ದೈವಸ್ಥಾನದಲ್ಲಿ ಕಳವು
ಬಂಟ್ವಾಳ: ಬಿ.ಸಿ.ರೋಡಿಗೆ ಸಮೀಪದ ಅಗ್ರದಬೈಲುವಿನಲ್ಲಿರುವ ದೈವಸ್ಥಾನವೊಂದಕ್ಕೆ ನುಗ್ಗಿದ ಕಳ್ಳರು ಚಿನ್ನ, ಬೆಳ್ಳಿ ಹಾಗೂ ಹಿತ್ತಾಳೆಯ ಆಭರಣಗಳ ಸಹಿತ ಸುಮಾರು 1.33 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಕಳವುಗೈದ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.
ಅಗ್ರದಬೈಲಿನಲ್ಲಿರುವ ಕಲ್ಲುರ್ಟಿ- ಪಂಜುರ್ಲಿ, ಕೊರತಿ ಹಾಗೂ ಗುಳಿಗ ದೈವಸ್ಥಾನದಲ್ಲಿ ಕಳವು ನಡೆದಿದೆ. ನ.15ರಂದು ಬೆಳಿಗ್ಗೆ ದೈವಗಳಿಗೆ ಪೂಜೆಯಾದ ಬಳಿಕ ದೈವಸ್ಥಾನಕ್ಕೆ ಬೀಗ ಹಾಕಲಾಗಿತ್ತು. ನ.16ರಂದು ಸಂಕ್ರಮಣದ ಹಿನ್ನೆಲೆಯಲ್ಲಿ ಬೆಳಿಗ್ಗೆ 7.30ರ ವೇಳೆಗೆ ಸುಜಾತ ಎಂಬವರು ದೈವಸ್ಥಾನದ ಆವರಣಕ್ಕೆ ಬಂದಿದ್ದಾಗ ಈ ಕಳವು ನಡೆದಿರುವುದು ಗೊತ್ತಾಗಿದೆ.
ದೈವಸ್ಥಾನದ ಬಾಗಿಲಿನ ಕೊಂಡಿಯ ಸ್ಕ್ರೂಗಳನ್ನು ತೆಗೆದು ಒಳನುಗ್ಗಿದ್ದ ಕಳ್ಳರು, ಸುಮಾರು 300 ಗ್ರಾಂ ತೂಕದ ಬೆಳ್ಳಿಯ ತಲೆಪಟ್ಟಿ, ಚಿನ್ನದ ಕರಿಮಣಿ, ತಾಳಿ ಹಾಗೂ ಮೂಗುತಿ ಸೇರಿದಂತೆ 6.50 ಗ್ರಾಂ ಚಿನ್ನಾಭರಣ, ಬೆಳ್ಳಿಯ ತಂಬಿಗೆ, 14 ಹಿತ್ತಾಳೆಯ ಹೂವಿನ ವಿನ್ಯಾಸದ ಅಲಂಕಾರಗಳು, ಮೂರು ಹಿತ್ತಾಳೆಯ ತಂಬಿಗೆಗಳು, ಕಾಲುದೀಪ ಹಾಗೂ ಎರಡು ಸರಪಳಿಗಳನ್ನು ಕಳವುಗೈದು ಪರಾರಿಯಾಗಿದ್ದಾರೆ.
ಈ ಬಗ್ಗೆ ದೀಕ್ಷಿತ್ ಆಚಾರ್ಯ (18) ಅವರು ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.