ಮುಂಡಾಜೆ ಕೊಂಬಿನಡ್ಕದಲ್ಲಿ ಒಂಟಿ ಸಲಗದ ದಾಂಧಲೆ
ಮುಂಡಾಜೆಯ ಸದಾಶಿವ ಮಲೆಕುಡಿಯ ಅವರ ಮನೆ ಸಮೀಪದವರೆಗೂ ಬಂದ ಒಂಟಿ ಸಲಗ, ಅವರ ತೋಟಕ್ಕೆ ನುಗ್ಗಿ 10ಕ್ಕೂ ಅಧಿಕ ಅಡಕೆ ಮರಗಳು, ಮೂರು ತೆಂಗಿನ ಮರಗಳು ಹಾಗೂ ಬಾಳೆ ಕೃಷಿಯನ್ನು ನಾಶಪಡಿಸಿದೆ. ರಾತ್ರಿ ವೇಳೆ ಏಕಾಏಕಿ ಮನೆಯ ಸಮೀಪಕ್ಕೆ ಆನೆ ಬಂದಿರುವುದರಿಂದ ಮನೆಯವರು ಆತಂಕಕ್ಕೊಳಗಾಗಿದ್ದಾರೆ.
ಮನೆಯ ಅಂಗಳದ ಸಮೀಪದವರೆಗೂ ಆನೆ ಬಂದಿರುವುದನ್ನು ಗಮನಿಸಿದ ಮನೆಯವರು ತಕ್ಷಣ ಪರಿಸರದ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಉಮೇಶ, ಜಗದೀಶ ನಾಯ್ಕ, ಯೋಗೀಶ್ ನಾಯ್ಕ, ಜನಾರ್ದನ ಮೊದಲಾದವರು ಸ್ಥಳಕ್ಕೆ ಧಾವಿಸಿದ್ದಾರೆ. ಪಟಾಕಿ ಸಿಡಿಸಿ ಆನೆಯನ್ನು ಅಲ್ಲಿಂದ ಓಡಿಸುವ ಪ್ರಯತ್ನ ನಡೆಸಿದ್ದು, ಅಂತಿಮವಾಗಿ ಸಲಗವನ್ನು ಸ್ಥಳದಿಂದ ದೂರ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮನೆ ಸಮೀಪವೇ ಕಾಡಾನೆ ಆತಂಕ:
ಒಂಟಿ ಸಲಗ ಜನವಸತಿ ಹಾಗೂ ಹೆದ್ದಾರಿ ಪ್ರದೇಶದವರೆಗೆ ಬಂದು ಕೃಷಿಗೆ ಹಾನಿ ಉಂಟುಮಾಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ರೈತರಿಗೆ ಕಾಡಾನೆಗಳ ಹಾವಳಿ ಮತ್ತಷ್ಟು ಸಂಕಷ್ಟ ಉಂಟುಮಾಡಿದೆ. ತೋಟಗಳಿಗೆ ನುಗ್ಗಿ ಬೆಳೆಗಳನ್ನು ನಾಶಪಡಿಸುವುದರ ಜತೆಗೆ, ಮನೆಗಳ ಸಮೀಪದವರೆಗೂ ಆನೆಗಳು ಬರುತ್ತಿರುವುದು ಜನರ ಸುರಕ್ಷತೆಯ ಬಗ್ಗೆ ಕಳವಳಕ್ಕೆ ಕಾರಣವಾಗಿದೆ. ರಾತ್ರಿ ವೇಳೆ ಆನೆಗಳ ಸಂಚಾರ ಹೆಚ್ಚಾದರೆ ಮನೆಯಿಂದ ಹೊರಬರಲು ಕೂಡ ಸ್ಥಳೀಯರು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.