ಸೋಮನಾಥ ಪುತ್ರನ್ ಆತ್ಮಹತ್ಯೆ ಪ್ರಕರಣ: ನ್ಯಾಯಾಂಗ ತನಿಖೆ, ಎರಡು ಕೋಟಿ ಪರಿಹಾರಕ್ಕೆ ಆಗ್ರಹ

ಸೋಮನಾಥ ಪುತ್ರನ್ ಆತ್ಮಹತ್ಯೆ ಪ್ರಕರಣ: ನ್ಯಾಯಾಂಗ ತನಿಖೆ, ಎರಡು ಕೋಟಿ ಪರಿಹಾರಕ್ಕೆ ಆಗ್ರಹ


ಮಂಗಳೂರು: ಮೀನುಗಾರ ಸಮುದಾಯದ ಸೋಮನಾಥ ಪುತ್ರನ್ ಅವರ ಆತ್ಮಹತ್ಯೆಗೆ ಸುರತ್ಕಲ್ ಪೊಲೀಸ್ ಠಾಣೆಯ ಪೊಲೀಸ ದೌರ್ಜನ್ಯ ಕಾರಣ ಎಂದು ಆರೋಪಿಸುವ ದ.ಕ.ಮೊಗವೀರ ಸಂಯುಕ್ತ ಸಭಾ, ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ವಿರುದ್ಧ ಬಿಎನ್‌ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಅಮಾನತು ಮಾಡಬೇಕು ಎಂದು ಆಗ್ರಹಿಸಿದೆ.

ಮಂಗಳೂರು ಉರ್ವಾ ಮಾರಿಗುಡಿ ದೇವಸ್ಥಾನದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಈ ಆರೋಪ ಮಾಡಿದ ಸಂಯುಕ್ತ ಸಭಾದ ಅಧ್ಯಕ್ಷ ಭರತ್ ಉಳ್ಳಾಲ್, ಮೃತರು ಕುಟುಂಬದ ಏಕೈಕ ದುಡಿಯುವ ವ್ಯಕ್ತಿಯಾಗಿದ್ದು, ಅಪರಾ ಹಿನ್ನೆಲೆ ಹೊಂದದ ವ್ಯಕ್ತಿ. ಈ ಪ್ರಕರಣದ ಸೂಕ್ತ ನ್ಯಾಯಾಂಗ ತನಿಖೆ ನಡೆಸಲು ಒತ್ತಾಯಿಸಿ ಮುಖ್ಯಮಂತ್ರಿ, ಗೃಹ ಹಾಗೂ ಉಸ್ತುವಾರಿ ಸಚಿವರು, ಹಾಗೂ ಮಾನವ ಹಕ್ಕುಗಳ ಆಯೋಗಕ್ಕೆ ಮನವಿ ಸಲ್ಲಿಸುವುದಾಗಿ ಹೇಳಿದರು. 

ಸೋಮನಾಥ್ ಪುತ್ರನ್ರವರ ಪತ್ನಿ ತನ್ನ ಪತಿ ಆತ್ಮಹತ್ಯೆಗೆ ಕಾರಣವಾದ ಜೋಡಿ ವಿರುದ್ಧ ದೂರು ನೀಡಿದ್ದರೂ ಈವರೆಗೆ ಬಂಧಿಸಿಲ್ಲ. ಪ್ರಕರಣದ ಜೋಡಿಯ ಹೆಸರನ್ನು ಎಫ್‌ಐಆರ್‌ನಲ್ಲಿ ನಮೂದಿಸದೆ ಇರುವುದು ಅನುಮಾನ ತಂದಿದೆ. ಪೊಲೀಸ್ ಇಲಾಖೆಯಿಂದ ತನಿಖೆ ನಿಷ್ಪಕ್ಷಪಾತವಾಗಿ ನಡೆಯಲು ಸಾಧ್ಯವಿಲ್ಲದ ಕಾರಣ, ನಿವೃತ್ತ/ಹಾಲಿ ಜಿಲ್ಲಾ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ಅಥವಾ ಇಐಈ ತನಿಖೆ ನಡೆಸಬೇಕು ಮತ್ತು 30 ದಿನದೊಳಗೆ ವರದಿ ಸಾರ್ವಜನಿಕಗೊಳಿಸಬೇಕು. ಪೊಲೀಸ್ ಠಾಣೆಯ ಸಿಸಿಟಿವಿ ದೃಶ್ಯಾವಳಿ, ಜನರಲ್ ಡೈರಿ ಹಾಗೂ ದಾಖಲೆಗಳನ್ನು ಕೂಡಲೇ ವಶಪಡಿಸಿಕೊಳ್ಳಬೇಕು. ಮೃತ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ೨ ಕೋಟಿ ರೂ. ಪರಿಹಾರ ನೀಡಬೇಕು. ಮೃತರ ಪತ್ನಿಗೆ ಅನುಕಂಪದ ಆಧಾರದ ಮೇಲೆ ಸರಕಾರಿ ನೌಕರಿ ನೀಡಬೇಕು. ಮೃತರ ಮಕ್ಕಳ ಸಂಪೂರ್ಣ ಶಿಕ್ಷಣದ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಬೇಕು ಎಂದು ಬೇಡಿಕೆಗಳನ್ನು ಮೊಗವೀರ ಸಂಯುಕ್ತ ಸಭಾ ಸರಕಾರದ ಮುಂದಿಟ್ಟಿರುವುದಾಗಿ ಅವರು ಹೇಳಿದರು. 

