ಉಳ್ಳಾಲದ ಓವರ್‌ಬ್ರಿಡ್ಜ್ ಉಳ್ಳಾಲಬೈಲ್ ರಸ್ತೆ ಅಭಿವೃದ್ಧಿಗೆ 30 ಕೋ.ರೂ. ಮಂಜೂರು
ಅವರು ಸೋಮವಾರ ತೊಕ್ಕೊಟ್ಟು ಓವರ್ ಬ್ರಿಡ್ಜ್ನಿಂದ ಉಳ್ಳಾಲಬೈಲಿನವರೆಗೆ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ಗಳ ಜತೆಗೆ ಎರಡನೇ ಭೇಟಿ ನೀಡಿ ಉಳ್ಳಾಲಬೈಲ್‌ನಲ್ಲಿ ಮಾಧ್ಯಮದ ಜತೆಗೆ ಮಾತನಾಡಿದರು.
ಉಳ್ಳಾಲ ನಗರ ವೇಗವಾಗಿ ಬೆಳೆಯುತ್ತಿರುವ ಜನವಸತಿ ಪ್ರದೇಶವಾಗಿದ್ದು, ವಿವಿಧ ಊರುಗಳಿಂದ ಆಗಮಿಸಿರುವ ಜನರು ಇಲ್ಲಿ ವ್ಯಾಪಾರ ಹಾಗೂ ವಸತಿ ಉದ್ದೇಶದಿಂದ ನೆಲೆಸಿದ್ದಾರೆ. ಬಂಡಿಕೊಟ್ಯ ದೇವಸ್ಥಾನ, ಸೋಮೇಶ್ವರ ಬೀಚ್, ಸಂತ ಸೆಬಾಸ್ತಿಯನ್ ಚರ್ಚ್ ಹಾಗೂ ಉಳ್ಳಾಲ ದರ್ಗಾ ಸಹಿತ ಹಲವು ಧಾರ್ಮಿಕ ಮತ್ತು ಪ್ರವಾಸೋದ್ಯಮ ಕೇಂದ್ರಗಳಿರುವುದರಿಂದ ಈ ಭಾಗದಲ್ಲಿ ವಾಹನ ಸಂಚಾರವೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದಕ್ಕೆ ಅನುಗುಣವಾಗಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ. ಅಬ್ಬಕ್ಕ ವೃತ್ತದಿಂದ ಉಳ್ಳಾಲಬೈಲ್‌ವರೆಗೆ ರಸ್ತೆ ಅಗಲೀಕರಣ ಹಾಗೂ ಕಾಂಕ್ರೀಟಿಕರಣ ಮಾಡಲಾಗಿದ್ದು, ಓವರ್‌ಬ್ರಿಡ್ಜ್ ಭಾಗದಲ್ಲಿ ಕೆಳಭಾಗದಲ್ಲಿ ಮನೆಗಳಿರುವ ಕಾರಣ ಮಣ್ಣು ತುಂಬಿ ರಸ್ತೆ ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಶಾಶ್ವತ ಪರಿಹಾರದ ನಿಟ್ಟಿನಲ್ಲಿ ಎರಡೂ ಬದಿಗಳಲ್ಲಿ ಕಾಂಕ್ರೀಟಿಕರಣ ನಡೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಮುಂದಿನ ತಿಂಗಳಿಂದ ಕಾಮಗಾರಿ ಆರಂಭವಾಗಲಿದ್ದು, ಎರಡು ಹೊಸ ಬ್ರಿಡ್ಜ್ಗಳ ನಿರ್ಮಾಣಕ್ಕೂ ಯೋಜನೆ ರೂಪಿಸಲಾಗಿದೆ. ಕಾಮಗಾರಿ ಅವಧಿಯ ಮುಂದಿನ ಎರಡು-ಮೂರು ತಿಂಗಳಲ್ಲಿ ಎರಡು ಸರ್ವಿಸ್ ಲೇನ್‌ಗಳನ್ನು ನಿರ್ಮಿಸುವ ಉದ್ದೇಶವಿದೆ. ವಾಸುಕಿನಗರ ಹಾಗೂ ಒಳಪೇಟೆ ಮೂಲಕ ಓವರ್‌ಬ್ರಿಡ್ಜ್ ತಲುಪುವಂತೆ ಒಂದು ಬದಿಯಲ್ಲಿ ಹಾಗೂ ಮತ್ತೊಂದು ಬದಿಯಲ್ಲಿಯೂ ಸರ್ವಿಸ್ ಲೇನ್ ಕಲ್ಪಿಸಲಾಗುವುದು. ಕಾಮಗಾರಿಯ ಸಂದರ್ಭದಲ್ಲಿ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದರು.
ಉಳ್ಳಾಲದ ಜೆಟ್ಟಿ ರಸ್ತೆ, ಪ್ಯಾರೀಸ್ ರಸ್ತೆ ಅಭಿವೃದ್ಧಿಗೆ 13.15 ಕೋಟಿ ರೂ. ಅನುದಾನ ಮಂಜೂರು ಆಗಿದೆ. ಉಳ್ಳಾಲ ಜೆಟ್ಟಿ ರಸ್ತೆಯ ಅಭಿವೃದ್ಧಿಗೆ 4 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಧಾರ್ಮಿಕ ಪರಿಷತ್ ಸದಸ್ಯ ಸುರೇಶ್ ಭಟ್ನಗರ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್, ಪುರುಷೋತ್ತಮ ಶೆಟ್ಟಿ ಪಿಲಾರ್, ಮಮತಾ ಗಟ್ಟಿ, ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಸುರೇಖಾ ಚಂದ್ರಹಾಸ್, ಮುಡಾ ಮಾಜಿ ಅಧ್ಯಕ್ಷ ಸದಾಶಿವ ಉಳ್ಳಾಲ್, ಮನ್ಸೂರ್ ಮಂಚಿಲ, ಕೋಟೆಕಾರು ವಲಯ ಮಹಿಳಾ ಅಧ್ಯಕ್ಷೆ ತುಳಸಿ ಗಟ್ಟಿ, ಭಾಸ್ಕರ್ ತೊಕ್ಕೊಟ್ಟು, ಉಳ್ಳಾಲ ನಗರ ಕಾಂಗ್ರೆಸ್ ಅಧ್ಯಕ್ಷ ಮುಸ್ತಫಾ ಅಬ್ದುಲ್ಲಾ, ಅಯೂಬ್ ಮಂಚಿಲ, ಅಶ್ರಫ್ ಕೋಡಿ, ಬಾಝಿಲ್ ಡಿಸೋಜ, ಸುಹಾಸಿನಿ ಬಬ್ಬುಕಟ್ಟೆ, ಯು.ಬಿ. ಸಲೀಂ, ಸ್ವಪ್ನ ಹರೀಶ್, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ದಾಸ್ ಪ್ರಕಾಶ್, ಪ್ರೀತಮ್, ಗುತ್ತಿಗೆದಾರರಾದ ನಾಗೇಶ್, ಕೆ.ಕೆ. ನಾಸೀರ್, ಕಾವ್ಯಶ್ರೀ, ಝಿಯಾ ಮತ್ತಿತರರು ಉಪಸ್ಥಿತರಿದ್ದರು.