ಪೋಷ್ ಕಾಯ್ದೆ ಪರಿಣಾಮಕಾರಿ ಅನುಷ್ಠಾನಕ್ಕೆ ಜಾಗೃತಿ ಅಗತ್ಯ: ಆಳ್ವಾಸ್‌ನಲ್ಲಿ ಸಮಾಲೋಚನಾ ಕೂಟ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಪ.ಪೂ ಕಾಲೇಜಿನ ಪ್ರಾಂಶುಪಾಲ ಮೊಹಮ್ಮದ್ ಸದಾಕತ್ ಮಾತನಾಡಿ, ಸಂಸ್ಥೆಯಲ್ಲಿ ಪ್ರತಿಯೊಬ್ಬರೂ ಪರಸ್ಪರ ಗೌರವ ಹಾಗೂ ಜವಾಬ್ದಾರಿಯಿಂದ ನಡೆದುಕೊಳ್ಳುವ ವಾತಾವರಣ ನಿರ್ಮಾಣವಾಗಬೇಕು ಎಂದರು. ಶಿಕ್ಷಕರು ವಿದ್ಯಾರ್ಥಿಗಳ ಮನಸ್ಥಿತಿ ಹಾಗೂ ಅವರ ಅಗತ್ಯಗಳನ್ನು ಅರ್ಥಮಾಡಿಕೊಂಡು ಸೂಕ್ತ ಮಾರ್ಗದರ್ಶನ ನೀಡುವುದು ಮುಖ್ಯ. ಶಿಕ್ಷಣದ ಉದ್ದೇಶ ವಿದ್ಯಾರ್ಥಿಗಳನ್ನು ಅಜ್ಞಾನದ ಕತ್ತಲೆಯಿಂದ ಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುವುದಾಗಿದ್ದು, ಈ ಪ್ರಕ್ರಿಯೆಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿ ಆಳ್ವಾಸ್ ಸಮಾಜಕರ‍್ಯ ವಿಭಾಗದ ಪ್ರಾಧ್ಯಪಕಿ ಡಾ ಸಪ್ನಾ ಪೋಷ್ ಕಾಯ್ದೆಯ ಉದ್ದೇಶ, ವ್ಯಾಪ್ತಿ ಹಾಗೂ ಮಹಿಳೆಯರ ಸುರಕ್ಷತೆಯ ಕುರಿತಂತೆ ವಿವರಿಸಿದರು. ಮಹಿಳೆಯರೊಂದಿಗೆ ಅಸಭ್ಯವಾಗಿ ಮಾತನಾಡುವುದು, ಅನಗತ್ಯ ದೈಹಿಕ ಸ್ಪರ್ಶ, ಅಸಮರ್ಪಕ ಸನ್ನೆ ಅಥವಾ ಅಸಹಜ ಪರಿಸ್ಥಿತಿಯನ್ನು ಸೃಷ್ಟಿಸುವ ವರ್ತನೆ ಸೇರಿದಂತೆ ವಿವಿಧ ರೀತಿಯ ಅನಪೇಕ್ಷಿತ ನಡವಳಿಕೆಗಳು ಮಹಿಳೆಯರಿಗೆ ಕಿರುಕುಳದ ಅನುಭವವನ್ನು ಉಂಟುಮಾಡಬಹುದು ಎಂದರು.
ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಬಳಕೆಯ ಸಂದರ್ಭದಲ್ಲಿಯೂ ಮಹಿಳೆಯರ ಗೌಪ್ಯತೆ, ಘನತೆ ಮತ್ತು ವೈಯಕ್ತಿಕ ಮಿತಿಗಳನ್ನು ಗೌರವಿಸುವ ಅಗತ್ಯವನ್ನು ಅವರು ಒತ್ತಿಹೇಳಿದರು.
ಆಳ್ವಾಸ್ ಸಮಾಜಕಾಯ೯ ವಿಭಾಗದ ಮುಖ್ಯಸ್ಥೆ ಡಾ. ಮಧುಮಾಲಾ ಲೈಂಗಿಕ ಕಿರುಕುಳದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಆಯಾಮಗಳ ಕುರಿತು ಮಾತನಾಡಿದರು.
ಆಳ್ವಾಸ್ ಕಾನೂನು ಕಾಲೇಜಿನ ಪ್ರಾಚರ‍್ಯೆ ಡಾ. ರಶ್ಮಿ ಶೆಟ್ಟಿ, ಬೆಳಕು ಆಪ್ತ ಸಮಲೋಚನಾ ಕೇಂದ್ರದ ಮುಖ್ಯ ಆಪ್ತ ಸಮಲೋಚಕಿ ರೆನಿಟಾ ಡಿಸೋಜಾ, ಆಂತರಿಕ ಸಮಿತಿಯ ಸಂಯೋಜಕಿ ಡಾ ಸುಲತಾ ಶೆಟ್ಟಿ ಉಪಸ್ಥಿತರಿದ್ದರು.
ಉಪನ್ಯಾಸಕಿ ರಮಿತಾ ಶೆಟ್ಟಿ ಕಾರ‍್ಯಕ್ರಮ ನಿರೂಪಿಸಿದರು.