ಹಿರಿಯ ವಿಜ್ಞಾನಿ, ಸಂಶೋಧಕ, ಸಾಹಿತಿ ಡಾ. ವ್ಯಾಸರಾವ್ ನಿಂಜೂರು ನಿಧನ

ಹಿರಿಯ ವಿಜ್ಞಾನಿ, ಸಂಶೋಧಕ, ಸಾಹಿತಿ ಡಾ. ವ್ಯಾಸರಾವ್ ನಿಂಜೂರು ನಿಧನ


ಮಂಗಳೂರು: ಹಿರಿಯ ವಿಜ್ಞಾನಿ, ಸಂಶೋಧಕ, ಸಾಹಿತಿ, ಕಾದಂಬರಿಕಾರ, ಭಾಷಾಂತರ ತಜ್ಞ, ನಾಟಕಕಾರ, ಸಾಹಿತ್ಯ ಸಂಘಟಕ ಮೂಲತಃ ಉಡುಪಿ ತೆಂಕನಿಡಿಯೂರಿನವರಾದ, ಪ್ರಸ್ತುತ ಮುಂಬೈಯಲ್ಲಿ ವಾಸವಾಗಿದ್ದ ಡಾ. ವ್ಯಾಸರಾವ್ ನಿಂಜೂರು (86) ಅಲ್ಪ ಕಾಲದ ಅಸೌಖ್ಯದಿಂದ ಮುಂಬೈನ ಚೆಂಬೂರ್‌ನ ದೇವನಾರ್‌ನಲ್ಲಿರುವ ಸ್ವಗೃಹದಲ್ಲಿ ನ.2 ರಂದು ನಿಧನ ಹೊಂದಿದರು.

ಡಾ.ಶಿವರಾಮ ಕಾರಂತ, ಗೌರೀಶ್ ಕಾಯ್ಕಿಣಿ, ಸದಾನಂದ ಸುವರ್ಣ, ಬಿ.ಎ. ಸನದಿ, ಪಾಟೀಲ ಪುಟ್ಟಪ್ಪ, ಸಂತೋಷ್ ಕುಮಾರ್ ಗುಲ್ವಾಡಿ, ವ್ಯಾಸರಾಯ ಬಲ್ಲಾಳ, ಕು.ಶಿ. ಹರಿದಾಸ ಭಟ್, ಕೆರೆಮನೆ ಶಂಭು ಹೆಗಡೆ, ಉದ್ಯಾವರ ಮಾಧವ ಆಚಾರ್ಯ, ಎಚ್.ಬಿ.ಎಲ್ ರಾವ್, ಡುಂಡಿರಾಜ್ ಹೀಗೆ ಸಾಹಿತ್ಯ ಲೋಕದ ಅನೇಕ ಗಣ್ಯರ ಸಖ್ಯವನ್ನು ಹೊಂದಿದ್ದ ಡಾ.ನಿಂಜೂರು ಮುಂಬೈಯ ಟ್ರಾಂಬೆ, ಬಾಬಾ ಪರಮಾಣು ಸಂಶೋಧನಾ ಕೇಂದ್ರದ ಬಯೋ ಕೆಮಿಸ್ಟ್ರಿ ಮತ್ತು ಆಹಾರ ತಂತ್ರಜ್ಞಾನ ವಿಭಾಗದ ಶಾಖೆಯ ಪ್ರಮುಖ ಹುದ್ದೆಯನ್ನು ನಿರ್ವಹಿಸಿದ್ದರು. ಪ್ರಸಿದ್ಧ ಮಾಸ ಪತ್ರಿಕೆ ಗೋಕುಲ ವಾಣಿಯ ಸಂಪಾದಕರಾಗಿ ತಮ್ಮ ಅಂತಿಮ ದಿನಗಳ ವರೆಗೂ ದುಡಿದಿದ್ದರು.

ಇವರು ಬರೆದಿರುವ ವೈಜ್ಞಾನಿಕ ಲೇಖನಗಳು ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, 87 ಸಂಶೋಧನಾ ಪ್ರಬಂಧಗಳೂ ಪ್ರಕಟವಾಗಿವೆ. ‘ಚಾಮುಂಡೇಶ್ವರಿ ಭವನ’ ‘ಉಸಿರು’ ‘ತೆಂಕನಿಡಿಯೂರಿನ ಕುಳವಾರಿಗಳು’ ಎಂಬ ಕಾದಂಬರಿಗಳನ್ನೂ ರಚಿಸಿರುವರು.

ತನ್ನ ಸಾಹಿತ್ಯ ಸೇವೆಯ ಮೂಲಕ ಮುಂಬೈಯ ಸಾಹಿತ್ಯ ಪರಂಪರೆಗೆ ಶಕ್ತಿಯನ್ನು ತುಂಬಿದ್ದರು. ಅವರ ಸಾಧನೆಗಾಗಿ ತ್ರಿವೇಣಿ ಸ್ಮಾರಕ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಫೆಲೋಶಿಪ್, ಕರ್ನಾಟಕ ಶ್ರೀ, ನುಡಿಸಿರಿ, ಪೇಜಾವರ ಶ್ರೀ ಜೀವಮಾನ ಸಾಧನಾ ಪ್ರಶಸ್ತಿ ಹೀಗೆ ಹತ್ತು ಹಲವು ಪ್ರಶಸ್ತಿಗಳು ಲಭಿಸಿವೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article