ಸಾಕ್ಷಿದಾರರು ಮತ್ತು ಮೃತ ಕುಟುಂಬದವರ ಮೇಲೆ ಯಾವುದೇ ಸುಳ್ಳು, ಪ್ರಕರಣ ದಾಖಲಿಸುವುದಿಲ್ಲ ಎಂಬ ಭರವಸೆ, ಈ ಪ್ರಕರಣದ ಬಗ್ಗೆ ಪೊಲೀಸರಿಗೆ ನಿರ್ದೇಶನ ನೀಡಿದ ಉನ್ನತಾಧಿಕಾರಿಯ ವಿರುದ್ಧ ಇಲಾಖಾ ಕ್ರಮ ಹಾಗೂ ಕರಾವಳಿಯ ಪೊಲೀಸ್ ಠಾಣೆಗಳಲ್ಲಿ ಮೀನುಗಾರರ ರಕ್ಷಣಾ ಕೋಶ ರಚಿಸಿ, ಪೊಲೀಸರಿಗೆ ಮೀನುಗಾರರೊಂದಿಗೆ ವ್ಯವಹರಿಸುವ ಬಗ್ಗೆ ತರಬೇತಿ ನೀಡಬೇಕು ಎಂದು  ಒತ್ತಾಯಿಸಿದರು. 

‘ರಾತ್ರಿ ಹೊತ್ತಿನಲ್ಲಿ ಸುರತ್ಕಲ್ ಬೀಚ್‌ನಿಂದ ದೂರವಿರುವ ಸೋಮನಾಥ ಅವರ ಮನೆಯ ಸಮೀಪದಲ್ಲಿ ಜೋಡಿಯೊಂದು ಅನುಚಿತವಾಗಿ ವರ್ತಿಸಿದ್ದ ಬಗ್ಗೆ ಪ್ರಶ್ನಿಸಿದ್ದಾರೆ. ಸೋಮನಾಥ ಅವರು ಮದ್ಯ ಸೇವನೆ ಮಾಡಿರುವುದನ್ನು ಪತ್ತೆ ಹಚ್ಚಿರುವ ಪೊಲೀಸರು ಯುವತಿ ಡ್ರಗ್ಸ್ ಸೇವನೆ ಮಾಡಿದ್ದರೇ ಎಂಬುದನ್ನು ಪರಿಶೀಲನೆ ಮಾಡಿದ್ದಾರೆಯೇ? ಆಕೆ ದಿಲ್ಲಿಯಿಂದ ಡ್ರಗ್ಸ್ ಮಾರಾಟ ಮಾಡಲು ಬಂದಿರುವ ಅನುಮಾನ ನಮಗಿದೆ’ ಎಂದು ಆರೋಪಿಸಿದ ಭರತ್ ಉಳ್ಳಾಲ್, ಸೋಮನಾಥ ಪುತ್ರನ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮೀನುಗಾರ ಸಮುದಾಯದ ಪ್ರಮುಖ ಐದು ಬೇಡಿಕೆಗಳನ್ನು 47 ಗಂಟೆಯೊಳಗೆ ಈಡೇರಿಸದಿದ್ದರೆ, ಕರಾವಳಿಯ ಮೀನುಗಾರ ಸಮುದಾಯ ಎಂಆರ್‌ಪಿಎಲ್ ವಿರುದ್ಧ ನಡೆದ ಪ್ರತಿಭಟನೆಗಿಂತ ತೀವ್ರವಾಗಿ ಪ್ರತಿಭಟನೆ ನಡೆಸಲಿದೆ’ಎಂದು ಎಚ್ಚರಿಸಿದರು. 

ಮೀನುಗಾರ ಮುಖಂಡ ಯತೀಶ್ ಬೈಕಂಪಾಡಿ ಮಾತನಾಡಿ,  ‘ಕರಾವಳಿಯ ಭದ್ರತೆಗೆ ಸಂಬಂಧಿಸಿ ಮೀನುಗಾರ ಸಮುದಾಯ ರಕ್ಷಣಾ ಕವಚವಾಗಿ ಕಾರ್ಯ ನಿರ್ವಹಿಸುತ್ತಿದೆ. ಅಂತಹ ಮೀನುಗಾರ ಸಮುದಾಯ ವ್ಯಕ್ತಿಯೊಬ್ಬರಿಗೆ ಪೊಲೀಸರಿಂದ ಅನ್ಯಾಯವಾಗಿದೆ. ಈ ಬಗ್ಗೆ ಸಮರ್ಪಕ ನ್ಯಾಯಾಂಗ ತನಿಖೆ ಆಗಲಿ ಎಂಬುದು ನಮ್ಮ ಆಗ್ರಹ. ಸೋಮನಾಥ ಅವರ ತಪ್ಪಿದ್ದರೆ ನಾವು ಹೋರಾಟ ನಿಲ್ಲಿಸುತ್ತೇವೆ. ಇಲ್ಲವಾದಲ್ಲಿ ಈ ಹೋರಾಟ ಉಗ್ರ ರೂಪದಲ್ಲಿ ಮುಂದುವರಿಯಲಿದೆ’ ಎಂದರು.

ಮೀನುಗಾರ ಸಮುದಾಯದ ವಿವಿಧ ಸಂಘಟನೆಗಳ ಮುಖಂಡರಾದ ಜಯ ಸಿ. ಕೋಟ್ಯಾನ್, ಶರಣ್, ಉದಯ್ ಕುಮಾರ್, ಚಂದ್ರಕಾಂತ್, ವಿನಯ್ ಸೇರಿದಂತೆ ಇತರ ಅನೇಕರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article