂಜೂರಾತಿ

ಮಂಗಳೂರು; ಡಿಸಿ ಮನ್ನಾ ಭೂಮಿ ಸಮನ್ವಯ ಸಮಿತಿಯಿಂದ ಕಂದಾಯ ಸಚಿವರ ಜೊತೆ ಸಮಾಲೋಚನೆ ನಡೆಸಲಾಗಿದ್ದು, ನ್ಯೂನತೆಗಳನ್ನು ಸರಿಪಡಿಸಿ ಭೂ ಮಂಜೂರಾತಿಗೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಸಮನ್ವಯ ಸಮಿತಿಯ ಪ್ರಧಾನ ಸಂಚಾಲಕ ಅಶೋಕ್ ಕೊಂಚಾಡಿ ತಿಳಿಸಿದರು.

ಅವರು ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಂಗಳೂರಿನಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಡಿಸಿ ಮನ್ನಾ ಭೂಮಿ ಹಂಚಿಕೆ ಬಗ್ಗೆ ಯಾವುದೇ ಪ್ರಸ್ತಾಪ ಮಾಡದೇ ಇರುವ ಬಗ್ಗೆ ದಲಿತ ಸಂಘಟನೆಗಳು ಅಸಮಾಧಾನ, ಆಕ್ರೋಶ ವ್ಯಕ್ತಪಡಿಸಿ ಸರ್ಕಾರದ ವಿರುದ್ಧ ಹೋರಾಟ ಕೈಗೊಳ್ಳುವ ನಿರ್ಧಾರ ಕೈಗೊಂಡಿರುವುದು ಕಾಂಗ್ರೆಸ್ ವಲಯದಲ್ಲಿ ಚರ್ಚೆ ನಡೆದು ದಲಿತ ಮುಖಂಡರನ್ನು ಸಂಪರ್ಕಿಸಿದ್ದರು. ಅದರಂತೆ ಬೆಂಗಳೂರಿನಲ್ಲಿ ರಾಜ್ಯ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರನ್ನು ಸಮನ್ವಯ ಸಮಿತಿ ಮುಖಂಡರು ಭೇಟಿ ಮಾಡಲು ವ್ಯವಸ್ಥೆ ಮಾಡಿದಂತೆ ಮುಖಂಡರು ಸಚಿವರನ್ನು ಭೇಟಿ ಮಾಡಿದ್ದು, ಒಂದು ಗಂಟೆಯ ಕಾಲ ಸುದೀರ್ಘ ಚರ್ಚೆ ನಡೆಸಲಾಗಿದೆ. ಸಚಿವರು ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿ ಅವರೊಂದಿಗೆ ದೂರವಾಣಿ ಕರೆ ಮಾಡಿ ಮಾತನಾಡಿ ಮಾಹಿತಿ ಪಡೆದು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅವರಿಗೆ ಕೂಡಲೇ ಪತ್ರ ಬರೆದು ಡಿಸಿ ಮನ್ನಾ ಭೂಮಿ ವರದಿ ತರಿಸಿಕೊಳ್ಳುವುದು, ಅತೀ ಶೀಘ್ರದಲ್ಲಿ ಮಂಗಳೂರಿನಲ್ಲಿ ಕಂದಾಯ ಸಚಿವರ ನೇತೃತ್ವದಲ್ಲಿ ದ.ಕ., ಉಡುಪಿ ಜಿಲ್ಲೆಗಳ ಕಂದಾಯ ಅಧಿಕಾರಿಗಳ ಸಭೆ ಕರೆಯಲಾಗುವುದು, ಕಾನೂನಿನ ತೊಡಕುಗಳನ್ನು ಸರಿಪಡಿಸಲು ಸಚಿವ ಸಂಪುಟದಲ್ಲಿ ಇಟ್ಟು ಅನುಮತಿ ಪಡೆಯಲಾಗುವುದು. ಮಂಗಳೂರಿನಲ್ಲಿ ಭೂ ರಹಿತ ಅರ್ಹ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ನೀಡುವುದಾಗಿ ಡಾ.ಜಿ.ಪರಮೇಶ್ವರ್ ಭರವಸೆ ನೀಡಿದ್ದಾರೆ ಎಂದರು.

ಸಚಿವರು ಭರವಸೆ ನೀಡಿದಂತೆ ಒಂದು ತಿಂಗಳು ಕಾಯುತ್ತೇವೆ. ಆ ಸಮಯದಲ್ಲಿ ಬೇಡಿಕೆ ಈಡೇರದೇ ಇದ್ದಲ್ಲಿ ಬಳಿಕ ಸಭೆ ಸೇರಿ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಎಸ್.ಪಿ.ಆನಂದ್ ಮಾತನಾಡಿ, ಜ್ಯೋತಿ ಪರಿಸರದಲ್ಲಿ ಅಂಬೇಡ್ಕರ್ ವೃತ್ತ ನಿರ್ಮಿಸಲು ೨ ವರ್ಷಗಳ ಹಿಂದೆ ಶಿಲಾನ್ಯಾಸ ನಡೆಸಿದರೂ ಕಾಮಗಾರಿ ನಡೆದಿಲ್ಲ. ಆದ್ದರಿಂದ ಕೂಡಲೇ ಅಂಬೇಡ್ಕರ್ ವೃತ್ತ ನಿರ್ಮಿಸಬೇಕು ಎಂದು ಆಗ್ರಹಿಸಿದರು.

ಪ್ರಮುಖರಾದ ರಮೇಶ್ ಕೋಟ್ಯಾನ್, ಗಿರೀಶ್ ಕುಮಾರ್ ಯು.ಕೆ., ಚಂದ್ರಕುಮಾರ್, ಸರೋಜಿನಿ ಬಂಟ್ವಾಳ, ಕೃಷ್ಣಾನಂದ ಇದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article