ಪುತ್ತೂರು ದೇವಳದಲ್ಲಿ ರಾಜಕೀಯ ಹಸ್ತಕ್ಷೇಪ ಸಲ್ಲದು, ವ್ಯವಸ್ಥಾಪನಾ ಸಮಿತಿಗೆ ಸ್ವತಂತ್ರ ಕಾರ್ಯನಿರ್ವಹಣೆಗೆ ಅವಕಾಶ: ದಿನೇಶ್ ಕುಮಾರ್ ಜೈನ್ ಆಗ್ರಹ

ಪುತ್ತೂರು ದೇವಳದಲ್ಲಿ ರಾಜಕೀಯ ಹಸ್ತಕ್ಷೇಪ ಸಲ್ಲದು, ವ್ಯವಸ್ಥಾಪನಾ ಸಮಿತಿಗೆ ಸ್ವತಂತ್ರ ಕಾರ್ಯನಿರ್ವಹಣೆಗೆ ಅವಕಾಶ: ದಿನೇಶ್ ಕುಮಾರ್ ಜೈನ್ ಆಗ್ರಹ

ಪುತ್ತೂರು: ಪುತ್ತೂರು ಮಹಾಲಿಂಗೇಶ್ವರದ ದೇವಳದ ಜೀರ್ಣೋದ್ಧಾರ ಸಮಿತಿ ಎಲ್ಲರನ್ನೂ ಸೇರಿಸಿಕೊಂಡು ರಚನೆಯಾಗಬೇಕು. ಧಾರ್ಮಿಕ ಚೌಕಟ್ಟು ಮೀರದೆ ಅಭಿವೃದ್ಧಿ ಕಾರ್ಯಗಳನ್ನು ನಡೆಸಬೇಕು. ವ್ಯವಸ್ಥಾಪನಾ ಸಮಿತಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕು. ದೇವಳದ ಅಭಿವೃದ್ಧಿಯಲ್ಲಿ ಶಾಸಕರು ರಾಜಕೀಯ ಹಸ್ತಕ್ಷೇಪ ನಡೆಸುವುದನ್ನು ಬಿಡಬೇಕು ಎಂದು ದಿನೇಶ್ ಕುಮಾರ್ ಜೈನ್ ಆಗ್ರಹಿಸಿದರು.

ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪುತ್ತೂರಿನ ಹಿಂದಿನ ಯಾವುದೇ ಶಾಸಕರುಗಳು ಕೂಡ ದೇವಸ್ಥಾನದ ಕಚೇರಿಯಲ್ಲಿ ಕೂತು ಆಡಳಿತ ವ್ಯವಸ್ಥೆಗೆ ಹಸ್ತಕ್ಷೇಪ ಮಾಡಿಲ್ಲ. ಅದಕ್ಕೆ ಧಾರ್ಮಿಕ ದತ್ತಿ ಇಲಾಖೆಯ ಕಾನೂನಿನಲ್ಲಿ ಅವಕಾಶವೂ ಇಲ್ಲ. ದೇವಸ್ಥಾನದ ಗೊಂದಲಗಳ ಕುರಿತು ಪ್ರಶ್ನೆ ಮಾಡಿದರೆ ಬಿಜೆಪಿ ಆರೋಪ ಮಾಡುತ್ತಿದೆ ಎಂದು ಹೇಳುತ್ತಿದ್ದಾರೆ. ಆದರೆ ನಾವ್ಯಾರೂ ಬಿಜೆಪಿ ಪದಾಧಿಕಾರಿಗಳಲ್ಲ. ದೇವರ ಜಾಗವನ್ನು ಒಳಗೆ ಹಾಕಿದವರೂ ಅಲ್ಲ. ನಾವು ಅಭಿವೃದ್ಧಿ ಪರವಾಗಿ ಬೆಂಬಲ ಕೊಟ್ಟಿದ್ದೇವೆ. ಆದರೆ ದೇವಸ್ಥಾನದಲ್ಲಿ ರಾಜಕೀಯ ಮಾಡಿದರೆ ಸುಮ್ಮನೆ ಕುಳಿತುಕೊಳ್ಳುವ ಪ್ರಶ್ನೆ ಇಲ್ಲ ಎಂದು ಅವರು ಹೇಳಿದರು. 

ದೇವಸ್ಥಾನದ ಹೊರಾಂಗಣದಲ್ಲಿ ನಿರ್ಮಿಸಿದ 5 ಕಟ್ಟೆಗಳ ಕುರಿತು ಮಾಹಿತಿ ಹಕ್ಕಿನಲ್ಲಿ ಕೇಳಿದರೆ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗಳು ಮಾಹಿತಿ ಇಲ್ಲ ಎಂಬ ಉತ್ತರ ನೀಡುತ್ತಾರೆ, ಆದರೆ ಕಟ್ಟೆಗಳಿಗೆ ಸಂಬಂಧಿಸಿ ದಾನಿಗಳಿಂದ ದೇಣಿಗೆ ಸಂಗ್ರಹಿಸಿದ ರಶೀದಿ ಇದೆ. 5 ಮಂದಿ ದಾನಿಗಳಿಂದ 25 ಲಕ್ಷ ರೂ. ದೇಣಿಗೆ ಪಡೆದಿದ್ದೇವೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಹೇಳಿಕೆ ನೀಡುತ್ತಾರೆ. ಇದರ ಕುರಿತು ಇಒ ಅವರಲ್ಲಿ ಮಾಹಿತಿ ಇಲ್ಲದೇ ಇದ್ದರೆ 1.25 ಕೋ.ರೂ.ಹಣ ಎಲ್ಲಿಗೆ ಹೋಗಿದೆ ಎಂಬುದು ನಮ್ಮ ಪ್ರಶ್ನೆಯಾಗಿದೆ.

ಹಿಂದೆ ಜೀರ್ಣೋದ್ಧಾರ ಸಮಿತಿ ರಚನೆ ಮಾಡುವ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳನ್ನು ಸೇರಿಕೊಂಡು ಯಾವುದೇ ರಾಜಕೀಯ ಬೇಧವಿಲ್ಲದೆ ಎಲ್ಲರನ್ನೂ ಒಳಗೊಂಡು ಸಮಿತಿ ರಚನೆಯಾಗಿತ್ತು. ಆದರೆ ಈಗ ಏಕಪಕ್ಷೀಯವಾಗಿ ಸಮಿತಿ ರಚನೆಯಾಗಿದ್ದು, ಇದು ರಾಜಕೀಯದ ಉದ್ದೇಶದಿಂದ ಮಾಡಿದ ಸಮಿತಿಯಾಗಿದೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಹರಿಪ್ರಸಾದ್ ಶೆಟ್ಟಿ ನೆಲ್ಲಿಕಟ್ಟೆ, ಅನಿಲ್ ಕರ್ಣನೂಜಿ, ಬಾಲಚಂದ್ರ ಸೊರಕೆ, ಗೋಪಾಲ ಎಂ.ಆರ್. ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article