ಮಕ್ಕಳ ಗಮಕ ಸಮ್ಮೇಳನ ನಡೆಯಲಿ: ಜಿ. ದಕ್ಷಿಣಾಮೂರ್ತಿ
ಅವರು ಅ.25 ರಂದು ಉಜಿರೆ ಎಸ್‌ಡಿಎಂ ಸೆಕೆಂಡರಿ ಶಾಲೆಯ ಕೀರ್ತಿಶೇಷ ಮಂಜಯ್ಯ ಹೆಗ್ಗಡೆ ಸಭಾಂಗಣದ ವಿಜಯ ರಾಘವ ವೇದಿಕೆಯಲ್ಲಿ ನಡೆದ ಜಿಲ್ಲಾ 12ನೇ ಗಮಕ ಸಮ್ಮೇಳನದ 2ನೇ ದಿನದ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದರು.
ಗಮಕದಲ್ಲಿ ಇತಿಹಾಸ, ಭೂಗೋಳ, ಪರಿಸರ ಪ್ರೇಮ, ಧರ್ಮ ಶ್ರದ್ಧೆ ಎಲ್ಲವೂ ಇದೆ. ಧರ್ಮ ಶ್ರದ್ಧೆ ನಶಿಸಿಹೋಗುತ್ತಿರುವ ಸಂದರ್ಭದಲ್ಲಿ ಮಕ್ಕಳಿಗೆ ಗಮಕ ಸಮ್ಮೇಳನ ನಡೆಸುವುದರಿಂದ ಅವರಿಗೆ ಅವಕಾಶ ದೊರೆತು, ಅವರಲ್ಲಿರುವ ಸುಪ್ತ ಪ್ರತಿಭೆ ಬೆಳಕಿಗೆ ಬರಲು ಸಾಧ್ಯ. ಗಮಕದಿಂದ ಮೌಲ್ಯಗಳು, ಜೀವನ ಶ್ರದ್ಧೆ, ವ್ಯಕ್ತಿ ಚಿತ್ರ, ಪುರಾಣ ಪ್ರಸಂಗ, ನಂಬಿಕೆ, ಕಾವ್ಯ ಕೃಷಿ, ಭಾಷಾ ಪ್ರಯೋಗ, ಅಲಂಕಾರ, ವ್ಯಾಕರಣ, ಸಂಗೀತದ ಪರಿಚಯವಾಗುತ್ತದೆ. ನವರಸ ಪ್ರಜ್ಞೆ, ರಾಗ ಪ್ರಯೋಗದ ಸಾಮರ್ಥ್ಯದಿಂದ ಕಾವ್ಯ ವಾಚನ, ಗಮಕ ಪ್ರಸ್ತುತಿಯಾಗುತ್ತದೆ. ಯಾವ ಕಲೆಯೂ ತನ್ನಿಂದ ತಾನಾಗಿ ಬೆಳೆಯುವುದಿಲ್ಲ. ಗಮಕ ಸಮ್ಮೇಳನ ಹೃದಯ, ಮನಸ್ಸು, ಬುದ್ಧಿಗೆ ಪ್ರಚೋದನೆ ನೀಡುತ್ತದೆ. ಕಾವ್ಯಾಭ್ಯಾಸಕ್ಕೆ ಯುವ ಪೀಳಿಗೆ ಮನಸ್ಸು ಮಾಡಬೇಕು. ಗಮಕ ಕಲೆಗೆ ಹಿರಿಯರ ಕೊಡುಗೆ ಸ್ಮರಣೀಯವಾದುದು ಎಂದರು.
ವಿ.ಪ. ಮಾಜಿ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿ, ಸಣ್ಣ ವಯಸ್ಸಿನಲ್ಲಿ ಸಾಧನೆ ಮಾಡಿದರೆ ಎತ್ತರಕ್ಕೆ ಬೆಳೆಯಬಹುದು. ಕಲೆ ಎಂಬುದು ಕೌಶಲ್ಯ. ನಿರಂತರ ಪ್ರಯತ್ನದಿಂದ ಸ್ವಂತ ಆನಂದಕ್ಕೆ ಸಾಧನೆ ಮಾಡಲು ಸಾಧ್ಯ. ಕಲಾ ಪ್ರಕಾರಗಳಲ್ಲಿ ನಂಬಿಕೆ, ವಿಶ್ವಾಸವಿರಿಸಿದರೆ ಮೌಲ್ಯಗಳನ್ನು ಉಳಿಸಿ, ಬೆಳೆಸಿಕೊಳ್ಳಬಹುದು ಎಂದು ಹೇಳಿದರು.
ಮುಖ್ಯ ಅತಿಥಿ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಗಮಕಕ್ಕೆ ಅವಕಾಶ ಕಲ್ಪಿಸಿಕೊಡುತ್ತಿದ್ದು ಮುಂದೆ ಶಾಲೆ, ಕಾಲೇಜುಗಳಲ್ಲಿ ಗಮಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.
