ನೀವು ಯಾವುದೇ ಕೆಲಸವನ್ನು ಮಾಡಿದರೂ, ಅದನ್ನು ಪೂರ್ಣ ಏಕಾಗ್ರತೆಯಿಂದ ಮಾಡಿ: ಸ್ವಾಮಿ ಸರ್ವಪ್ರಿಯಾನಂದಜಿ
ಅವರು ಇಂದು ಮಂಗಳೂರು ರಾಮಕೃಷ್ಣ ಮಠದಲ್ಲಿ ನಡೆಯುತ್ತಿರುವ ಪ್ರಬೋಧ-26 ಉಪನ್ಯಾಸ ಮಾಲಿಕೆಯ ಮೊದಲನೇ ದಿನದ ಉಪನ್ಯಾಸಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಂತರ್ಜಾಲ ಹಾಗೂ ಸಾಮಾಜಿಕ ಜಾಲತಾಣಗಳು ಮಾನವನ ಗಮನವನ್ನು ಸೆಳೆಯುವ ಮೂಲಕ ಅದನ್ನೇ ಒಂದು ವ್ಯಾಪಾರಿಕ ವಸ್ತುವಾಗಿ ಬಳಸಿಕೊಳ್ಳುತ್ತಿವೆ. ನಿರಂತರವಾಗಿ ಬರುವ ಮೊಬೈಲ್ ಅಧಿಸೂಚನೆಗಳು, ಸಂದೇಶಗಳು ಹಾಗೂ ವಿವಿಧ ಡಿಜಿಟಲ್ ಆಕರ್ಷಣೆಗಳು ನಮ್ಮ ಏಕಾಗ್ರತೆಗೆ ಅಡ್ಡಿಯಾಗುತ್ತಿವೆ. ಕೆಲವರು ಆನ್‌ಲೈನ್ ಜೂಜಾಟದಂತಹ ಚಟುವಟಿಕೆಗಳಿಗೆ ದಾಸರಾಗುತ್ತಿದ್ದು, ಇಂತಹ ವ್ಯಸನಗಳು ನಿಧಾನವಾಗಿ ಮಾನಸಿಕ ಅಶಾಂತಿ ಮತ್ತು ಚಡಪಡಿಕೆಗೆ ಕಾರಣವಾಗುತ್ತವೆ ಎಂದರು.
ಸಾಮಾಜಿಕ ಜಾಲತಾಣದಿಂದ ದೂರವಿರಲು ಕ್ರೀಡೆಗಳಲ್ಲಿ ಭಾಗವಹಿಸುವುದು, ಸಂಗೀತ ಕಲಿಯುವುದು ಹಾಗೂ ಸಂಗೀತ ವಾದ್ಯಗಳನ್ನು ನುಡಿಸುವಂತಹ ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಏಕಾಗ್ರತೆಯನ್ನು ವೃದ್ಧಿಸಿಕೊಳ್ಳಬಹುದು. ಇಂತಹ ಚಟುವಟಿಕೆಗಳು ಮನಸ್ಸಿಗೆ ತರಬೇತಿ ನೀಡುವುದರ ಜೊತೆಗೆ ಗಮನವನ್ನು ಒಂದೆಡೆ ಕೇಂದ್ರೀಕರಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಅಪಾರ ಏಕಾಗ್ರತೆಯನ್ನು ಹೊಂದಿರುವ ವ್ಯಕ್ತಿಯು ತಾನು ತೊಡಗಿಸಿಕೊಂಡಿರುವ ಕಾರ್ಯದಲ್ಲಿ ಎಷ್ಟು ತನ್ಮಯನಾಗುತ್ತಾನೆಂದರೆ ಸುತ್ತಮುತ್ತಲಿನ ಪರಿಸರವನ್ನೇ ಮರೆತುಬಿಡುತ್ತಾನೆ ಎಂದು ಹೇಳಿದರು.
ಮಂಗಳೂರಿನ ಎಸ್.ಸಿ.ಎಸ್. ಆಸ್ಪತ್ರೆಯ ಚೇರ್ಮನ್ ಆಗಿರುವ ಡಾ. ಜೀವರಾಜ್ ಸೊರಕೆ, ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಜಿತಕಾಮಾನಂದ ಸ್ವಾಮೀಜಿ ಉಪಸ್ಥಿತರಿದ್ದರು.