‘ಋತುತಾರೆ’ ಯೋಜನೆ: ದ.ಕ. ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಆರಂಭಕ್ಕೆ ಸಿದ್ಧತೆ
ದ.ಕ. ಜಿಲ್ಲಾ ಆರೋಗ್ಯ ಇಲಾಖೆಯ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೩೫ ವರ್ಷ ಮೇಲ್ಪಟ್ಟ ಹೆಣ್ಣು ಮಕ್ಕಳಲ್ಲಿ ಋತುಬಂಧದ ಪೂರ್ವ ಮತ್ತು ನಂತರದಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯದಲ್ಲಿ ಅರುಪೇರಾಗುತ್ತದೆ. ಸಿಡುಕು, ಮೈಬಿಸಿ, ವಿಪರೀತ ಮೈಕೈನೋವು, ನಿದ್ದೆ ಬಾರದಿರುವುದು, ಕೆಲಸ ಮಾಡಲು ಆಸಕ್ತಿ ಇಲ್ಲದಿರುವುದು ಭಾವನಾತ್ಮ ತೊಳಲಾಟ ಮೊದಲಾದ ಸಮಸ್ಯೆಗಳ ಸಂದರ್ಭ ಉಚಿತವಾಗಿ ಸಮಾಲೋಚನೆ ಹಾಗೂ ಅಗತ್ಯ ಚಿಕಿತ್ಸೆಗಳನ್ನು ಒದಗಿಸುವ ನಿಟ್ಟಿನಲ್ಲಿ ದೇಶದಲ್ಲಿಯೇ ಪ್ರಥಮವಾಗಿ ಕರ್ನಾಟಕ ಆರೋಗ್ಯ ಇಲಾಖೆಯು ಈ ಋತುತಾರೆ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಪ್ರಾಯೋಗಿಕವಾಗಿ ದ.ಕ. ಜಿಲ್ಲೆಯಲ್ಲಿ ಈ ಯೋಜನೆಯನ್ನು ಡಿಸೆಂಬರ್ ಎರಡನೇ ವಾರದಲ್ಲಿ ಆರಂಭಿಸುವ ಸಾಧ್ಯತೆ ಇದ್ದು ಇದಕ್ಕಾಗಿ ಆಶಾ ಕಾರ್ಯಕರ್ತೆರಿಯರಿಗೆ ತರಬೇತಿ ನೀಡುವ ಕಾರ್ಯವನ್ನು ನಡೆಸಲಾಗುತ್ತದೆ. ತರಬೇತಿಯ ಬಳಿಕ ಆಶಾ ಕಾರ್ಯಕರ್ತೆಯರು ಸಮೀಕ್ಷೆ ನಡೆಸಿ ಅಗತ್ಯ ಇರುವವರಿಗೆ ಈ ಸಂಜೀವಿನಿ ಟೆಲಿ ಕನ್ಸೆಲ್ಟೆನ್ಸಿ ಮೂಲಕ ಸಮಾಲೋಚನೆಗೆ ಅವಕಾಶ ಒದಗಿಸಲಾಗುತ್ತದೆ. 100 ದಿನಗಳ ಅಭಿಯಾನದ ಮೂಲಕ ಈ ಋತುತಾರೆ ಯೋಜನೆಯ ವರದಿಯ ಆಧಾರದಲ್ಲಿ ಈ ಯೋಜನೆಯನ್ನು ಮುಂದಿನ ದಿನಗಳಲ್ಲಿ ಇಡೀ ರಾಜ್ಯಕ್ಕೆ ವಿಸ್ತರಿಸುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.