ಸಮ್ಮೇಳನ ಸರ್ವಾಧ್ಯಕ್ಷ ಜಯರಾಮ ಕುದ್ರೆತ್ತಾಯ ಗಮಕ ಸಮ್ಮೇಳನ ಅಚ್ಚುಕಟ್ಟಾಗಿ ಯಶಸ್ವಿಯಾಗಿ ನಡೆದು ಹೊಸ ಪ್ರಯೋಗ, ಸಾಧ್ಯತೆಗಳಿಗೆ ವೇದಿಕೆಯಾಗಿ ಮುಂದಿನ ಪೀಳಿಗೆಗೆ ಮಾದರಿಯಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗಮಕ ಪರಿಷತ್ ಅಧ್ಯಕ್ಷ ಪ್ರೊ. ಮಧೂರು ಮೋಹನ ಕಲ್ಲೂರಾಯ ಮಾತನಾಡಿ, ಸಮ್ಮೇಳನದಲ್ಲಿ ಹೊಸ ರೀತಿಯ ಕಲ್ಪನೆಯ ಸಂಯೋಜನೆ, ಪ್ರಯೋಗ ಯಶಸ್ವಿಯಾಗಿ ಮೂಡಿಬಂದಿದ್ದು, ಮುಂದಿನ ಜಿಲ್ಲಾ 13ನೇ ಗಮಕ ಸಮ್ಮೇಳನ ಮುಂದಿನ ವರ್ಷ ಮೂಡಬಿದ್ರಿಯಲ್ಲಿ ನಡೆಯಲಿದೆ. ಶಾಲೆಗಳಲ್ಲಿ ವರ್ಷಕ್ಕೊಂದು ಕಾರ್ಯಕ್ರಮವನ್ನಾದರೂ ನಡೆಸಿ ಗಮಕ ಕಲೆಗೆ ಪ್ರೋತ್ಸಾಹ ನೀಡಿ ಬೆಳೆಸಬೇಕು. ಗಮಕಕ್ಕೆ ಜಿಲ್ಲೆಯಲ್ಲಿ ಶೋಚನೀಯ ಪರಿಸ್ಥಿತಿ ಬರಬಾರದು. ಜಿಲ್ಲೆಯಲ್ಲಿ ಸಾಕಷ್ಟು ಗಮಕಿಗಳು, ವಿದ್ವಾಂಸರಿದ್ದಾರೆ. ಮನೆ ಮನೆಗಳಲ್ಲಿ ಕನಿಷ್ಠ ಒಂದು ಗಂಟೆಯ ಗಮಕ ಕಾರ್ಯಕ್ರಮವನ್ನಾದರೂ ನಡೆಸಿ ಕಲೆಯನ್ನು ಪ್ರೋತ್ಸಾಹಿಸಬೇಕು ಎಂದ ಅವರು ಭುಜಬಲಿ ಧರ್ಮಸ್ಥಳ ಶಾಲೆ, ಮನೆಗಳಲ್ಲಿ ಗಮಕ ಕಲೆಗೆ ಅವಕಾಶ ಕಲ್ಪಿಸಿಕೊಡಬೇಕು ಎಂದರು.
ಸಮ್ಮೇಳನ ಆಯೋಜಿಸಿದ ಗಮಕ ಕಲಾ ಪರಿಷತ್ ತಾಲೂಕು ಘಟಕಾಧ್ಯಕ್ಷ ರಾಮಕೃಷ್ಣ ಭಟ್ ಉಜಿರೆ ಅವರನ್ನು ಜಿಲ್ಲಾ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಿದರು. ಸಮ್ಮೇಳನ ಸಮಿತಿಯ ವಿವಿಧ ಸಂಚಾಲಕರನ್ನು ರಾಜ್ಯ ಕಾರ್ಯದರ್ಶಿ ಜಿ. ದಕ್ಷಿಣಾ ಮೂರ್ತಿ ಅವರು ಸಮಿತಿ ಪರವಾಗಿ ಗೌರವಿಸಿದರು.
ಎಸ್‌ಡಿಎಂ ಸೆಕೆಂಡರಿ ಶಾಲೆಯ ಮುಖ್ಯ ಶಿಕ್ಷಕಿ ವಿದ್ಯಾ ಕಿರಣ್ ಉಪಸ್ಥಿತರಿದ್ದರು. ಆರ್ಥಿಕ ಸಮಿತಿ ಸಂಚಾಲಕ ರವೀಂದ್ರ ಶೆಟ್ಟಿ ಸುರಭಿ ಸ್ವಾಗತಿಸಿ, ಸ್ಮರಣ ಸಂಚಿಕೆ ಸಮಿತಿಯ ಡಾ. ಶ್ರೀಧರ್ ಭಟ್ ಕಾರ್ಯಕ್ರಮ ನಿರೂಪಿಸಿದರು.