ಅ.21 ರಂದು ‘ಪುತ್ತೂರು ದಸರಾ’ ಅದ್ದೂರಿ ಶೋಭಾಯಾತ್ರೆ: ಕೇರಳ-ಕರ್ನಾಟಕದ ಕಲಾತಂಡಗಳ ಆಕರ್ಷಣೆ
ಪುತ್ತೂರು: ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದ ವತಿಯಿಂದ ನಡೆಯುತ್ತಿರುವ ಪುತ್ತೂರು ದಸರಾ ಉತ್ಸವದಲ್ಲಿ ಅ. 17ರಂದು ಶ್ರೀ ಶಾರದಾ ಮಾತೆಯ ಪ್ರತಿಷ್ಠೆ ನಡೆಯಲಿದ್ದು, ಅ. 21ರಂದು ಸಂಜೆ 5.30ರಿಂದ ಕೇರಳ-ಕರ್ನಾಟಕದ ವಿವಿಧ ಕಲಾ ತಂಡಗಳೊಂದಿಗೆ ಅದ್ದೂರಿಯ ದಸರಾ ಶೋಭಾಯಾತ್ರೆ ನಡೆಯಲಿದೆ ಎಂದು ಮಂದಿರದ ಅಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು ಹೇಳಿದರು.
ಅವರು ಗುರುವಾರ ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಮಂದಿರದಲ್ಲಿ ಈಗಾಗಲೇ ನವರಾತ್ರಿ ಉತ್ಸವ ಆರಂಭಗೊಂಡು ಪ್ರತಿನಿತ್ಯವೂ ಧಾರ್ಮಿಕ ವಿಧಿ ನಡೆಯುತ್ತಿದ್ದು, ಅ. 17ರ ಬಳಿಕ ನಿತ್ಯ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಅ. 18ರಂದು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಸಾಮೂಹಿಕ ಚಂಡಿಕಾ ಹೋಮ ನಡೆಯುತ್ತದೆ.
ಅ. 21ರಂದು ಸಂಜೆ 5.30ಕ್ಕೆ ಬೊಳುವಾರು ವೃತ್ತದಲ್ಲಿ ದಸರಾ ಶೋಭಾಯಾತ್ರೆ ಆರಂಭಗೊಳ್ಳಲಿದ್ದು, ಉದ್ಯಮಿ ಸದಾಶಿವ ಶೆಟ್ಟಿ ಕೂಳೂರು ಕನ್ಯಾನ ಧ್ವಜಾರೋಹಣ ನೆರವೇರಿಸಲಿದ್ದಾರೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹಾಗೂ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಪುಷ್ಪಾರ್ಚನೆ ಮಾಡಿ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ರಥಾರತಿ ನೆರವೇರಿಸಲಿದ್ದಾರೆ. ವಿವಿಧ ಕಲಾತಂಡಗಳ ಜತೆಗೆ ಪುಟಾಣಿ ಶಾರದೆಯರು, 1 ಸಾವಿರಕ್ಕೂ ಅಧಿಕ ಕುಣಿತ ಭಜನಾಪಟುಗಳು ಪಾಲ್ಗೊಳ್ಳಲಿದ್ದಾರೆ. ಬೊಳುವಾರಿನಿಂದ ದರ್ಬೆವರೆಗೆ 5 ಕಡೆಗಳಲ್ಲಿ ಕಲಾ ತಂಡಗಳು ತಮ್ಮ ವಿಶೇಷ ಪ್ರದರ್ಶನವನ್ನು ನೀಡಲಿದ್ದು, ಪೊಲೀಸ್ ಇಲಾಖೆಯ ನಿರ್ದೇಶನದಂತೆ ಶೋಭಾಯಾತ್ರೆಯನ್ನು ನಡೆಸಲಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶೋಭಾಯಾತ್ರೆಯ ಸಂಚಾಲಕರಾದ ಕೃಷ್ಣ ಎಂ.ಅಳಿಕೆ, ನವೀನ್ ಕುಲಾಲ್ ಪುತ್ತೂರು, ಪ್ರಧಾನ ಕಾರ್ಯದರ್ಶಿ ಜಯಂತ್ ಉರ್ಲಾಂಡಿ, ಕೋಶಾಧಿಕಾರಿ ವಸಂತ್ ಕುಮಾರ್ ಉಪಸ್ಥಿತರಿದ್ದರು.