ಆರೋಗ್ಯ ಸಚಿವ ಯು.ಟಿ.ಖಾದರ್ ಅವರ ಅಧ್ಯಕ್ಷತೆಯಲ್ಲಿ ಯೋಜನೆ ದ.ಕ. ಜಿಲ್ಲೆಯಲ್ಲಿ ಆರಂಭಗೊಳ್ಳಲಿದ್ದು, ಆಶಾ ಕಾರ್ಯಕರ್ತರನ್ನು ಒಳಗೊಂಡು ಆರೋಗ್ಯ ಸಿಬ್ಬಂದಿಗೆ ತರಬೇತಿ ನೀಡಿದ ಬಳಿಕ ಕ್ರಿಯಾ ಯೋಜನೆ ತಯಾರಿಸಿಕೊಂಡು ಖಾಸಗಿ ವೈದ್ಯಕೀಯ ಮೆಡಿಕಲ್ ಕಾಲೇಜುಗಳ ಸಹಕಾರವನ್ನು ಕೂಡಾ ಪಡೆಯಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆಯಿಂದ ಸಿದ್ಧತೆಗಳು ನಡೆಯುತ್ತಿವೆ ಎಂದು ಡಾ. ಎಚ್.ಆರ್. ತಿಮ್ಮಯ್ಯ ಅವರು ವಿವರ ನೀಡಿದರು. ಸ್ತನ ಮತ್ತು ಗರ್ಭ ಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮಹಿಳೆಯರನ್ನು ಬಹುವಾಗಿ ಕಾಡುತ್ತಿರುವ ಸ್ತನ ಮತ್ತು ಗರ್ಭ ಕಂಠದ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವ ಅಗತ್ಯವಿದ್ದು, ಲಭ್ಯ ಇರುವ ತಂತ್ರಜ್ಞಾನ ಬಳಸಿಕೊಂಡು ಕ್ಯಾನ್ಸರ್ ಸ್ಕ್ರೀನಿಂಗ್ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುತ್ತಿದೆ ಎಂದು ಅವರು ಈ ಸಂದರ್ಭ ತಿಳಿಸಿದರು.
ಹೆಣ್ಮು ಮಕ್ಕಳು ಸ್ವಯಂ ಸ್ತನ ತಪಾಸಣೆ ಮಾಡಿಕೊಳ್ಳುವ ಮೂಲಕ ಸ್ತನ ಕ್ಯಾನ್ಸರ್ನ ಲಕ್ಷಣಗಳನ್ನು ಆರಂಭದಲ್ಲಿಯೇ ಪತ್ತೆಹಚ್ಚಿ ಚಿಕಿತ್ಸೆ ಒದಗಿಸುವ ಮೂಲಕ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿದೆ. ಸ್ತನದಲ್ಲಿ ಗಡ್ಡೆ, ಮೊಲೆ ತೊಟ್ಟಿನಿಂದ ನೀರು, ರಕ್ತ ಸೋರಿಕೆ, ಆಕಾರದಲ್ಲಿ ಬದಲಾವಣೆ ಕಂಡು ಬಂದಾಗ ವೈದ್ಯರ ಬಳಿ ತಪಾಸಣೆ ನಡೆಸಲು ಮುಂದಾಗಬೇಕು ಎಂದು ಅವರು ಹೇಳಿದರು.
ಗರ್ಭಕಂಠದ ಕ್ಯಾನ್ಸರ್ ಮಹಿಳೆಯರಲ್ಲಿ ಹೆಚ್ಚಾಗಿ ಕಾಣುವ ಕ್ಯಾನ್ಸರ್ ಆಗಿದ್ದು, ಎಚ್ಪಿವಿ ವೈರಸ್ ಇನ್ಫೆಕ್ಸನ್ ಸೋಂಕಿನಿಂದ ಬರುವಂತದ್ದು. ವೈರಸ್ ಸೋಂಕು ಬಂದು ೧೦ರಿಂದ ೧೫ ವರ್ಷಗಳ ನಂತರವೂ ಇದು ಕ್ಯಾನ್ಸರ್ ರೂಪ ಪಡೆಯಬಹುದಾಗಿರುವುದರಿಂದ ಆರಂಭದಲ್ಲಿಯೇ ಪತ್ತೆ ಹಚ್ಚಿ ತಡೆಯಬಹುದು. ಬಿಳಿ ಸ್ರಾವ, ರಕ್ತಸ್ರಾವ, ಮುಟ್ಟಿನ ನಡುವೆ ರಕ್ತಸ್ರಾವ, ಸಂಭೋಗದ ನಂತರ ರಕ್ತಸ್ರಾವ ದುರ್ವಾಸನೆಯ ಸ್ರಾವ ಇದ್ದಾಗ ನಿರ್ಲಕ್ಷ್ಯ ವಹಿಸದೆ ವೈದ್ಯರಿಂದ ಸೂಕ್ತ ತಪಾಸಣೆ ನಡೆಸುವುದು ಸೂಕ್ತ ಎಂದು ಅವರು ಸಲಹೆ ನೀಡಿದರು.