ಶುದ್ಧ ಸಂಗೀತ, ಸಾಹಿತ್ಯದ ಗಮಕ ಕಲೆಯನ್ನು ಉಳಿಸಿ, ಬೆಳೆಸಲು ಸರಕಾರದ ಪ್ರೋತ್ಸಾಹ ಅಗತ್ಯ: ಎಡನೀರು ಶ್ರೀ
ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು ‘ಗಮಕ ಜನಾರ್ದನ’ ಸ್ಮರಣ ಸಂಚಿಕೆಯನ್ನು ಸಾಂಕೇತಿಕವಾಗಿ ಅನಾವರಣಗೊಳಿಸಿ ಮಾತನಾಡಿ, ಅಳಿಯುತ್ತಿರುವ ಕನ್ನಡ ಭಾಷೆ, ಮುಚ್ಚುತ್ತಿರುವ ಕನ್ನಡ ಶಾಲೆಯ ಪರಿಸ್ಥಿತಿಯಲ್ಲಿ ಶಾಲೆಗಳಲ್ಲಿ ಪಾಠದ ಜತೆಗೆ ಯಕ್ಷಗಾನ, ತಾಳಮದ್ದಳೆ ನೃತ್ಯ, ಸಂಗೀತದಲ್ಲಿ ತೊಡಗಿಸಿಕೊಳ್ಳಲು ಹಿರಿಯರ ಪ್ರೋತ್ಸಾಹ ಬೇಕು ಎಂದರು.
ಸಂಪಾದಕ ಡಾ. ಶ್ರೀಧರ ಭಟ್ ಸ್ಮರಣ ಸಂಚಿಕೆ ಕುರಿತು ಪ್ರಸ್ತಾವಿಸಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಮುಳಿಯ ಶಂಕರ ಭಟ್ ಶುಭಾಶಂಸನೆಗೈದರು. ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಮೂಡಬಿದ್ರೆ ತಾಲೂಕು ಗಮಕ ಕಲಾ ಪರಿಷತ್ತಿನ ಗೌರವಾಧ್ಯಕ್ಷ ಶ್ರೀಪತಿ ಭಟ್ ಮೂಡಬಿದ್ರೆ, ಕಿನ್ನಿಗೋಳಿ ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ, ಉಜಿರೆ ಎಸ್‌ಡಿಎಂ ಸೆಕೆಂಡರಿ ಶಾಲೆಯ ಮುಖ್ಯ ಶಿಕ್ಷಕಿ ವಿದ್ಯಾ ಕಿರಣ್ ಉಪಸ್ಥಿತರಿದ್ದರು.
ಪಾವಂಜೆ ಹರಿದಾಸ ಲಕ್ಷ್ಮಿನಾರ್ಣಪ್ಪಯ್ಯ ಪ್ರಶಸ್ತಿ ಪ್ರದಾನ:
ಇದೇ ಸಂದರ್ಭದಲ್ಲಿ ಗಮಕ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ ಕೆ. ಸುರೇಶ್ ಕುದ್ರೆಂತಾಯ, ಪ್ರೊ. ವೇದವ್ಯಾಸ ರಾಮಕುಂಜ, ಹರಿದಾಸ ತೋನ್ಸೆ ಪುಷ್ಕಳ ಚಿ ಕುಮಾರ್, ಕೆಯ್ಯೂರು ನಾರಾಯಣ ಭಟ್, ಗಮಕಿ ಸುವರ್ಣ ಕುಮಾರಿ ಕೆ.ಆರ್., ಗಮಕಿ ಏ.ಡಿ ಸುರೇಶ್ ಇವರಿಗೆ ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಪ್ರಾಯೋಜಕತ್ವದಲ್ಲಿ ಪಾವಂಜೆ ಹರಿದಾಸ ಲಕ್ಷ್ಮಿನಾರ್ಣಪ್ಪಯ್ಯ ಪ್ರಶಸ್ತಿ ಪ್ರದಾನ ನಡೆಯಿತು. ಡಾ. ದಿವಾ ಕೊಕ್ಕಡ ಸಮ್ಮಾನಿತರು ಹಾಗೂ ರಾಜೇಶ್ವರಿ ಸಮ್ಮೇಳನ ಸರ್ವಾಧ್ಯಕ್ಷರನ್ನು ಪರಿಚಯಿಸಿದರು.
ಗಮಕ ಕಲಾ ಪರಿಷತ್ ಬೆಳ್ತಂಗಡಿ ತಾಲೂಕು ಘಟಕ ಅಧ್ಯಕ್ಷ ರಾಮಕೃಷ್ಣ ಭಟ್ ಉಜಿರೆ ಸ್ವಾಗತಿಸಿ, ಪ್ರಸ್ತಾವಿಸಿ, ಶಿಕ್ಷಕಿ ತ್ರಿವೇಣಿ ವಂದಿಸಿದರು. ಎಸ್‌ಡಿಎಂ ವಸತಿ ಪ.ಪೂ. ಕಾಲೇಜು ಪ್ರಾಂಶುಪಾಲ ಸುನಿಲ್ ಪಂಡಿತ್ ಕಾರ್ಯಕ್ರಮ ನಿರೂಪಿಸಿದರು. ಮೊದಲ ಗೋಷ್ಠಿ ಗಮಕ ವಾಚನ ವೈವಿಧ್ಯದಲ್ಲಿ ಗಮಕಿ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸಿ ಜಿಲ್ಲೆಯ ವಿವಿಧ ಗಮಕಿಗಳು ಗಮಕ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಸುರೇಶ ಎ.ಡಿ. ಮತ್ತು ಆಶಾ ಅಡೂರು ನಿರೂಪಿಸಿದರು.
ಪೂಜ್ಯ ಎಡನೀರು ಶ್ರೀಗಳವರನ್ನು ಪೂರ್ಣಕುಂಭ, ಬ್ಯಾಂಡ್ ಸೆಟ್‌ಗಳೊಂದಿಗೆ ಮಹಾದ್ವಾರದಿಂದ ಮೆರವಣಿಗೆಯಲ್ಲಿ ಬರಮಾಡಿಕೊಳ್ಳಲಾಯಿತು. ನಿವೃತ್ತ ಶಿಕ್ಷಕ ಪದ್ಮರಾಜ ಜೈನ್ ಸಂಗ್ರಹಿಸಿದ ಅಂಚೆ ಚೀಟಿ, ನಾಣ್ಯಗಳು, ಹಳೆಯ ಕರೆನ್ಸಿ ನೋಟುಗಳು, ಬೆಂಕಿ ಪೆಟ್ಟಿಗೆ ವಸ್ತು ಪ್ರದರ್ಶನವನ್ನು ಶ್ರೀಗಳವರು ಉದ್ಘಾಟಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು. ಎರಡು ದಿನಗಳ ಜಿಲ್ಲಾ ಗಮಕ ಸಮ್ಮೇಳನ ಭಾನುವಾರ ಅಪರಾಹ್ನ ಸಮಾರೋಪಗೊಳ್ಳಲಿದೆ.



